ಮೈಸೂರು: ಕರ್ತವ್ಯದ ಸ್ಥಳ ನಿಯೋಜನೆ (ಪೋಸ್ಟಿಂಗ್)ಗಾಗಿ ಯಾವ ರಾಜಕಾರಣಿಗಳ ಮನೆ ಬಾಗಿಲು ತಟ್ಟಬೇಡಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಶಿಕ್ಷಣಾರ್ಥಿಗಳಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.
ಮೈಸೂರಿನ ಕೆಪಿಎ ಮೈದಾನದಲ್ಲಿ ನಡೆದ ಡಿವೈಎಸ್‍ಪಿ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಒಂದು ವರ್ಷದ ಕಠಿಣ ಬುನಾದಿ ತರಬೇತಿ ಪಡೆದು ಪ್ರಮಾಣವಚನ ಸ್ವೀಕರಿಸಿ ರುವ ನೀವು ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯ ಪಡೆದಿದ್ದೀರಿ. ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಕಾನೂನು ರಕ್ಷಣೆ ಮಾಡಿ ಎಂದರು. ಯಾವುದೇ ಒತ್ತಡ, ಮುಲಾಜಿಗೆ ಒಳ ಗಾಗಬೇಡಿ. ಸ್ಥಳ ನಿಗದಿಪಡಿಸಿಕೊಳ್ಳಲು ಯಾವ ರಾಜಕಾರಣಿಗಳ ಮನೆ ಬಾಗಿಲಿಗೆ ಹೋಗಬೇಡಿ. ನಿಮ್ಮಲ್ಲಿ ಶ್ರದ್ಧೆ, ನಿಷ್ಠೆ, ಸಾಮಥ್ರ್ಯ ವಿದ್ದರೆ ಸರ್ಕಾರ, ಜನಪ್ರತಿನಿಧಿಗಳು ನಿಮಗೆ ತೊಂದರೆ ಕೊಡು ವುದಿಲ್ಲ ಎಂದ ಮುಖ್ಯಮಂತ್ರಿಗಳು,
ಯಾವುದೇ ಸಂದರ್ಭದಲ್ಲೂ, ಎಂತಹ ಕ್ಲಿಷ್ಟ ಪ್ರಕರಣಗಳು ಎದುರಾದರೂ ಧೃತಿಗೆಡದೆ ಧೈರ್ಯವಾಗಿ ಎದುರಿಸಿ ಎಂದು ಸಲಹೆ ನೀಡಿದರು. ಕಾನೂನು ಬಾಹಿರ ಚಟುವಟಿಕೆ ಗಳಲ್ಲಿ ಭಾಗಿಯಾದವರನ್ನು ಎಂತಹ ಒತ್ತಡ ಬಂದರೂ ಮಣಿಯದೆ ಬಗ್ಗುಬಡಿಯುತ್ತೇನೆಂಬ ಸಂಕಲ್ಪವನ್ನು ಈ ಮೈದಾನದಲ್ಲೇ ಮಾಡಿ. ಸರ್ಕಾರ ಬರುತ್ತವೆ-ಹೋಗುತ್ತವೆ, ಸಿಎಂ ಬರ್ತಾರೆ-ಹೋಗ್ತಾರೆ, ಜನಪ್ರತಿನಿಧಿಗಳು ಬರ್ತಾರೆ-ಹೋಗ್ತಾರೆ, ನೀವು ಮಾತ್ರ ಸುದೀರ್ಘ ಸೇವೆಯಲ್ಲಿರುತ್ತೀರಿ. ನಾಡಿನ ಜನರ ರಕ್ಷಣೆ, ಸುಭದ್ರ ವಾತಾವರಣ ನಿರ್ಮಿಸಿ ಪೊಲೀಸ್ ವ್ಯವಸ್ಥೆ ಬಗ್ಗೆ ನಾಗರಿಕರಲ್ಲಿ ವಿಶ್ವಾಸ ಮೂಡಿಸಿ ಎಂದು ಕುಮಾರಸ್ವಾಮಿ ನುಡಿದರು. ನೀವು ಕರ್ತವ್ಯಲೋಪ ಎಸಗದೆ ಕೆಲಸ ಮಾಡಿದರೆ, ರಾಜ್ಯ ಶಾಂತಿ-ಸುಭೀಕ್ಷವಾಗಿರುತ್ತದೆ. ಹಿಂಸೆ ಇಲ್ಲದ ಸಮಾಜ ನಿರ್ಮಿಸುತ್ತೇವೆಂಬ ಆತ್ಮವಿಶ್ವಾಸ ಮೂಡಿಸಿಕೊಳ್ಳಿ ಎಂದ ಸಿಎಂ, ನಾನು ಮುಖ್ಯಮಂತ್ರಿಯಾಗಿರುವವರೆಗೂ ನಾನು ನಿಮಗೆ ಸಹಕಾರ ನೀಡುತ್ತೇನೆ. ಅದೇ ರೀತಿ ನಿಮ್ಮಿಂದ ಉತ್ತಮ ಕೆಲಸ ನಿರೀಕ್ಷಿಸುತ್ತೇನೆ ಅಷ್ಟೇ ಎಂದರು.