ಮೈಸೂರಲ್ಲಿ ಪಟಾಕಿ ಅಂಗಡಿಗಳ ಆರಂಭ
ಮೈಸೂರು

ಮೈಸೂರಲ್ಲಿ ಪಟಾಕಿ ಅಂಗಡಿಗಳ ಆರಂಭ

November 5, 2018

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮೈಸೂರಿನ ಜೆ.ಕೆ.ಮೈದಾನ ಸೇರಿದಂತೆ ವಿವಿಧೆಡೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ನ.8ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಪಟಾಕಿ ಮಾರಾಟದ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಟಾಕಿ ಮಾರಾಟ ಮಾಡುವುದಕ್ಕೆ ನಗರಪಾಲಿಕೆ ಕೆಲ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ವಿವಿಧ ಬಡಾವಣೆಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಗ್ರಾಹಕರು ಒಂದೇ ಸ್ಥಳದಲ್ಲಿ ಜಮಾಯಿಸುವುದನ್ನು ತಪ್ಪಿಸಿದಂತಾಗಿದೆ.

ಜೆ.ಕೆ.ಮೈದಾನ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಹಿನಕಲ್, ಬೋಗಾದಿ ರಿಂಗ್ ರಸ್ತೆ, ರಾಮಕೃಷ್ಣನಗರ, ಕುವೆಂಪುನಗರ, ಟಿ.ಕೆ. ಲೇಔಟ್, ಜನತಾನಗರ, ಇಟ್ಟಿಗೆಗೂಡು, ಚಾಮುಂಡಿಪುರಂ, ಕುಂಬಾರ ಕೊಪ್ಪಲು, ಮೇಟಗಳ್ಳಿ, ಕಲ್ಯಾಣಗಿರಿ, ಬಲ್ಲಾಳ್ ಸರ್ಕಲ್, ಬಂದಂತಮ್ಮ ದೇವಾಲಯದ ಬಳಿ ಸೇರಿದಂತೆ ವಿವಿಧೆಡೆ ಮಳಿಗೆಗಳನ್ನು ತೆರೆಯಲಾಗಿದೆ. ಮಳಿಗೆಗಳನ್ನು ತೆರೆಯುವುದಕ್ಕೆ ಅಗ್ನಿಶಾಮಕ ಠಾಣೆ, ಪೊಲೀಸ್ ಇಲಾಖೆ ಹಾಗೂ ಸೆಸ್ಕ್ ನಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದವರಿಗೆ ಮಾತ್ರವೇ ಪಟಾಕಿ ಮಾರಾಟ ಮಳಿಗೆ ಸ್ಥಾಪಿಸಲು ನಗರಪಾಲಿಕೆ ಟ್ರೇಡ್ ಲೈಸೆನ್ಸ್ ವಿತರಿಸಿದೆ.

ಪರಿಸರ ಸ್ನೇಹಿ: ಜೆ.ಕೆ.ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆ ನಡೆಸುತ್ತಿರುವ ಸುರೇಂದ್ರ ಕುಮಾರ್ ಎಂಬುವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಈ ಬಾರಿ 5 ದಿನಗಳ ಕಾಲ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಮಿಳುನಾಡಿನ ಶಿವಕಾಶಿಯಿಂದ ಪಟಾಕಿಗಳನ್ನು ಖರೀದಿಸಿ ತರಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಪಟಾಕಿ ತಯಾರಿಕಾ ಸಂಸ್ಥೆಗಳೇ ಕಡಿಮೆ ಶಬ್ದ ಬರುವಂತಹ ಪಟಾಕಿಗಳನ್ನು ಸಿದ್ಧಪಡಿಸಿವೆ ಎಂದು ಹೇಳಿದರು. ವನಿತಾ ಫೈರ್ ವಕ್ರ್ಸ್ ನಾಲ್ಕು ಹೊಸ ಬಗೆಯ ಪಟಾಕಿಗಳನ್ನು ತಯಾರಿಸಿದ್ದು, ಅವು ಪರಿಸರ ಸ್ನೇಹಿ ಪಟಾಕಿಗಳಾಗಿವೆ.

ಹೆಚ್ಚು ಹೊಗೆ ಮತ್ತು ಶಬ್ದ ಬರದಂತಹ ಈ ಪಟಾಕಿಗಳಿಂದ ಮಕ್ಕಳು ಸೇರಿದಂತೆ ಯಾರೊ ಬ್ರಿಗೂ ತೊಂದರೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಾರಾಟವಾಗುತ್ತೆ: 35 ವರ್ಷಗಳಿಂದ ಪಟಾಕಿ ವ್ಯಾಪಾರ ಮಾಡುತ್ತಿರುವ ವಿಜಯ್‍ಕುಮಾರ್ ಮಾತನಾಡಿ, ದೀಪಾವಳಿ ಹಿಂದೂಗಳ ಹಬ್ಬಗಳಲ್ಲಿ ಪ್ರಮುಖವಾದ ಹಬ್ಬವಾಗಿದೆ. ಅದ್ದೂರಿಯಾಗಿ ದೀಪಾವಳಿಯನ್ನು ಆಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಪರಿಸರ ಮಾಲಿನ್ಯ ಉಂಟಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ವ್ಯಾಪಾರಿಗಳು ಪರಿಸರ ಸ್ನೇಹಿ ಪಟಾಕಿಗಳನ್ನೇ ಮಾರಾಟಕ್ಕೆ ತಂದಿದ್ದಾರೆ. ನೀತಿ ನಿಯಮಗಳಿಗೆ ಅನುಸಾರವಾಗಿ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು.

Translate »