ಮಡಿಕೇರಿ: ಕಾಫೀ ತೋಟದಲ್ಲಿ ಉರುಳು ಬಳಸಿ ಕಾಡು ಕುರಿ ಯನ್ನು ಭೇಟಿಯಾಡಿದ್ದ ಆರೋಪಿಯನ್ನು ಮಡಿಕೇರಿ ಉಪವಲಯ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರ್ನಾಡು ಸಮೀಪದ ಕುಂಬಳದಾಳು ನಿವಾಸಿ ಕೆ.ಹೇಮಂತ್ (36) ಬಂಧಿತ ಆರೋಪಿಯಾಗಿದ್ದಾನೆ. ಅ.26ರ ರಾತ್ರಿ ಕುಂಬಳದಾಳುವಿನ ಪಿ.ವಾಸು ಮತ್ತು ದಿನೇಶ್ ಎಂಬುವರಿಗೆ ಸೇರಿದ ಅಡಿಕೆ ಮತ್ತು ಕಾಫಿ ತೋಟದಲ್ಲಿ ಆರೋಪಿ ಹೇಮಂತ್ ಕಾಡು ಪ್ರಾಣಿಯ ಬೇಟೆಗೆಂದು ಉರುಳು ಹಾಕಿದ್ದ. ಈ ಉರುಳಿನಲ್ಲಿ ಕಾಡುಕುರಿ ಸಿಲುಕಿ ಮೃತಪಟ್ಟಿತ್ತು. ಬಳಿಕ ಆರೋಪಿ ಹೇಮಂತ್ ಕಾಡುಕುರಿಯನ್ನು ಮಾಂಸ ಮಾಡಿ ಮನೆಗೆ ಹೊತ್ತೊಯ್ದಿದ್ದ.
ಈ ಕುರಿತು ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಗಳು ಕುಂಬಳದಾಳುವಿನ ಹೇಮಂತ್ ಮನೆಯ ಮೇಲೆ ದಾಳಿ ನಡೆಸಿ ದ್ದರು. ಈ ಸಂದರ್ಭ ಒಟ್ಟು 4 ಕೆಜಿ ಕಾಡು ಕುರಿಯ ಮಾಂಸ ಪತ್ತೆ ಯಾಗಿದೆ. ಆರೋಪಿ ಹೇಮಂತ್‍ನನ್ನು ಬಂಧಿಸಿ ಬೇಟೆಗೆ ಬಳಸಿದ ಉರುಳು, ಮಾಂಸ ಮಾಡಲು ಉಪಯೋಗಿಸಿದ ಕತ್ತಿ ಮತ್ತು ಮರದ ಕುಂಟೆ ಹಾಗೂ ತೋಟದ ತೋಡಿನಲ್ಲಿ ಎಸೆದಿದ್ದ ಕಾಡುಕುರಿಯ ಚರ್ಮ ಮತ್ತು 3 ಕಾಲುಗಳನ್ನು ವಶಕ್ಕೆ ಪಡೆಯಲಾಗಿದೆ.