ಉಪ ಸಮರದಲ್ಲಿ ದೋಸ್ತಿಗೆ ಭರ್ಜರಿ ಜಯ
ಮೈಸೂರು

ಉಪ ಸಮರದಲ್ಲಿ ದೋಸ್ತಿಗೆ ಭರ್ಜರಿ ಜಯ

November 8, 2018

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿದ್ದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ನಾಲ್ಕು ಕ್ಷೇತ್ರಗಳಲ್ಲಿ ಪ್ರಚಂಡ ಜಯಗಳಿಸುವ ಮೂಲಕ ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿಗೆ ಭಾರೀ ಆಘಾತ ನೀಡಿವೆ.

ಈ ಫಲಿತಾಂಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಮತ್ತಷ್ಟು ಗಟ್ಟಿಯಾಗಿದ್ದು, ಮುಂಬ ರುವ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿಸುವುದಾಗಿ ಉಭಯ ಪಕ್ಷಗಳ ನಾಯಕರು ಘೋಷಣೆ ಮಾಡಿದ್ದಾರೆ.
ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ಮತ್ತು ಜಮಖಂಡಿ ಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದ್ದರೆ, ಮತ್ತೊಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋತು, ಬಿಜೆಪಿಗೆ ಎಚ್ಚರಿಕೆ ನೀಡಿವೆ.

ಉಪಚುನಾವಣೆಯಲ್ಲಿ ಮತದಾರರು ಮೈತ್ರಿ ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿರುವುದರಿಂದ ಇನ್ನು ಬಿಜೆಪಿಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಮುಂದಾದರೆ ತೊಂದರೆಗೆ ಸಿಲುಕುತ್ತೀರಿ ಎಂಬ ಎಚ್ಚರಿಕೆ ನೀಡಿದಂತಿದೆ.

ಮೂರು ಲೋಕಸಭಾ ಕ್ಷೇತ್ರ, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ರಾಮನಗರ ವಿಧಾನಸಭೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಫಲಿತಾಂಶ ನಿರೀಕ್ಷಿತವಾಗಿತ್ತು. ಅಲ್ಲಿನ ಜೆಡಿಎಸ್ ಅಭ್ಯರ್ಥಿಗಳು ದಾಖಲೆಯ ಅಂತರದ ಜಯ ಸಾಧಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಬಿಜೆಪಿ(ಚಂದ್ರಶೇಖರ)ಗಿಂತ (ಬಿಜೆಪಿ ಅಭ್ಯರ್ಥಿ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದರಿಂದ, ಅಭ್ಯರ್ಥಿ ಇರಲಿಲ್ಲ. ಆದರೆ, ಪಕ್ಷದ ಚಿಹ್ನೆ ಇತ್ತು) 109137 ಮತಗಳ ಅಂತರದಿಂದ ಜಯ ಗಳಿಸಿ ತಮ್ಮ ಪತಿ ಮುಖ್ಯಮಂತ್ರಿ ಕುಮಾರಸ್ವಾಮಿಯ ದಾಖಲೆಯನ್ನೂ ಮೀರಿಸಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಮಂಡ್ಯದ ಇತಿಹಾಸದಲ್ಲಿಯೇ ಅತೀ ಹೆಚ್ಚು ಅಂದರೆ, 3,24,925 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಮಂಡ್ಯದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ 40 ಸಾವಿರ ಮತ ಪಡೆದಿದ್ದ ಬಿಜೆಪಿ, ಈ ಬಾರಿ ಸಾಕಷ್ಟು ಬಲವೃದ್ಧಿಸಿಕೊಂಡಿದೆ. ಡಾ. ಸಿದ್ದರಾಮಯ್ಯ, 2,44,377 ಮತಗಳನ್ನು ಪಡೆಯುವ ಮೂಲಕ ಮಂಡ್ಯದಲ್ಲಿಯೂ ಬಿಜೆಪಿಯನ್ನು ಗಟ್ಟಿಗೊಳಿಸಿದ್ದಾರೆ.

ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಹಿ-ಕಹಿ ಎರಡೂ ಅನುಭವವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಮೈತ್ರಿ ಪಕ್ಷದ ಅಭ್ಯರ್ಥಿ ಜೆಡಿಎಸ್‍ನ ಮಧು ಬಂಗಾರಪ್ಪ ವಿರುದ್ಧ ಗೆಲ್ಲಿಸಿಕೊಂಡು ಬರುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಬಿ.ಶ್ರೀರಾಮುಲು ತಮ್ಮ ಸಹೋದರಿ, ಬಿಜೆಪಿ ಅಭ್ಯರ್ಥಿ ಜೆ.ಶಾಂತಾರನ್ನು ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದು, 14 ವರ್ಷಗಳ ಬಿಜೆಪಿ ಭದ್ರಕೋಟೆಯನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಹಾಗೂ ರಾಮುಲು ಅವರ ಅಧಿಪತ್ಯ ಸದ್ಯಕ್ಕೆ ಅಂತ್ಯವಾದಂತಾಗಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರು ಜೆ. ಶಾಂತಾ ವಿರುದ್ಧ ದಾಖಲೆಯ 2,43,161 ಮತಗಳ ಅಂತರದಿಂದ ಗೆಲುವು ಪಡೆದು ಬಳ್ಳಾರಿ ಬಿಜೆಪಿ ಕೋಟೆಯನ್ನು ಛಿದ್ರಗೊಳಿಸಿದ್ದಾರೆ.

ಜಮಖಂಡಿಯಲ್ಲಿ ಸಿದ್ದುನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ನಿರೀಕ್ಷೆಯಂತೆ ಗೆಲುವು ಪಡೆದಿದ್ದು, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರಿಗಿಂತ 39,476 ಹೆಚ್ಚು ಮತ ಪಡೆದು, ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತಂದೆ ಪಡೆದ ಮತಗಳಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಐದು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿ ನಾಯಕರ ತಳಮಳಕ್ಕೆ ಕಾರಣವಾಗಿದೆ. ಕನಿಷ್ಠ ಎರಡು ಲೋಕಸಭಾ ಕ್ಷೇತ್ರಗಳನ್ನಾದರೂ ಉಳಿಸಿಕೊಳ್ಳುವ ಭರವಸೆಯಲ್ಲಿದ್ದ ರಾಜ್ಯ ನಾಯಕರಿಗೆ ಬಳ್ಳಾರಿಯಲ್ಲಿ ರಾಮುಲು ಸಹೋದರಿ ಜೆ.ಶಾಂತಾ ಹೀನಾಯ ವಾಗಿ ಸೋತಿರುವುದು ದೊಡ್ಡ ಆಘಾತಕ್ಕೆ ಕಾರಣವಾಗಿದೆ.

ಅಷ್ಟೇ ಅಲ್ಲದೇ ಶಿವಮೊಗ್ಗದಲ್ಲಿಯೂ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಕೂಡ ಸಾಕಷ್ಟು ಪೈಪೋಟಿ ನೀಡಿದ್ದು, ಬಿಜೆಪಿಗೆ ಪ್ರಯಾಸದ ಗೆಲುವು ದೊರೆತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಬಿಜೆಪಿಗೆ ಉಪ ಚುನಾವಣೆ ಫಲಿತಾಂಶ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು, ಮೈ ಮರೆತರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮತ್ತಷ್ಟು ಬಲಿಷ್ಠವಾಗುವ ಸಂದೇಶವನ್ನು ಈ ಚುನಾವಣಾ ಫಲಿತಾಂಶ ನೀಡಿದೆ.

ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ನೀಡುವ ಮೂಲಕ ಸಮ್ಮಿಶ್ರ ಸರಕಾರಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಲೋಕಸಭೆಗೂ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ 28 ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಮೋದಿ ಸರಕಾರದ ವಿರುದ್ಧದ ಅಲೆ ದೇಶದಲ್ಲಿ ಬೀಸುತ್ತಿದೆ. ನಾಲ್ಕು ಕ್ಷೇತ್ರಗಳಲ್ಲಿ ಚುನಾವಣಾ ಗೆಲುವಿನ ಅಂತರ ಹೆಚ್ಚಾಗಿದೆ. ಜನರ ಅಭಿಪ್ರಾಯ ಏನಿದೆ ಎನ್ನುವ ಮುನ್ಸೂಚನೆ ಇದಾಗಿದೆ ಎಂದಿದ್ದಾರೆ.

ಹಣ, ಹೆಂಡ ಹಂಚಿ ಗೆದ್ದಿವೆ: ಬಿಎಸ್‍ವೈ: ಉಪ ಚುನಾವಣೆಯಲ್ಲಿ ಜನತೆಯ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚುನಾವಣೆಯಲ್ಲಿ ಎರಡೂ ಪಕ್ಷಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಹಣ ಹಾಗೂ ಹೆಂಡವನ್ನು ರಾಜಾರೋಷವಾಗಿ ಹಂಚಿಕೆ ಮಾಡಿ ಸ್ಥಾನ ಗೆದ್ದುಕೊಂಡಿವೆ ಎಂದು ದೂರಿದ್ದಾರೆ.

ಬಿಜೆಪಿಗೆ ಉತ್ತರ: ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ರಾಜ್ಯದ ಜನತೆ ನೀಡಿರುವ ಉತ್ತರ ಇದಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಆಪರೇಷನ್ ಕಮಲ ಮಾಡಲು ಯತ್ನಿಸುತ್ತಿದೆ. ರಾಜ್ಯದ ಜನತೆ ಅದನ್ನು ಒಪ್ಪಿಲ್ಲ. ಈಗ ಸೆಮಿಫೈನಲ್ ಗೆದ್ದಿದ್ದೇವೆ. ಲೋಕಸಭೆ ಚುನಾವಣೆ ಫಲಿತಾಂಶ ಏನಿರಲಿದೆ ಎನ್ನುವುದನ್ನು ರಾಜ್ಯದ ಮತದಾರರು ತೋರಿಸಿಕೊಟ್ಟಿದ್ದಾರೆ. ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಕೆಲಸ ಮಾಡಿರುವುದರಿಂದ ನಾವು ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿದ್ದೇವೆ. ಶಿವಮೊಗ್ಗದಲ್ಲಿ ಕಡೆ ಗಳಿಗೆಯಲ್ಲಿ ಅಭ್ಯರ್ಥಿಯನ್ನು ಹಾಕಿದ್ದರಿಂದ ಸೋಲಾಯಿತು. ಹಳೆ ಭಿನ್ನಾಭಿಪ್ರಾಯ ಬಿಟ್ಟು ಕಾಂಗ್ರೆಸ್ ಜೊತೆ ಸೇರಿ ಮುಂದಿನ ಲೋಕಸಭೆ ಚುನಾವಣೆ ಎದುರಿಸುತ್ತೇವೆ ಎಂದರು.

Translate »