ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಒಂದು ದಿನದ ಪೂಜೆಗಾಗಿ ಸೋಮವಾರ ತೆರೆಯಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶನಿವಾರದಿಂದಲೇ ಶಬರಿ ಮಲೆ ಸುತ್ತುಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು 5 ದಿನಗಳ ಪೂಜೆಗಾಗಿ ಅಯ್ಯಪ್ಪ ಸ್ವಾಮಿ ದೇಗುಲ ತೆರೆದಾಗ ಅಹಿತಕರ ಘಟನೆ ಗಳು ನಡೆದಿದ್ದವು. ಕೆಲವು ಮಹಿಳೆಯರು ದೇಗುಲ ಪ್ರವೇಶಿಸಲು ಪ್ರಯತ್ನಿಸಿದರಾದರೂ, ಸಾವಿರಾರು ಭಕ್ತಾದಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿ ರಲಿಲ್ಲ. ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸರು 3701 ಮಂದಿಯನ್ನು ಬಂಧಿಸಿ 543 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಸೋಮವಾರ ಅಯ್ಯಪ್ಪಸ್ವಾಮಿ ದೇವಾ ಲಯದ ಬಾಗಿಲು ತೆರೆಯಲಿರುವ ಹಿನ್ನೆಲೆ ಯಲ್ಲಿ ಆಯಕಟ್ಟಿನ ಸ್ಥಳಗಳಾದ ಸನ್ನಿಧಾನಂ, ಪಂಪಾ, ನೀಲಕ್ಕಲ್ ಮತ್ತು ಇಳುವಂಗಲ್ ಪ್ರದೇಶಗಳಲ್ಲಿ ಪೂಜೆ ಮುಗಿಯುವವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶಬರಿಮಲೆಗೆ ವರದಿಗಾರ್ತಿಯರನ್ನು ಕಳಿಸದಿರಿ
ಕೊಟ್ಟಾಯಂ: ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲನ್ನು 1 ದಿನದ ವಿಶೇಷ ಪೂಜೆಗಾಗಿ ಸೋಮವಾರ ತೆರೆಯಲಾಗುತ್ತಿದೆ. ಈ ಸಂದರ್ಭದಲ್ಲಿ ವರದಿ ಮಾಡುವ ಸಲುವಾಗಿ ಮಾಧ್ಯಮ ಸಂಸ್ಥೆಗಳು ಮಹಿಳಾ ಪತ್ರಕರ್ತೆಯರನ್ನು ಅಯ್ಯಪ್ಪನ ಸನ್ನಿಧಾನಕ್ಕೆ ಕಳಿಸಬಾರದು ಎಂದು ದೇವಸ್ವಂ ಮಂಡಳಿ ಮತ್ತು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.
ಸುಪ್ರೀಂಕೋರ್ಟ್ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯ ಪ್ರವೇಶಕ್ಕೆ ಅನುಮತಿ ನೀಡಿದ ಬಳಿಕ ಅಯ್ಯಪ ದೇವಸ್ಥಾನದ ಬಾಗಿಲನ್ನು 2ನೇ ಬಾರಿಗೆ (ಸೋಮವಾರ) ತೆರೆಯಲಾಗುತ್ತಿದ್ದು, ಮಂಗಳವಾರ ರಾತ್ರಿ 10ಕ್ಕೆ ಮುಚ್ಚಲಾಗುತ್ತದೆ. ಇದೇ ವೇಳೆ, ಪಂಪಾ, ನಿಲಕ್ಕಲ್, ಸನ್ನಿಧಾನಂ, ಇಳುವಂಗಲ್ ಸುತ್ತಮುತ್ತ ಮಂಗಳವಾರದವರೆಗೂ ನಿಷೇಧಾಜ್ಞೆ ಹೇರಲಾಗಿದೆ.
ತ್ರಿರುವಾಂಕೂರ್‍ನ ಕೊನೆಯ ರಾಜರಾದ ಚಿತ್ರ ತಿರುನಾಳ್ ಬಲರಾಮ ವರ್ಮ ಅವರ ಜನ್ಮದಿನ ನಿಮಿತ್ತ ದೇವಸ್ಥಾನದಲ್ಲಿ
ವಿಶೇಷ ಪೂಜೆ ನೆರವೇರಲಿದೆ. ಇದಾದ ಬಳಿಕ ಈ ಸಾಲಿನ ವಾರ್ಷಿಕ ಯಾತ್ರೆಗಾಗಿ ನ.17ರಿಂದ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. `ಸುದ್ದಿ ಸಂಗ್ರಹಣೆಯ ಕರ್ತವ್ಯದ ನೆಪದಲ್ಲಿ ಮಹಿಳೆಯರನ್ನು ದೇವಸ್ಥಾನದ ಒಳಪ್ರವೇಶಿಸುವಂತೆ ಮಾಡುವುದರಿಂದ ಪರಿಸ್ಥಿತಿ ಇನ್ನಷ್ಟು ಜಟಿಲವಾಗಲಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಭಕ್ತರ ನಿಲುವಿನ ಕುರಿತು ನಿಮಗೂ ಅರಿವಿದೆ. ಪರಿಸ್ಥಿತಿ ಕೈಮೀರುವುದಕ್ಕೆ ನೀವು ಅವಕಾಶ ನೀಡುವುದಿಲ್ಲ ಎನ್ನುವ ಆಶಾಭಾವ ನಮ್ಮದಾಗಿದೆ’ ಎಂದು ಮಾಧ್ಯಮ ಸಂಸ್ಥೆಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಈ ಮೊದಲು: ಅಕ್ಟೋಬರ್‍ನಲ್ಲಿ 5 ದಿನಗಳ ಕಾಲ ದೇವಸ್ಥಾನದ ಬಾಗಿಲು ತೆರೆದಾಗ ಕೆಲ ಸುದ್ದಿಸಂಸ್ಥೆಗಳ ವರದಿಗಾರ್ತಿಯರು ದೇವಸ್ಥಾನಕ್ಕೆ ತೆರಳಿ ವರದಿಗಾರಿಕೆಗೆ ಮುಂದಾದಾಗ ಅವರ ವಾಹನಗಳ ಮೇಲೆ ದಾಳಿ ನಡೆದಿತ್ತು. ಅಲ್ಲದೆ ಕೆಲ ಮಹಿಳೆಯರು ಪ್ರತಿಭಟನಾ ನಿರತರ ಭಯದಿಂದ ದರ್ಶನ ಪಡೆಯಲಾಗದೇ ಹಿಂತಿರುಗುವಂತಾಗಿತ್ತು.