ಮಡಿಕೇರಿಯಲ್ಲಿ ಭೂಕುಸಿತ; ಇಬ್ಬರು ಮಹಿಳೆಯರ ಸಾವು
ಕೊಡಗು

ಮಡಿಕೇರಿಯಲ್ಲಿ ಭೂಕುಸಿತ; ಇಬ್ಬರು ಮಹಿಳೆಯರ ಸಾವು

November 8, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಘಟಿಸಿದ ಪ್ರಕೃತಿ ವಿಕೋಪದ ಕಹಿ ಘಟನೆ ಮರೆಯಾಗುವ ಮುನ್ನವೇ ಭೂ ಕುಸಿತಕ್ಕೆ ಸಿಲುಕಿ ಮತ್ತೆರೆಡು ಜೀವಗಳು ಬಲಿಯಾದ ಘಟನೆ ಮಡಿಕೇರಿ ನಗರದಲ್ಲಿ ಸಂಭವಿಸಿದೆ.

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಿ.ರಮೇಶ್ ಎಂಬುವರಿಗೆ ಸೇರಿದ ಮನೆಯ ಮುಂಭಾಗ ತಡೆಗೋಡೆ ನಿರ್ಮಿಸಲು ಅಡಿಪಾಯ ತೋಡುತ್ತಿದ್ದ ಸಂದರ್ಭ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವನನ್ನು ಪೊಲೀಸರು ಮತ್ತು ಸಾರ್ವಜನಿಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ಹಾಸನದ ಬೇಲೂರು ಸಮೀಪವಿರುವ ಯಲಹಂಕದ ನಿವಾಸಿ ಗೌರಮ್ಮ(45) ಮತ್ತು ಚಿಕ್ಕಮಗಳೂರುವಿನ ಮಾದೇರಹಳ್ಳಿ ನಿವಾಸಿ ಯಶೋಧ ಮೃತಪಟ್ಟವರಾಗಿದ್ದು, ಮೃತೆ ಗೌರಮ್ಮ ಅವರ ಪತಿ ಮಾಷ ಬೋವಿ ಗಂಭೀರ ಗಾಯಗೊಂಡು ಪವಾಡ ಸದೃಶ ರೀತಿಯಲ್ಲಿ ರಕ್ಷಿಸಲ್ಪಟ್ಟಿದ್ದಾರೆ.

ಘಟನೆ ವಿವರ: ಒಟ್ಟು 6 ಮಂದಿ ಕೂಲಿ ಕಾರ್ಮಿಕರು ರಮೇಶ್ ಎಂಬುವರ ಮನೆಯ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಅಡಿಪಾಯ ತೋಡುವ ಕೆಲಸದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ 3.45 ಗಂಟೆಗೆ ಕಾರ್ಮಿಕರು ಕೆಲಸ ನಿರತರಾಗಿದ್ದ ಸಂದರ್ಭ 20 ಅಡಿ ಎತ್ತರದ ಬರೆ ಕುಸಿದು ಬಿದ್ದಿದ್ದು, 5 ಮಂದಿ ಕಾರ್ಮಿಕರು ಮಣ್ಣನಡಿ ಸಿಲುಕಿಕೊಂಡಿದ್ದರು. ಈ ಸಂದರ್ಭ ಸವಿತ ಮತ್ತು ಹೊನ್ನ ಬೋವಿ ಎಂಬುವರು ತಕ್ಷಣವೇ ಮಣ್ಣನಡಿಯಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ಮಣ ್ಣನಡಿಯಲ್ಲಿ ಸಿಲುಕಿ ಗಾಯಗೊಂಡ ಮತ್ತೋರ್ವ ಕಾರ್ಮಿಕ ನಂಜುಂಡ ಎಂಬಾತನನ್ನು ಇತರ ಕಾರ್ಮಿಕರು ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ. ಆದರೆ, ಮಾಷ ಬೋವಿ, ಯಶೋಧ ಮತ್ತು ಗೌರಮ್ಮ ಅವರುಗಳನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಈ ಮಾಹಿತಿ ಅರಿತ ಮಡಿಕೇರಿ ನಗರ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಮಣ ್ಣನಡಿ ಸಿಲುಕಿದ್ದವರ ರಕ್ಷಿಸಲು ಮುಂದಾದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆಯ ಬಳಿಕ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದ ಮಾಷ ಬೋವಿಯನ್ನು ಹೊರತೆಗೆದು, ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

ಆ ಬಳಿಕ ಯಶೋಧ ಮತ್ತು ಗೌರಮ್ಮ ಅವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿಸಲಾಯಿತು. ಕೆಲ ಸಮಯದ ಬಳಿಕ ಇಬ್ಬರ ಶರೀರಗಳನ್ನು ಮಣ್ಣನಡಿಯಿಂದ ಹೊರತೆಗೆದು ತಕ್ಷಣವೇ ತುರ್ತು ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ಹೊತ್ತಿಗೆ ಇಬ್ಬರು ಮೃತಪಟ್ಟಿರುವುದನ್ನು ವೈದ್ಯರು ದ್ರಢಪಡಿಸಿದರು.

ವಿಷಯ ಅರಿತು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣ , ನಗರ ಸಭಾ ಪೌರಾಯುಕ್ತ ರಮೇಶ್ ಆಗಮಿಸಿ ಪರಿಶೀಲನೆ ನಡೆಸಿದರು. ಮಡಿಕೇರಿ ನಗರ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮನೆ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಿಷಯ ಅರಿತು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಘಟನಾ ಸ್ಥಳಕ್ಕೆ ಆಗಮಿಸಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು.

Translate »