ವಂಚಕ ಸಂಸ್ಥೆಯೊಂದಿಗೆ ಡೀಲ್: ಗಣಿ ಧಣಿ ಜನಾರ್ಧನ ರೆಡ್ಡಿಗೆ ಬಂಧನ ಭೀತಿ
ಮೈಸೂರು

ವಂಚಕ ಸಂಸ್ಥೆಯೊಂದಿಗೆ ಡೀಲ್: ಗಣಿ ಧಣಿ ಜನಾರ್ಧನ ರೆಡ್ಡಿಗೆ ಬಂಧನ ಭೀತಿ

November 8, 2018

ಬೆಂಗಳೂರು: ಗಣಿ ಹಗರಣದಲ್ಲಿ ಸುದೀರ್ಘ ನಾಲ್ಕು ವರ್ಷಗಳ ಕಾಲ ಜೈಲು ವಾಸ ಅನುಭವಿಸಿ ಬಿಡುಗಡೆಗೊಂಡ ನಂತರ ನಿರಾಳವಾಗಿದ್ದ ಗಣಿ ಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಈಗ ಮತ್ತೊಂದು ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.

ಆಂಬಿಡೆಂಟ್ ಕಂಪನಿಯ ಬಹುಕೋಟಿ ಚೀಟಿಂಗ್ ಕೇಸ್‍ನಲ್ಲಿ ಜಾರಿ ನಿರ್ದೇಶನಾಲಯ(ಇಡಿ) ದಾಖಲಿಸಿದ್ದ ಪ್ರಕರಣದಲ್ಲಿ ಆಂಬಿಡೆಂಟ್ ಕಂಪನಿ ಮಾಲೀಕನನ್ನು ರಕ್ಷಿಸಲು 20 ಕೋಟಿ ರೂ. ಪಡೆದ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಸಿಲುಕಿದ್ದು, ಅವರ ಬಂಧನಕ್ಕಾಗಿ ಸಿಸಿಬಿಯ ನಾಲ್ಕು ತಂಡಗಳು ಬಲೆ ಬೀಸಿವೆ.

ಆಂಬಿಡೆಂಟ್ ಮಾಲೀಕ ಸಯ್ಯದ್ ಅಹಮದ್ ಫರೀದ್ ಅವರನ್ನು ಇಡಿ ಕೇಸ್‍ನಿಂದ ಪಾರು ಮಾಡಲು ಡೀಲ್ ಕುದುರಿಸುವ ಸಲುವಾಗಿ ಜನಾರ್ಧನ ರೆಡ್ಡಿ ತನ್ನ ಆಪ್ತ ಆಲಿಖಾನ್ ಮೂಲಕ 20 ಕೋಟಿ ಹಣಕ್ಕೆ ಬೇಡಿಕೆ ಇಟ್ಟು, ಅದನ್ನು ನಗದಿಗೆ ಬದಲಾಗಿ ಚಿನ್ನದ ರೂಪದಲ್ಲಿ ನೀಡಬೇಕೆಂದು ಸೂಚಿಸಿ, 18 ಕೋಟಿ ಮೌಲ್ಯದ 57 ಕೆ.ಜಿ. ಚಿನ್ನವನ್ನು ಪಡೆದಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಸುಮಾರು 15 ಸಾವಿರ ಮಂದಿಗೆ ಶೇ.30ರಿಂದ 40ರಷ್ಟು ಬಡ್ಡಿ ನೀಡುವ ಆಮಿಷವೊಡ್ಡಿ 600 ಕೋಟಿ ರೂ.ಗಳನ್ನು ಆಂಬಿಡೆಂಟ್ ಸಂಸ್ಥೆ ವಂಚಿಸಿತ್ತು. ಈ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಸರ್ಫರಾಜ್ ಆಲಂ ತಬ್ರೇಜ್ ಎಂಬುವರು ಮೊದಲಿಗೆ ದೂರು ದಾಖಲಿಸಿದ್ದರು. ನಂತರ ಈ ಕಂಪನಿ ವಿರುದ್ಧ ಬೆಂಗ ಳೂರಿನ 5 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಸಿಸಿಬಿಗೆ ವಹಿಸಿದ್ದರು. ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಆಂಬಿಡೆಂಟ್ ಕಂಪನಿಯು ಬೆಂಗಳೂ ರಿನ ರಮೇಶ್ ಕೊಠಾರಿಯಾ ಮಾಲೀಕತ್ವದ ಅಂಬಿಕಾ ಸೇಲ್ಸ್ ಕಾರ್ಪೊರೇಷನ್ ಚಿನ್ನದ ಅಂಗಡಿಗೆ 18 ಕೋಟಿ ರೂ. ಬ್ಯಾಂಕ್ ಖಾತೆ ಮೂಲಕ ವರ್ಗಾವಣೆ ಮಾಡಿರುವುದು ಹಾಗೂ ರಮೇಶ್ ಕೊಠಾರಿಯಾ ಅವರು ಬಳ್ಳಾರಿಯ ರಮೇಶ್ ಸತ್ರಲಾಲ್ ಎಂಬುವರ ಮಾಲೀಕತ್ವದ ರಾಜಮಹಲ್ ಫಾನ್ಸಿ ಜುವೆಲರಿಗೆ ಆ ಹಣವನ್ನು ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.

ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮತ್ತು ರಾಜಮಹಲ್ ಫಾನ್ಸಿ ಜುವೆಲರಿ ಮಾಲೀಕ ರಮೇಶ್ ಸತ್ರಲಾಲ್ ಅವರನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಾಜಮಹಲ್ ಫ್ಯಾನ್ಸಿ ಜುವೆಲರಿಗೆ ಸಂದಾಯವಾಗಿದ್ದ 18 ಕೋಟಿಗೆ ಜನಾರ್ಧನ ರೆಡ್ಡಿ ಆಪ್ತ ಆಲಿಖಾನ್ ಎನಾಮಲ್ ಇಂಡಿಯಾ ಕಂಪನಿ ಹೆಸರಿನಲ್ಲಿ 57 ಕೆ.ಜಿ. ಚಿನ್ನ ಖರೀದಿಸಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಕಂಪನಿಯು ಜನಾರ್ಧನ ರೆಡ್ಡಿ ಒಡೆತನದ ಕಂಪನಿ ಯಾಗಿದ್ದು, ಈ ಪ್ರಕರಣದಲ್ಲಿ ಅವರ ಪಾತ್ರವೇನು ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಜನಾರ್ಧನ ರೆಡ್ಡಿ ಅವರು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ತನ್ನ ಆಪ್ತ ಸಹಾಯಕ, ಆಂಬಿಡೆಂಟ್ ಕಂಪನಿ ಮಾಲೀಕ ಸಯ್ಯದ್ ಅಹಮದ್ ಫರೀದ್ ಹಾಗೂ ಆತನ ಪುತ್ರನೊಂದಿಗೆ ಸಭೆ ನಡೆಸಿದ ಫೋಟೋಗಳು ಸೇರಿದಂತೆ ಎಲ್ಲಾ ವಿವರಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ, ಅವರ ಆಪ್ತ ಆಲಿಖಾನ್, ಆಂಬಿಡೆಂಟ್ ಮಾಲೀಕ ಫರೀದ್ ಹಾಗೂ ಆತನ ಪುತ್ರ, ಬಳ್ಳಾರಿ ರಾಜಮಹಲ್ ಫ್ಯಾನ್ಸಿ ಜುವೆಲರಿ ಮಾಲೀಕ ರಮೇಶ್ ಸತ್ರಲಾಲ್ ಸೇರಿದಂತೆ ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿ, ಫರೀದ್ ಮತ್ತು ರಮೇಶ್ ಸತ್ರಲಾಲ್ ಅವರನ್ನು ಬಂಧಿಸಿ ಜೈಲಿಗಟ್ಟಿದೆ.

ಜನಾರ್ಧನ ರೆಡ್ಡಿ ಮತ್ತು ಆಲಿಖಾನ್ ಅವರ ಬಂಧನ ಹಾಗೂ ಅವರ ನಿವಾಸಗಳ ಶೋಧಕ್ಕಾಗಿ ಸರ್ಚ್ ವಾರಂಟ್ ಅನ್ನು ಸಿಸಿಬಿ ಪೊಲೀಸರು ಪಡೆದಿದ್ದಾರೆ. ಇಬ್ಬರ ಬಂಧನವಾಗುತ್ತಿದ್ದಂತೆಯೇ ಜನಾರ್ಧನ ರೆಡ್ಡಿ ಮತ್ತು ಆಲಿಖಾನ್ ತಲೆಮರೆಸಿಕೊಂಡಿದ್ದಾರೆ. ಅವರುಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಮಧ್ಯೆ ಬೆಂಗಳೂರಿನ 6ನೇ ಸೆಷನ್ಸ್ ನ್ಯಾಯಾಲಯದಲ್ಲಿ ಆಲಿಖಾನ್ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಪಡೆದಿದ್ದಾರೆ.

ಇಂದು ಸಿಸಿಬಿ ಪೊಲೀಸರು ಜನಾರ್ಧನ ರೆಡ್ಡಿ ಅವರ ಬೆಂಗಳೂರಿನ ಪಾರಿಜಾತ ಅಪಾರ್ಟ್‍ಮೆಂಟ್‍ನಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ತೆರಳಿದ ವೇಳೆ ಮನೆ ಬೀಗ ಹಾಕಿದ್ದು, ಕೀ ಮೇಕರ್‍ನನ್ನು ಕರೆಸಿ ಬಾಗಿಲು ತೆರೆದು ಪೊಲೀಸರು ಶೋಧನಾ ಕಾರ್ಯ ಕೈಗೊಂಡಿದ್ದರು. ಸಿಸಿಬಿ ಮತ್ತೊಂದು ತಂಡ ಆರ್.ಟಿ.ನಗರದಲ್ಲಿರುವ ಆಲಿಖಾನ್ ಮನೆ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ವೇಳೆ ವರದಿ ಮಾಡಲು ಸ್ಥಳಕ್ಕೆ ತೆರಳಿದ್ದ ಸುದ್ದಿ ವಾಹಿನಿಗಳ ಪ್ರತಿನಿಧಿಗಳ ಮೇಲೆ ಆಲಿಖಾನ್ ತಂದೆ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದು, ಕ್ಯಾಮರಾ ಕಸಿಯಲು ಮುಂದಾದರು. ಆಗ ಸ್ಥಳೀಯ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಜನಾರ್ಧನ ರೆಡ್ಡಿ ಬಂಧನಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ಹೈದರಾಬಾದ್‍ನಲ್ಲಿ, ಎಸಿಪಿ ಮಂಜುನಾಥ ಚೌಧರಿ ನೇತೃತ್ವದ ತಂಡ ಬಳ್ಳಾರಿಯಲ್ಲಿ ಮತ್ತು ಎಸಿಪಿ ವೆಂಕಟೇಶ ಪ್ರಸಾದ್ ನೇತೃತ್ವದ ತಂಡ ಬೆಂಗಳೂರಿನಲ್ಲಿ ರೆಡ್ಡಿ ಹುಡುಕಾಟದಲ್ಲಿ ತೊಡಗಿದೆ. ಡಿಸಿಪಿ ಗಿರೀಶ್ ನೇತೃತ್ವದ ತಂಡ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದರೆ, ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಒಟ್ಟಾರೆ ಪ್ರಕರಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ರೆಡ್ಡಿಯಿಂದ ಅಂತರ ಕಾಯ್ದುಕೊಳ್ಳಲು ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇದೀಗ ಕಪ್ಪುದಂಧೆಯಲ್ಲಿ ತೊಡಗಿಸಿಕೊಂಡ ಆರೋಪ ಕೇಳಿ ಬಂದಿದ್ದು, ಅವರೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ರೆಡ್ಡಿ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಚಿನ್ನದ ಗಟ್ಟಿ ಹಾಗೂ ಹಣ ಎಕ್ಸ್‍ಚೇಂಜ್ ಆರೋ ಪದ ಹಿನ್ನೆಲೆಯಲ್ಲಿ ಅವರ ಜೊತೆ ಅಂತರ ಕಾಯ್ದುಕೊಳ್ಳಲು ಬಿಜೆಪಿ ಹೈಕಮಾಂಡ್ ನಿರ್ದೇಶನ ನೀಡಿದೆ ಎನ್ನುವ ಮಾಹಿತಿ ಪಕ್ಷದ ಆಪ್ತ ಮೂಲ ಗಳಿಂದ ತಿಳಿದುಬಂದಿದೆ.

ರೆಡ್ಡಿ ಜೊತೆ ಆಪ್ತತೆ ಹೊಂದಿದ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಈ ಖಡಕ್ ಸೂಚನೆ ನೀಡಿದೆ. ಅವರು ಮತ್ತೆ ಮತ್ತೆ ಯಡವಟ್ಟು ಮಾಡ್ಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಕೂಡ ಸುಮ್ಮನಿರಲಾಗದೆ ಸಿದ್ದರಾಮಯ್ಯ ಪುತ್ರನ ಸಾವಿನ ಬಗ್ಗೆ ಮಾತಾಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದರು. ಈಗ ಮತ್ತೊಂದು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಈಗಾಗಲೇ ಬಿಜೆಪಿ ಉಪ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದೆ. ಬಳ್ಳಾರಿಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಇದು ಇನ್ನಷ್ಟು ಸಂಕಷ್ಟ ತಂದೊಡ್ಡುತ್ತದೆ. ಹೀಗಾಗಿ ಜನಾರ್ದನ ರೆಡ್ಡಿ ಸಂಪರ್ಕ ಮಾಡಬೇಡಿ. ಯಾರೂ ಈ ವಿಚಾರ ಮಾತನಾಡಬೇಡಿ. ಅನಗತ್ಯವಾಗಿ ಈ ವಿಚಾರದ ಬಗ್ಗೆ ಮಾತನಾಡಿ ಗೊಂದಲ ಸೃಷ್ಟಿಸಬೇಡಿ ಎಂದು ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ತಾಕೀತು ಮಾಡಿದೆ.

Translate »