ಹೆಚ್ಚುವರಿ 10 ಲಕ್ಷ ರೈತರಿಗೆ ತಲಾ 30 ಸಾವಿರ ರೂ. ಬೆಳೆ ಸಾಲ
ಮೈಸೂರು

ಹೆಚ್ಚುವರಿ 10 ಲಕ್ಷ ರೈತರಿಗೆ ತಲಾ 30 ಸಾವಿರ ರೂ. ಬೆಳೆ ಸಾಲ

June 25, 2019

ಬೆಂಗಳೂರು: ಕನಿಷ್ಠ 30,000 ರೂ.ನಂತೆ 10 ಲಕ್ಷ ರೈತರಿಗೆ ಹೊಸ ದಾಗಿ ಬೆಳೆ ಸಾಲ ನೀಡಲು 3,000 ಕೋಟಿ ರೂ. ಹೆಚ್ಚುವರಿ ನೀಡುವುದಾಗಿ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‍ಗಳು ಇದುವರೆಗೆ 22 ಲಕ್ಷ ರೈತ ರಿಗೆ 10,000 ಕೋಟಿ ರೂ. ಬೆಳೆ ಸಾಲ ನೀಡುತ್ತಿವೆ. ಇದುವರೆಗೂ ಸಾಲ ಪಡೆದ ರೈತರೇ ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಹೊಸಬರಿಗೆ ಅವಕಾಶವೇ ದೊರೆಯು ತ್ತಿಲ್ಲ. ಇದರ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ. ಸಹಕಾರಿ ಸಂಘಗಳಿಗೆ ಸದಸ್ಯರಾಗದ ರೈತರಿಗೆ ಹೊಸದಾಗಿ ಸದಸ್ಯತ್ವ ನೀಡಿ ಕನಿಷ್ಠ 30,000 ರೂ. ಬೆಳೆ ಸಾಲ ಒದಗಿಸಲು ಸರ್ಕಾರ ಮುಂದಾಗಿದೆ.

ಹೆಚ್ಚುವರಿ ಹಣ ಕ್ರೋಢೀಕರಣಕ್ಕೆ ಶೇಕಡ 50ರಷ್ಟು ಹಣವನ್ನು ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಠೇವಣಿ ಮೂಲಕ ಸಂಗ್ರಹಿಸಬೇಕು, ಉಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸುವ ಬಗ್ಗೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗುವುದು ಎಂದರು.

ಕೃಷಿ ಸಾಲ ನೀಡಿಕೆಯ ಪ್ರಮಾಣ ತಲಾ 46,000 ಸಾವಿರ ರೂ.ಗಳಷ್ಟಿದ್ದು ಈಗ ಹೊಸತಾಗಿ ಸೇರ್ಪಡೆಯಾಗುವ ವರಿಗೆ ಕನಿಷ್ಠ 30,000 ರೂ.ಗಳಷ್ಟು ಕೃಷಿ ಸಾಲ ಲಭ್ಯವಾಗುವಂತೆ ನೋಡಿಕೊಳ್ಳಲಾಗು ವುದು ಎಂದರು. ಸಹಕಾರ ಸಂಘಗಳಲ್ಲಿ ರೈತರ ಕೃಷಿ ಸಾಲ ಮನ್ನಾ ಕಾರ್ಯ ಮುಂದಿನ ಒಂದು ವಾರದಲ್ಲಿ ಪೂರ್ಣವಾಗಲಿದೆ ಎಂದು ಇದೇ ಸಂದರ್ಭದಲ್ಲಿ ನುಡಿದ ಅವರು, ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ ಸಕಾಲಕ್ಕೆ ಸಾಲ ಮನ್ನಾ ಯೋಜನೆಯ ಸೌಲಭ್ಯ ಲಭ್ಯವಾಗದಿದ್ದರೂ ಆತಂಕಪಡುವುದು ಬೇಡ ಎಂದು ಹೇಳಿದರು. ಇಂತಹ ರೈತರ ಸ್ಥಳಕ್ಕೇ ಹೋಗಿ ಭೇಟಿ ಮಾಡಿ ಎಂದು ಸಹಕಾರ ಇಲಾಖೆಯ ಜಂಟಿ ರಿಜಿಸ್ಟ್ರಾರ್‍ಗಳಿಗೆ ಸೂಚನೆ ನೀಡಲಾಗಿದೆ, ಸದ್ಯದ ಮಾಹಿತಿಯ ಪ್ರಕಾರ ಇಂತಹ 1.36 ಲಕ್ಷ ರೈತರು ಇದ್ದಾರೆ ಎಂದರು.

ಕಾಯಕ ಯೋಜನೆಯಲ್ಲಿ ಮಹಿಳೆಯರಿಗೆ, ಅದರಲ್ಲೂ ಸ್ವಸಹಾಯ ಗುಂಪುಗಳಿಗೆ ತಲಾ 5 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಈ ಬಾರಿ 246 ವ್ಯಕ್ತಿಗಳು, ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದರು. ರೈತರ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳಿಗೆ ಸಾಲ ನೀಡಲು ಹಣಕಾಸಿನ ಮುಗ್ಗಟ್ಟು ಸ್ವಲ್ಪ ಮಟ್ಟಿಗೆ ಎದುರಾಗಲು ನಬಾರ್ಡ್ ನೀತಿಯೇ ಕಾರಣವಾಗಿದ್ದು, ಈ ಮೊದಲು ರಾಜ್ಯಕ್ಕೆ ಶೇಕಡಾ 65 ರಿಂದ 70 ರಷ್ಟು ಸಾಲ ನೀಡುತ್ತಿದ್ದ ನಬಾರ್ಡ್ ಇದೀಗ ಶೇಕಡಾ 40ಕ್ಕೆ ಇಳಿಸಿದೆ ಎಂದರು. ನಬಾರ್ಡ್ ವತಿಯಿಂದ ನೀಡಲಾಗುತ್ತಿದ್ದ ಹಣಕಾಸಿನ ನೆರವಿನ ಪ್ರಮಾಣವನ್ನು ಹೆಚ್ಚಳ ಮಾಡಬೇಕು, ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಿಂದ ಸಹಕಾರ ಇಲಾಖೆಯನ್ನು ಪ್ರತ್ಯೇಕಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.

Translate »