ಆಕರ್ಷಿಸುತ್ತಿವೆ ಬಗೆಬಗೆಯ ದೀಪಗಳು
ಮೈಸೂರು

ಆಕರ್ಷಿಸುತ್ತಿವೆ ಬಗೆಬಗೆಯ ದೀಪಗಳು

November 8, 2018

ಮೈಸೂರು:  ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆಗೆ ಬಗೆಬಗೆಯ ವಿನ್ಯಾ ಸದ ಮಣ್ಣಿನ ದೀಪಗಳು ಲಗ್ಗೆಯಿಟ್ಟಿದ್ದು, ಈ ದೀಪಗಳ ಖರೀದಿ ಜೋರಾಗಿದೆ.

ವಿವಿಧ ವಿನ್ಯಾಸ ಹಾಗೂ ಅಳತೆಗೆ ತಕ್ಕಂತೆ ವಿವಿಧ ದರವನ್ನು ನಿಗದಿ ಮಾಡಲಾಗಿದೆ. ಮಂಗಳವಾರ ಮಾರುಕಟ್ಟೆಯಲ್ಲಿ ಮಣ್ಣಿನ ದೀಪಗಳ ಖರೀದಿ ಜೋರಾಗಿತ್ತು. ಮೈಸೂರಿಗೆ ತಮಿಳುನಾಡಿನ ನವನವೀನ ಹಾಗೂ ಆಕರ್ಷಣೀಯ ದೀಪಗಳು ಬಂದಿವೆ. ಕೆಲವು 10 ರೂ.ಗೆ 5 ಹಾಗೂ 6 ಸಣ್ಣ ಸಣ್ಣ ದೀಪಗಳನ್ನು ಮಾರಾಟ ಮಾಡ ಲಾಗುತ್ತಿದೆ. ತುಳಸಿಕಟ್ಟೆ ಮಾದರಿ ದೀಪ, ದೀಪಾಲೆ ಕಂಬದ ಮಾದರಿಯ ದೀಪ ಹಾಗೂ ತೆಂಗಿನ ಕಾಯಿ ಮಾದರಿ ದೀಪ ಗಳಿಗೆ ತುಸು ಬೆಲೆ ಹೆಚ್ಚು.

ತುಳಸಿಕಟ್ಟೆ ಮಾದರಿ ದೀಪ ಒಂದಕ್ಕೆ 20 ರೂ., ದೀಪಾಲೆ ಕಂಬದ ಮಾದರಿ ದೀಪಕ್ಕೆ ಜೊತೆಗೆ 80 ರೂ. ದರ ನಿಗದಿ ಮಾಡಲಾಗಿದೆ. ತೆಂಗಿನ ಕಾಯಿ ಮಾದರಿ ದೀಪದಲ್ಲಿ ವಿವಿಧ ಅಳತೆಗಳಿದ್ದು, ಒಂದಕ್ಕೆ 30ರಿಂದ 40 ರೂ.ವರೆಗೆ ಬೆಲೆ ನಿಗದಿ ಗೊಳಿಸಲಾಗಿದೆ. ಲ್ಯಾಂಪ್ ಮಾದರಿಯಲ್ಲಿ ತಯಾರಿಸಿರುವ ದೀಪಕ್ಕೆ ಗಾಜಿನ ಬುರುಡೆ ಇದ್ದು, 100 ರೂ. ಬೆಲೆ ನಿಗದಿ ಮಾಡಲಾಗಿದೆ.

ದೇವರಾಜ ಮಾರುಕಟ್ಟೆಯಿಂದ ಅನತಿ ದೂರದಲ್ಲಿರುವ ಶಿವರಾಂಪೇಟೆಯಲ್ಲಿ ಇದೇ ಬಗೆಯ ದೀಪಗಳನ್ನು ತುಸು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯವಾಗಿ ತಳ್ಳುಗಾಡಿಗಳಲ್ಲಿ ದೀಪಗಳನ್ನು ಮಾರಾಟ ಮಾಡಲಾಗುತ್ತಿದ್ದು, ಬಗೆ ಬಗೆಯ ದೀಪಗಳ ಖರೀದಿ ಜೋರಾಗಿಯೇ ನಡೆಯುತ್ತಿದೆ. ಇದರೊಂದಿಗೆ ಆಕಾಶಬುಟ್ಟಿ ಮಾರಾಟವೂ ಚೆನ್ನಾಗಿಯೇ ನಡೆಯುತ್ತಿದ್ದು, ಇವುಗಳನ್ನು ಹೆಚ್ಚಾಗಿ ಮಹಿಳೆಯರು, ಯುವತಿಯರು ಕೊಂಡು ಕೊಳ್ಳುತ್ತಿದ್ದಾರೆ. ಆಕಾಶಬುಟ್ಟಿಗಳು ದೀಪ ಬೆಳಗಿಸಿ ಹಾರಿ ಬಿಟ್ಟರೆ ಪ್ಯಾರಾಚೂಟ್ ನಂತೆ ಆಗಸದಲ್ಲಿ ಹಾರುತ್ತ ಬೆಳಕಿನ ಚಿತ್ತಾರ ಮೂಡಿಸಲಿವೆ. ಇವೇನು ಪರಿಸರಕ್ಕೆ ಹಾನಿ ಕಾರಕವಲ್ಲ. ದೇವರಾಜ ಮಾರುಕಟ್ಟೆ ಯಲ್ಲಿ ಮಂಗಳವಾರ ತರಕಾರಿ ಹಾಗೂ ಹೂಗಳ ಬೆಲೆಯಲ್ಲಿ ಯಥಾಸ್ಥಿತಿ ಇತ್ತು.

Translate »