ಹೆಚ್ಚುವರಿ 10 ಲಕ್ಷ ರೈತರಿಗೆ ಸಾಲ ಸೌಲಭ್ಯ
ಮೈಸೂರು

ಹೆಚ್ಚುವರಿ 10 ಲಕ್ಷ ರೈತರಿಗೆ ಸಾಲ ಸೌಲಭ್ಯ

October 28, 2018

ಬೆಂಗಳೂರು: ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಿದ ರಾಜ್ಯ ಸರ್ಕಾರ ಇದೀಗ 10 ಲಕ್ಷ ರೈತರಿಗೆ ಹೊಸದಾಗಿ ಏಳರಿಂದ ಎಂಟು ಸಾವಿರ ಕೋಟಿ ರೂ. ಸಾಲ ವಿತರಿಸಲಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಇಂದಿಲ್ಲಿ ಪ್ರಕಟಿಸಿದ್ದಾರೆ.

ರೈತರಿಗೆ ಸಹಕಾರ ನೀಡುವುದರ ಜೊತೆಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ `ಬಡವರ ಬಂಧು’ ಯೋಜನೆ ಅನುಷ್ಠಾನ ಗೊಳ್ಳಲಿದೆ. ರಾಜ್ಯದಲ್ಲಿ 78 ಲಕ್ಷ ರೈತ ಕುಟುಂಬಗಳಿ ದ್ದರೂ ಇದುವರೆಗೂ ಕೇವಲ 22 ಲಕ್ಷ ರೈತರಿಗೆ ಮಾತ್ರ ಸಹಕಾರಿ ಬಾಂಕ್ ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಉಳಿದವರಿಗೆ ಸಾಲ ಸೌಲಭ್ಯವೇ ದೊರೆತಿಲ್ಲ. ಸಾಲ ಪಡೆದವರೇ ಮತ್ತೆ ಮತ್ತೆ ಸರ್ಕಾರದ ರಿಯಾಯಿತಿ ಮತ್ತು ಸಾಲ ಮನ್ನಾ ಯೋಜನೆ ಗಳ ಲಾಭ ಪಡೆಯುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಬೆಳೆ ಸಾಲ ಮನ್ನಾ ಮಾಡಿದ ನಂತರ ಹೊಸದಾಗಿ ರೈತರು ಕೃಷಿ ಪತ್ತಿನ ಬ್ಯಾಂಕ್‍ಗಳಲ್ಲಿ ಹೊಸ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದ ರಲ್ಲಿ ಒಂದು ಭಾಗವಾಗಿ ಹಾಲಿ ರೈತರ ಲ್ಲದೆ, ಹೊಸದಾಗಿ 10 ಲಕ್ಷ ಕುಟುಂಬ ಗಳಿಗೆ ಸಾಲ ವಿತರಿಸುವಂತೆ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

ನಬಾರ್ಡ್ ಸಹಕಾರ ಪಡೆದು 8,000 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಮುಂದಿನ ಹಂಗಾಮಿಗೆ ಬೆಳೆ ಸಾಲ ನೀಡುವುದಾಗಿ ತಿಳಿಸಿದರು. ಸಹಕಾರಿ ಸಂಸ್ಥೆಗಳಲ್ಲಿ ಆಗಿರುವ ಬೆಳೆ ಸಾಲ ಮನ್ನಾದ ಋಣಮುಕ್ತ ಪತ್ರವನ್ನು ರೈತರಿಗೆ ಮುಂದಿನ ತಿಂಗಳಿ ನಿಂದ ವಿತರಿಸಲು ಪ್ರಾರಂಭಿಸಲಾಗುವುದು. ಇದಕ್ಕೂ ಮುನ್ನ 10 ಲಕ್ಷ ಫಲಾನುಭವಿ ಗಳನ್ನು ಸೇರಿಸಿ ಬೃಹತ್ ಸಮಾವೇಶ ಮಾಡುವುದಲ್ಲದೆ, ಅಲ್ಲಿಯೇ ಋಣಮುಕ್ತ ಪತ್ರವನ್ನೂ ವಿತರಿಸಲಾಗುವುದು ಎಂದರು. ಮೀಟರ್ ಬಡ್ಡಿ ದಂಧೆ ತಡೆಯಲು ಬಡವರ ಬಂಧು ಯೋಜನೆ ರಾಜ್ಯದ ಎಲ್ಲಾ ಪಾಲಿಕೆ, ಪಟ್ಟಣ ಕೇಂದ್ರಗಳಲ್ಲಿ ದೀಪದ ಹಬ್ಬದ ದಿನದಂದು ಜಾರಿಗೆ ಬರಲಿದೆ. ಶೂನ್ಯ ಬಡ್ಡಿ ದರದಲ್ಲಿ ಸಣ್ಣ ವ್ಯಾಪಾರಸ್ಥರು ಯಾವುದೇ ದಾಖಲೆ ನೀಡದೆ ತಮ್ಮ ಗುರುತಿನ ಚೀಟಿ ನೀಡಿ ಎರಡರಿಂದ 10 ಸಾವಿರ ರೂ.ವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ.

ಇದಕ್ಕಾಗಿ 53 ಕೋಟಿ ರೂ. ಮೀಸಲಿರಿಸಿದ್ದು, ಬೆಂಗಳೂರು, ಮೈಸೂರು, ದಾವಣ ಗೆರೆ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಎಲ್ಲಾ ಪಾಲಿಕೆ ಹಾಗೂ ನಗರ-ಪುರಸಭೆಗಳ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ಬರಲಿದೆ. ಜಿಲ್ಲಾ, ತಾಲೂಕು ಸಹಕಾರಿ ಬ್ಯಾಂಕ್‍ಗಳ ಮೂಲಕವೇ 50,000 ಸಣ್ಣ ವ್ಯಾಪಾರಸ್ಥರಿಗೆ ಮೊದಲ ಹಂತದಲ್ಲಿ ಸಾಲ ವಿತರಿಸಲಾಗುವುದು. ನೋಡಲ್ ವ್ಯವಸ್ಥೆ ಮೂಲಕ ಈ ಯೋಜನೆ ಜಾರಿಗೆ ಬರಲಿದೆ, ವ್ಯಾಪಾರಸ್ಥರು ಬೆಳಗ್ಗೆ ಸಾಲ ಪಡೆದು, ಸಂಜೆ ವೇಳೆಗೆ ಮರು ಪಾವತಿಸಬಹುದು, ಇಲ್ಲವೇ 90 ದಿನಗಳೊಳಗಾಗಿ ಕಂತಿನ ಆಧಾರದಲ್ಲಿ ಪಾವತಿಸಲು ಅವಕಾಶ ಇರುತ್ತದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು. ಮುಕ್ತ ಮಾರುಕಟ್ಟೆ ಮಧ್ಯಪ್ರವೇಶಿಸಿ, ಬೆಂಬಲ ಬೆಲೆಗೆ ಉದ್ದು ಮತ್ತು ಸೊಯಾಬೀನ್ ಕಾಳುಗಳ ಖರೀದಿಗೆ ನಾಳೆಯಿಂದಲೇ ಚಾಲನೆ ನೀಡಲಾಗುವುದು.

Translate »