ಜನವರಿಯಲ್ಲಿ ಮೈಸೂರು ವಿಮಾನ ನಿಲ್ದಾಣ ರನ್‍ವೇ ವಿಸ್ತರಣಾ ಕಾಮಗಾರಿ ಆರಂಭ
ಮೈಸೂರು

ಜನವರಿಯಲ್ಲಿ ಮೈಸೂರು ವಿಮಾನ ನಿಲ್ದಾಣ ರನ್‍ವೇ ವಿಸ್ತರಣಾ ಕಾಮಗಾರಿ ಆರಂಭ

November 8, 2018

ಮೈಸೂರು: 2019ರ ಜನವರಿಯಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆ ಕಾಮಗಾರಿ ಆರಂಭಿಸಲು ತ್ವರಿತಗತಿಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಇಂದಿಲ್ಲಿ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮರಸೆ ಗ್ರಾಮದ 30 ಎಕರೆ ಹೊರತು ಪಡಿಸಿ ಉಳಿದ 230 ಎಕರೆ ಭೂಮಿಯನ್ನು ತಕ್ಷಣ ಸ್ವಾಧೀನ ಪಡಿಸಿಕೊಂಡು ವಿಮಾನ ನಿಲ್ದಾಣ ರನ್‍ವೇ ವಿಸ್ತರಣೆಗಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ಕ್ಕೆ ಹಸ್ತಾಂತರಿಸಿ ಎಂದು ಸಚಿವರು ತಿಳಿಸಿದರು. ಮೈಸೂರು ವಿಮಾನ ನಿಲ್ದಾಣವನ್ನು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸುವ ಸಂಬಂಧ ಸಂಸದ ಪ್ರತಾಪ್‍ಸಿಂಹರೊಂದಿಗೆ ತಾವು ಹಲವು ಭಾರಿ ಚರ್ಚಿಸಿ ರನ್‍ವೇ ವಿಸ್ತ ರಣೆಗೆ ಅಗತ್ಯ ವಿರುವ ಭೂಮಿ ಕೊಡುತ್ತೇ ವೆಂದು ತಿಳಿಸಿದ್ದೇನೆ. ಈಗಾಗಲೇ ಸರ್ವೆ ಮಾಡಿ ಗುರುತಿ ಸಿರುವ 250 ಎಕರೆ ಭೂಮಿ ಪೈಕಿ 115 ಎಕರೆಯನ್ನು
ಸ್ವಾಧೀನಪಡಿಸಿಕೊಳ್ಳಲು ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಉಳಿದ ಭೂಮಿ ಸ್ವಾಧೀನಕ್ಕೆ ಅಗತ್ಯ ಕ್ರಮ ವಹಿಸಿ ಎಂದು ಜಿ.ಟಿ.ದೇವೇಗೌಡರು, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‍ಗೆ ನಿರ್ದೇಶನ ನೀಡಿದರು. ಈ ಸಂಬಂಧ ಕೇಂದ್ರ ವಿಮಾನಯಾನ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಿ ವಿಶ್ವದ ವಿವಿಧ ದೇಶಗಳಿಗೆ ನೇರ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಅಗತ್ಯ ಸೌಲಭ್ಯ ಒದಗಿಸಲು ನಿರ್ಧರಿಸಿರುವುದರಿಂದ ಡಿಸಿ, ಎಸಿ., ತಹಶೀಲ್ದಾರರು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕೆಂದು ಸಚಿವರು ಇದೇ ವೇಳೆ ಸೂಚಿಸಿದರು.

ಮೈಸೂರಿಗೆ ಹೆಚ್ಚುವರಿ 40 ಎಂಎಲ್‍ಡಿ ನೀರು ಸರಬರಾಜು ಯೋಜನೆಗೆ ಶೀಘ್ರ ಚಾಲನೆ
ಮೈಸೂರು: ಮುಂದಿನ ಬೇಸಿಗೆಯಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 40 ಎಂಎಲ್‍ಡಿಯಷ್ಟು ಹೆಚ್ಚುವರಿ ನೀರನ್ನು ಮೈಸೂರು ನಗರಕ್ಕೆ ತರಲುದ್ದೇಶಿಸಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗು ವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ. ಈ ಕುರಿತು ಇಂದು ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಪಾಲಿಕೆ, ವಾಟರ್‍ವಕ್ರ್ಸ್ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಅವರು, ಮೈಸೂರು ನಗರದಲ್ಲಿ ಮುಡಾ ಹಾಗೂ ಖಾಸಗಿ ಬಡಾವಣೆಗಳು ತ್ವರಿತಗತಿಯಲ್ಲಿ ನಿರ್ಮಾಣವಾಗುತ್ತಿದ್ದು, ಜನಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಮುಂದೆ ನೀರಿನ ಸಮಸ್ಯೆ ಉಂಟಾಗ ಲಿದೆ ಎಂದರು. ಬೇಸಿಗೆಯಲ್ಲಂತೂ ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ. ಅದನ್ನು ನೀಗಿಸಲು ಮೇಳಾಪುರ ಮತ್ತು ಹೊಂಗಳ್ಳಿ ಪಂಪಿಂಗ್ ಸ್ಟೇಷನ್‍ಗಳಿಂದ ಹೆಚ್ಚುವರಿ ನೀರು ತರುವುದು ಅವಶ್ಯವಾಗಿದೆ. ಮೇಳಾಪುರದಿಂದ ಹೆಚ್ಚುವರಿ 30 ಎಂಎಲ್‍ಡಿ ನೀರು ತರಲು ಅವಕಾಶವಿದೆ. ಕೆಪಿಟಿಸಿಎಲ್‍ನವರು 66 ಕೆವಿ ಸಾಮಥ್ರ್ಯದ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ. ನವೆಂಬರ್ 9ರಂದು ಸದರಿ ಕಡತಕ್ಕೆ ಸಹಿ ಮಾಡುತ್ತೇನೆಂದು ಚೀಫ್ ಇಂಜಿನಿಯರ್ ಹೇಳಿದ್ದಾರೆ ಎಂದರು. ಹೊಂಗಳ್ಳಿಯಿಂದಲೂ 10 ಎಂಎಲ್‍ಡಿ ಹೆಚ್ಚುವರಿ ನೀರು ಪೂರೈಸಲು ಉದ್ದೇಶಿಸಲಾಗಿದ್ದು, ಪ್ರಸ್ತುತ ಇರುವ ಕೊಳವೆ ಮಾರ್ಗದ ಜೊತೆಗೆ ಮತ್ತೊಂದು ಲೈನ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಎರಡೂ ಪಂಪಿಂಗ್ ಸ್ಟೇಷನ್‍ಗಳಿಂದ ಒಟ್ಟಾರೆ 40 ಎಂಎಲ್‍ಡಿ ಹೆಚ್ಚುವರಿ ನೀರು ತಂದಲ್ಲಿ ಮೈಸೂರಿನ ಪೂರ್ವ ಹಾಗೂ ಉತ್ತರಭಾಗದ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಹಳೇಉಂಡುವಾಡಿ ಯೋಜನೆ: ಉದ್ದೇಶಿತ ಮಹತ್ವದ ಕೆಆರ್‍ಎಸ್ ಹಿನ್ನೀರಿನ ಹಳೇಉಂಡುವಾಡಿ ಕುಡಿಯುವ ನೀರು ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದರಿಂದ ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಡುವಂತೆ ಮಂಡ್ಯ ಜಿಲ್ಲಾಧಿಕಾರಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಎಂದು ಜಿ.ಟಿ.ದೇವೇಗೌಡರು ಜಿಲ್ಲಾ ಅಧಿಕಾರಿಗಳಿಗೆ ತಿಳಿಸಿದರು.

ವಾಣಿವಿಲಾಸ ವಾಟರ್‍ವಕ್ರ್ಸ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಗುರುತಿಸಿರುವ ಹಳೇಉಂಡುವಾಡಿ ಬಳಿಯ ಜಾಗವನ್ನು ಕುಡಿಯುವ ನೀರು ಸರಬರಾಜು ಯೋಜನೆಗೆ ಒದಗಿಸಬೇಕೆಂದು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಂಡ್ಯ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದ್ದು, ಕೆಐಎಡಿಬಿ ಮೂಲಕ ಭೂಸ್ವಾಧೀನಪಡಿಸಿ ಒಪ್ಪಿಸಿದಲ್ಲಿ ಕಾಮಗಾರಿ ಆರಂಭಿಸಲಾಗ ುವುದು ಎಂದು ಸಚಿವರು ತಿಳಿಸಿದರು. ಈ ಯೋಜನೆಗೆ ಕಳೆದ ಬಜೆಟ್‍ನಲ್ಲಿ 550 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಯೋಜನೆ ಅನುಷ್ಠಾನಗೊಂಡಲ್ಲಿ ಮುಂದಿನ ನೂರು ವರ್ಷಗಳವರೆಗೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಿ.ಟಿ.ದೇವೇಗೌಡರು ಸ್ಪಷ್ಟಪಡಿಸಿದರು.

ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಲು 2019ರ ಮಾರ್ಚ್ 16 ಕಡೇ ದಿನ
ಮೈಸೂರು: ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು 2019ರ ಮಾರ್ಚ್ 16ರವರೆಗೆ ಅವಕಾಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಕಂದಾಯ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ನಂತರ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಸಚಿವರು, ಸರ್ಕಾರಿ ಭೂಮಿ ಒತ್ತುವರಿ ಮಾಡಿ ಕೊಂಡು ಮನೆ ನಿರ್ಮಿಸಿಕೊಂಡಿದ್ದರೆ ಅದನ್ನು ನಿಯಮಾನುಸಾರ ಅಕ್ರಮ-ಸಕ್ರಮ ಯೋಜನೆಯಡಿ ಅಧಿಕೃತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದರು. ಅಗತ್ಯ ದಾಖಲೆಗಳೊಂದಿಗೆ 2019ರ ಮಾರ್ಚ್ 16ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಸ್ಥಾನಕ್ಕೆ ಅತಿಥಿ ಶಿಕ್ಷಕರ ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಿಎಂ ತಡೆ ನೀಡಿರುವುದ ರಿಂದ ನೇಮಕಾತಿ ಯನ್ನು ಸ್ಥಗಿತಗೊಳಿಸಿ ಎಂದು ಡಿಡಿಪಿಐಗೆ ನಿರ್ದೇಶನ ನೀಡಿದ್ದೇನೆ. ಈ ವಿಚಾರವನ್ನು ಇಂದು ತಮ್ಮನ್ನು ಭೇಟಿ ಮಾಡಿದ ಅತಿಥಿ ಶಿಕ್ಷಕರ ನಿಯೋಗಕ್ಕೂ ಹೇಳಿದ್ದೇನೆ ಎಂದರು. ಸಾಗುವಳಿ ಭೂಮಿಯನ್ನು ದುರಸ್ತಿ ಮಾಡಿಕೊಡಲು ಕೋರಿ ರೈತರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ನಿಯಮಾನು ಸಾರ ಸರ್ವೇ ಮಾಡಿಸಿ ತಡಮಾಡದೇ ವಿಲೇವಾರಿ ಮಾಡಿ ಎಂದು ಡಿಸಿ ಅಭಿರಾಂ ಜಿ.ಶಂಕರ್, ತಹಶೀಲ್ದಾರ್ ಟಿ.ರಮೇಶ್‍ಬಾಬುಗೆ ನಿರ್ದೇಶನ ನೀಡಿದ್ದೇನೆ ಎಂದು ಜಿ.ಟಿ.ದೇವೇಗೌಡರು ತಿಳಿಸಿದರು.

Translate »