ಇಂದು ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ಆದೇಶ
ಮೈಸೂರು

ಇಂದು ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ಆದೇಶ

November 14, 2018

ಬೆಂಗಳೂರು: ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ಕಾಯ್ದಿರಿಸಲಾಗಿದೆ. ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾ ಲಯ ವಿಚಾರಣೆ ಮುಕ್ತಾಯ ಮಾಡಿ ನಾಳೆಗೆ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದೆ. ಹೀಗಾಗಿ ಮಂಗಳವಾರವೂ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಎಸಿಎಂಎಂ ಕೋರ್ಟ್‍ನ ನ್ಯಾಯಾಧೀಶ ಜಗದೀಶ್ ವಾದ-ಪ್ರತಿವಾದ ಆಲಿಸಿ, ನಾಳೆಗೆ ಜಾಮೀನು ಅರ್ಜಿ ಆದೇಶ ನೀಡುವುದಾಗಿ ತಿಳಿಸಿದರು. ಇದರಿಂದ ಜನಾರ್ದನ ರೆಡ್ಡಿ ಮೂರನೇ ದಿನವೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಳೆಯಬೇಕಾಗಿದೆ.

ರೆಡ್ಡಿ ಪರವಾದ ಮಂಡಿಸಿದ ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯ, ರೆಡ್ಡಿಗೂ, ಚಿನ್ನಕ್ಕೂ ಸಂಬಂಧ ಇಲ್ಲ. ರಿಮೈಂಡ್ ಅಪ್ಲಿಕೇಶನ್‍ನಲ್ಲಿ ಅವರ ಹೆಸರು ಬಳಸಿಲ್ಲ. ವಿಚಾರಣೆಗೆ ಕರೆಯಿಸಿ ಬರೋಬ್ಬರಿ 12 ಗಂಟೆ ವಿಚಾರಣೆ ಮಾಡಿದರು.

ಜನಾರ್ದನ ರೆಡ್ಡಿಯನ್ನು ಸುಮ್ಮನೆ ಕರೆಸಿದ್ದಾರೆ. 5ನೇ ಆರೋಪಿ ಅಲಿಖಾನ್, ನಾಲ್ಕನೇ ಆರೋಪಿ ರಮೇಶ್‍ನಿಂದ ಚಿನ್ನ ಪಡೆದಿದ್ದಾರೆ ಎನ್ನಲಾಗಿದೆ. ಆದ್ದರಿಂದ ಅಲಿಖಾನ್ ಚಿನ್ನ ಕೊಡಬೇಕು, ಆರನೇ ಆರೋಪಿ ಜನಾರ್ದನ ರೆಡ್ಡಿ ಅಲ್ಲ.

ರೆಡ್ಡಿಗೂ ಚಿನ್ನಕ್ಕೂ ಸಂಬಂಧ ಇಲ್ಲ. ಆದರೆ ಪ್ರಕರಣದ 1ನೇ ಆರೋಪಿ ಪರೀದ್‍ಗೆ ಬೇಲ್ ಸಿಕ್ಕಿದೆ. ಉಳಿದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ ದೂರಿಗೇ ಸಂಬಂಧವೇ ಇಲ್ಲದ 6 ನೇ ಆರೋಪಿ ಅವರನ್ನು ಬಂಧಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಸಿಸಿಬಿ ಪರ ವಾದ ಮಂಡಿಸಿದ ವಕೀಲ ವೆಂಕಟಗಿರಿ, ಪ್ರಕರಣದಲ್ಲಿ 600ರಿಂದ 700 ಕೋಟಿ ವಂಚನೆಯಾಗಿದೆ. ಪ್ರಕರಣದಲ್ಲಿ ರೆಡ್ಡಿ 20 ಕೋಟಿ ರೂ. ಅಕ್ರಮವಾಗಿ ಪಡೆದಿದ್ದಾರೆ.

ಈ ವೇಳೆ ನ್ಯಾಯಾಧೀಶ ಜಗದೀಶ್, ಜನಾರ್ದನ ರೆಡ್ಡಿಗೆ ಮತ್ತು ಕಂಪನಿಗೆ ನೇರ ನಂಟು ಇದ್ಯಾ, ಹಣವನ್ನು ಜನಾರ್ದನ ರೆಡ್ಡಿಗೆ ಯಾರಾದ್ರೂ ಕೊಟ್ಟಿದ್ದಾರಾ ನೇರವಾಗಿ ಯಾವುದಾದರೂ ಲಿಂಕ್ ಇದೆಯಾ ಸುಮ್ಮನೆ ಆರೋಪ ಮಾಡ್ಬೇಕು ಅಂತ ಮಾಡ್ಬೇಡಿ. ನೇರವಾದ ಸಂಬಂಧ ಇರೋದರ ಬಗ್ಗೆ ಮಾಹಿತಿ ನೀಡಿ. ಸರಿಯಾದ ಮಾಹಿತಿಯೇ ಇಲ್ಲದೆ ಬಂಧನ ಮಾಡಿದ್ದೀರಿ. ಹಣ ಕಳೆದುಕೊಂಡವರು ಯಾರು ರೆಡ್ಡಿಗೆ ಕೊಟ್ಟಿದ್ದೀನಿ ಅಂದಿದ್ದಾರಾ. ದೂರು ಇರುವುದೇ ಒಂದು, ನೀವು ಮಾಡುತ್ತಿರುವ ತನಿಖೆಯೇ ಮತ್ತೊಂದು ಎಂದು ಸಿಸಿಬಿ ಅಧಿಕಾರಿಗಳ ತನಿಖಾ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ವಿಚಾರಣೆ ಮುಕ್ತಾಯಗೊಳಿಸಿದ ನ್ಯಾಯಾಲಯ ಜಾಮೀನು ಅರ್ಜಿಯ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

Translate »