ಮುಂದಿನ ವಾರ ದೆಹಲಿಗೆ ಸಿಎಂ ಕುಮಾರಸ್ವಾಮಿ: ರಾಹುಲ್ ಭೇಟಿಯಾಗಿ ಮಹತ್ವದ ಮಾತುಕತೆ
ಮೈಸೂರು

ಮುಂದಿನ ವಾರ ದೆಹಲಿಗೆ ಸಿಎಂ ಕುಮಾರಸ್ವಾಮಿ: ರಾಹುಲ್ ಭೇಟಿಯಾಗಿ ಮಹತ್ವದ ಮಾತುಕತೆ

November 8, 2018

ಬೆಂಗಳೂರು: ಉಪ ಚುನಾವಣೆಗಳಲ್ಲಿ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಂದಿನ ವಾರ ದೆಹಲಿಗೆ ತೆರಳುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ್ದು ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ. ಉಪ ಚುನಾವಣೆಗಳ ಫಲಿತಾಂಶ ಸರ್ಕಾರವನ್ನು ಅಭದ್ರಗೊಳಿಸುವ ಬಿಜೆಪಿ ಯತ್ನಕ್ಕೆ ಹಿನ್ನಡೆಯುಂಟು ಮಾಡಿರುವುದರಿಂದ ನೆಮ್ಮದಿಯಾಗಿರುವ ಕುಮಾರಸ್ವಾಮಿ, ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಮುಂದುವರಿಯಬೇಕಾದ ಸ್ವರೂಪದ ಕುರಿತು ರಾಹುಲ್ ಗಾಂಧಿ ಅವರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶ ಸರ್ಕಾರದ ಭದ್ರತೆಯ ಕುರಿತ ಅಪನಂಬಿಕೆಯನ್ನು ದೂರ ಮಾಡಿದ್ದು ಈ ಬೆಳವಣಿಗೆ ಮುಂದಿನ ಹೆಜ್ಜೆಗಳನ್ನು ಮತ್ತಷ್ಟು ದೃಢವಾಗಿ ಇಡಲು ಸಾಧ್ಯವಾಗಿಸಲಿದೆ ಎಂಬುದು ರಾಹುಲ್ ಗಾಂಧಿ ಮತ್ತು ಕುಮಾರಸ್ವಾಮಿ ಯವರ ಅಭಿಮತ ಎಂಬುದು ಮೂಲಗಳ ಹೇಳಿಕೆ.

ಆರಂಭದಲ್ಲಿ ಸಣ್ಣ ಪುಟ್ಟ ಗೊಂದಲಗಳಿದ್ದರೂ ಉಪ ಚುನಾವಣೆಯ ಒಳಗಾಗಿ ಈ ಗೊಂದಲಗಳನ್ನು ಪರಿಹರಿಸಿಕೊಂಡು ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಜಯಗಳಿಸಿರುವುದು ಸಣ್ಣ ಸಾಧನೆಯಲ್ಲ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಮಣಿಸಬಹುದಿತ್ತು. ಆದರೂ ಉಭಯ ಪಕ್ಷಗಳ ನಾಯಕರು,ಕಾರ್ಯಕರ್ತರು ಪ್ರಾಮಾಣಿಕ ವಾಗಿ ಕೆಲಸ ಮಾಡಿದರು.ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ದುಡಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಶ್ವಮೇಧಯಾ ಗದ ಕುದುರೆಯನ್ನು ಕಟ್ಟಿಹಾಕಲು ಸಾಧ್ಯ ಎಂದು ಉಭಯ ನಾಯಕರು ಭಾವಿಸಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ಮುಂದಿನ ವಾರ ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಗೆ ತೆರಳುತ್ತಿದ್ದು ಅವರೊಂದಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ತೆರಳಲಿದ್ದಾರೆ.

Translate »