ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ವಿರಾಜಪೇಟೆ ಲಾಡ್ಜ್ ನಲ್ಲಿ ಸಿದ್ಧತೆ ನಡೆಸಿದ್ದ ಬಿಂದು, ಕನಕದುರ್ಗಾ!
ಮೈಸೂರು

ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ವಿರಾಜಪೇಟೆ ಲಾಡ್ಜ್ ನಲ್ಲಿ ಸಿದ್ಧತೆ ನಡೆಸಿದ್ದ ಬಿಂದು, ಕನಕದುರ್ಗಾ!

January 4, 2019

ಮಡಿಕೇರಿ: ಶ್ರೀ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾ ಲಯ ಪ್ರವೇಶಿಸಿ, 800 ವರ್ಷದ ಸಂಪ್ರದಾಯ ಮುರಿದ ಬಿಂದು ಮತ್ತು ಕನಕದುರ್ಗಾ ಈ ಸಾಹಸಕ್ಕೆ ಎರಡು ದಿನಗಳ ಮುಂಚೆ ವಿರಾಜಪೇಟೆಯಲ್ಲಿ ತಂಗಿದ್ದರು ಎಂಬ ಸ್ಫೋಟಕ ಮಾಹಿತಿ ‘ಮೈಸೂರು ಮಿತ್ರ’ನಿಗೆ ಲಭಿಸಿದೆ.

ಈ ಇಬ್ಬರೂ ಕೇರಳ ಪೊಲೀಸರ ಜತೆ ವಿರಾಜಪೇಟೆಗೆ ಬಂದು, ಇಲ್ಲಿಯೇ ಶ್ರೀ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ಕಾರ್ಯತಂತ್ರ ರೂಪಿಸಿದ್ದರೆಂದು ತಿಳಿದು ಬಂದಿದೆ.
ಕೋಯಕ್ಕೊಡು ನಿವಾಸಿಯೂ ಆದ ಉಪನ್ಯಾಸಕಿ ಮಾತ್ರವಲ್ಲ ದಲಿತ ಹಕ್ಕು ಹೋರಾಟಗಾರ್ತಿ ಬಿಂದು, ತನ್ನೊಂದಿಗೆ ಮಲಪ್ಪುರಂ ನಿವಾಸಿ, ಕೇರಳ ಸರ್ಕಾರದ ಪಡಿತರ ಇಲಾಖೆ ಯಲ್ಲಿ ಗುತ್ತಿಗೆ ಸಿಬ್ಬಂದಿಯಾಗಿರುವ ಕನಕದುರ್ಗಾರೊಂದಿಗೆ ಗಡಿ ಪ್ರದೇಶ ಕೊಡಗಿನ ವೀರಾಜಪೇಟೆಗೆ ಬಂದಿದ್ದರು.

ಡಿಸೆಂಬರ್ 29 ರಂದು ಶನಿವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಈ ಇಬ್ಬರೂ ಮಹಿಳೆ ಯರು ವಿರಾಜಪೇಟೆಗೆ ಬಂದಿದ್ದಾರೆ. ವಿರಾಜಪೇಟೆಯ ದೊಡ್ಡಟ್ಟಿ ಚೌಕ್‍ನಲ್ಲಿರುವ ಸೀತಾಲಕ್ಷ್ಮಿ ಲಾಡ್ಜ್ ನಲ್ಲಿ ಬಿಂದು ತನ್ನ ಹೆಸರಿನಲ್ಲಿ ರೂಂ ಪಡೆದಿದ್ದಾರೆ. ಈ ಇವರೊಂದಿಗೆ ಮಫ್ತಿಯಲ್ಲಿ ಕೇರಳ ಪೊಲೀಸ್ ಸಿಬ್ಬಂದಿ, ಇಬ್ಬರೂ ಮಹಿಳೆಯರನ್ನು ಸುರಕ್ಷಿತವಾಗಿ ಲಾಡ್ಜ್ ಸೇರಿಸಿದ ಬಳಿಕ ಅಲ್ಲಿಂದ ತೆರಳಿದ್ದಾರೆ. ಬಿಂದು ಮತ್ತು ಕನಕದುರ್ಗಾ ಎರಡು ದಿನಗಳ ಕಾಲ ಸೀತಾಲಕ್ಷ್ಮಿ ಲಾಡ್ಜ್ ನಲ್ಲೇ ತಂಗಿದ್ದರು. ಹೊರಹೋಗದೆ ರೂಮ್‍ಗೆ ಊಟ, ತಿಂಡಿ ತರಿಸಿಕೊಂಡಿದ್ದರು. ಡಿಸೆಂಬರ್ 31ರ ಸೋಮವಾರ ಬೆಳಿಗ್ಗೆ 10 ಗಂಟೆ 28 ನಿಮಿಷಕ್ಕೆ ಲಾಡ್ಜ್ ನ ರೂಮ್ ಖಾಲಿ ಮಾಡಿ, ಕೇರಳದತ್ತ ಸಾಗಿದ್ದಾರೆ.

ಲಾಡ್ಜ್ ಗೆ ಬರುವಾಗ ಬಣ್ಣದ ಧಿರಿಸಿನಲ್ಲಿ ಬಂದಿದ್ದ ಬಿಂದು ಮತ್ತು ಕನಕದುರ್ಗಾ ಲಾಡ್ಜ್ ರೂಂ ಖಾಲಿ ಮಾಡಿ, ಈ ಲಾಡ್ಜ್ ನಿಂದಲೇ ಶಬರಿಮಲೈಗೆ ಎಂಟ್ರಿ ಪಡೆಯುವ ಸಂಬಂಧ ಪ್ಲಾನ್ ರೂಪಿಸಿದ್ದಲ್ಲದೇ, ಎಲ್ಲಾ ರೀತಿಯ ಸಿದ್ಧತೆಗಳನ್ನು ವೀರಾಜಪೇಟೆಯಲ್ಲಿಯೇ ಕೈಗೊಂಡಿರುವುದು ಸ್ಪಷ್ಟವಾಗಿದೆ.

ಶಬರಿಮಲೈ ಸನ್ನಿಧಿ ತಪ್ಪಲಿನ ಪಂಪಾ ಕ್ಷೇತ್ರಕ್ಕೆ ಮಂಗಳವಾರ ನಡುರಾತ್ರಿ ತೆರಳಿದ ಬಿಂದು ಹಾಗೂ ಕನಕದುರ್ಗಾ ಪೊಲೀಸ್ ಭದ್ರತೆಯಲ್ಲೇ ಅಯ್ಯಪ್ಪ ಸನ್ನಿಧಿ ಪ್ರವೇಶಿಸಿ ಎಲ್ಲಾ ಸಂಪ್ರದಾಯ, ನಂಬಿಕೆಗಳನ್ನು ನುಚ್ಚು ನೂರು ಮಾಡಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ವಿರಾಜಪೇಟೆಗೆ ಈ ಇಬ್ಬರನ್ನು ಕರೆತಂದು ಬಿಟ್ಟಿದ್ದ ಕೇರಳ ಪೊಲೀಸರು, ಇವರು ಶಬರಿಮಲೆ ಸನ್ನಿಧಿಗೆ ಪ್ರವೇಶ ಪಡೆಯುವ ಸಂದರ್ಭ ಜತೆಯಲ್ಲಿದ್ದು, ಅಯ್ಯಪ್ಪನ ದರ್ಶನ ಪಡೆಯುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆಂದು ಹೇಳಲಾಗಿದೆ. ಕೇರಳದಲ್ಲಿದ್ದರೆ ದೇವಾಲಯ ಪ್ರವೇಶ ತಂತ್ರ ಬಯಲಾದೀತು ಎಂಬ ದೃಷ್ಟಿಯಿಂದ ಕೇರಳ ಗಡಿಯ ವೀರಾಜಪೇಟೆಗೆ ಇಬ್ಬರೂ ಮಹಿಳೆಯರನ್ನು ಕರೆತಂದು, ಇಲ್ಲಿ ಎರಡು ದಿನಗಳ ಕಾಲ ಇರಿಸಿ, ಇಲ್ಲಿಂದಲೇ ಅಗತ್ಯ ಸಿದ್ಧತೆ ಕೈಗೊಂಡು ನಂತರ ವೀರಾಜ ಪೇಟೆಯಿಂದ ಒಂದೂವರೆ ದಿನಗಳ ಪ್ರಯಾಣ ಕೈಗೊಂಡು ಪಂಪಾ ಕ್ಷೇತ್ರ ಪ್ರವೇಶಿಸಿ ಅಲ್ಲಿಂದ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ತೆರಳಿರುವುದು ಸ್ಪಷ್ಟವಾಗಿದೆ. ದೇಶವಿದೇಶಗಳಲ್ಲಿ ಸುದ್ದಿಯಾಗಿರುವ ಈ ಮಹಿಳೆಯರ ಅಯ್ಯಪ್ಪ ದರ್ಶನಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆಯೇ ಮೂಲ ವೇದಿಕೆ ಒದಗಿಸಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ. ಕೊಡಗಿನಲ್ಲಿಯೂ ಸಾಕಷ್ಟು ಶ್ರೀ ಅಯ್ಯಪ್ಪ ಭಕ್ತರಿದ್ದರೂ ಇಲ್ಲಿಂದಲೇ ದೇವಾಲಯ ಪ್ರವೇಶಿಸುವ ತಂತ್ರ ರೂಪಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕೇರಳದಲ್ಲಿದ್ದರೆ ದೇವಾಲಯ ಪ್ರವೇಶ ತಂತ್ರ ಬಯಲಾದೀತು ಎಂಬ ದೃಷ್ಟಿಯಿಂದ ಕೇರಳ ಗಡಿಯ ವೀರಾಜಪೇಟೆಗೆ ಇಬ್ಬರೂ ಮಹಿಳೆಯರನ್ನು ಕರೆತಂದು, ಇಲ್ಲಿ ಎರಡು ದಿನಗಳ ಕಾಲ ಇರಿಸಿ, ಇಲ್ಲಿಂದಲೇ ಅಗತ್ಯ ಸಿದ್ಧತೆ ಕೈಗೊಂಡು ನಂತರ ವೀರಾಜ ಪೇಟೆಯಿಂದ ಒಂದೂವರೆ ದಿನಗಳ ಪ್ರಯಾಣ ಕೈಗೊಂಡು ಪಂಪಾ ಕ್ಷೇತ್ರ ಪ್ರವೇಶಿಸಿ ಅಲ್ಲಿಂದ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ತೆರಳಿರುವುದು ಸ್ಪಷ್ಟವಾಗಿದೆ. ದೇಶವಿದೇಶಗಳಲ್ಲಿ ಸುದ್ದಿಯಾಗಿರುವ ಈ ಮಹಿಳೆಯರ ಅಯ್ಯಪ್ಪ ದರ್ಶನಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆಯೇ ಮೂಲ ವೇದಿಕೆ ಒದಗಿಸಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ. ಕೊಡಗಿನಲ್ಲಿಯೂ ಸಾಕಷ್ಟು ಶ್ರೀ ಅಯ್ಯಪ್ಪ ಭಕ್ತರಿದ್ದರೂ ಇಲ್ಲಿಂದಲೇ ದೇವಾಲಯ ಪ್ರವೇಶಿಸುವ ತಂತ್ರ ರೂಪಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Translate »