ಸಿಸಿಬಿ ಮುಂದೆ ವಿಚಾರಣೆಗೆ ಜನಾರ್ಧನ ರೆಡ್ಡಿ ಹಾಜರು
ಕೊಡಗು

ಸಿಸಿಬಿ ಮುಂದೆ ವಿಚಾರಣೆಗೆ ಜನಾರ್ಧನ ರೆಡ್ಡಿ ಹಾಜರು

November 11, 2018

ಬೆಂಗಳೂರು: ಆಂಬಿಡೆಂಟ್ ಕಂಪನಿ ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು ತಮ್ಮ ಪರ ವಕೀಲ ಚಂದ್ರಶೇಖರ್ ಅವರೊಂದಿಗೆ ನಗರದ ಸಿಸಿಬಿ ಕಚೇರಿಗೆ ಶನಿವಾರ ಸಂಜೆ 4ಕ್ಕೆ ಹಾಜರಾದರು. ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯ ಅವರ ಕಚೇರಿಯಿಂದ ಹೊರಟ ರೆಡ್ಡಿ, ವಕೀಲ ಚಂದ್ರಶೇಖರ್ ಅವರ ಕಾರಿನಲ್ಲೇ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ರೆಡ್ಡಿಯವರೊಂದಿಗೆ ಅವರ ಆಪ್ತ ಅಲಿಖಾನ್ ಕೂಡ ಬಂದಿದ್ದರು.

ಭಾನುವಾರ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಯಾದ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಶುಕ್ರವಾರ ರೆಡ್ಡಿಯವರಿಗೆ ನೋಟಿಸ್ ಜಾರಿ ಮಾಡಿದ್ದರು. ಅದರಂತೆ ವಕೀಲರೊಂದಿಗೆ ಸುದೀರ್ಘ ಮಾತುಕತೆ ಬಳಿಕ ವಿಚಾರಣೆಗೆ
ಹಾಜರಾಗುವುದಾಗಿ ಈ ಹಿಂದೆ ಜನಾರ್ಧನ ರೆಡ್ಡಿ ಅಜ್ಞಾತ ಸ್ಥಳದಿಂದ ವಿಡಿಯೋ ವೊಂದನ್ನು ಬಿಡುಗಡೆ ಮಾಡಿದ್ದರು. ಇದರಂತೆ ಇದೀಗ ಸಿಸಿಬಿ ಕಚೇರಿಗೆ ಆಗಮಿಸಿ ರುವ ರೆಡ್ಡಿಯವರನ್ನು ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರುವಿಚಾರಣೆಗೊಳಪಡಿಸಿದ್ದಾರೆ.

ಜನಾರ್ಧನ ರೆಡ್ಡಿ ಅವರನ್ನು ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್, ಎಸಿಪಿ ವೆಂಕಟೇಶ್ ಪ್ರಸನ್ನ ಮುಂತಾದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಅವರನ್ನು ಕೂಡ ವಿಚಾರಣೆಗಾಗಿ ಕರೆಸಿಕೊಂಡಿದ್ದರು. ರೆಡ್ಡಿ ಅವರಿಗೆ ಮಧ್ಯ ಮಧ್ಯೆ ವಿಶ್ರಾಂತಿ ನೀಡಿ, ವಿಚಾರಣೆ ನಡೆಸಲಾ ಗುತ್ತಿದೆ. ಪತ್ರಿಕೆ ಅಚ್ಚಿಗೆ ಹೋಗುವ ವೇಳೆಯಲ್ಲೂ ಕೂಡ ವಿಚಾರಣೆ ಮುಂದುವರೆದಿತ್ತು.

ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ

ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿನಲ್ಲಿ ಸಿಸಿಬಿ ಕಚೇರಿಗೆ ಆಗಮಿಸಿ ಅಧಿಕಾರಿಗಳ ಮುಂದೆ ಹಾಜರಾಗುವ ಮುನ್ನ ತಮ್ಮ ವಕೀಲ ಚಂದ್ರಶೇಖರ್ ಅವರೊಂದಿಗೆ ಸೇರಿ ವಿಡಿಯೋ ಮೂಲಕ ಅಜ್ಞಾತ ಸ್ಥಳದಿಂದ ರೆಡ್ಡಿ ಮಾಧ್ಯಮ ಪ್ರಕಟಣೆ ನೀಡಿದ್ದರು. ಬೆಂಗಳೂರಿನ ನನ್ನ ಮನೆಯ ಸುತ್ತಮುತ್ತ ಕಳೆದ 15-20 ದಿನಗಳಿಂದಲೂ ಆತಂಕದ ವಾತಾವರಣ ಸೃಷ್ಟಿ ಮಾಡಲಾಗಿತ್ತು. ಅಲ್ಲದೇ, ಸಿಸಿಬಿ ಪೊಲೀಸರು ನನ್ನ ಬಗ್ಗೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದರು. ಅದರಿಂದ ನಾನೇ ಸಿಸಿಬಿ ಕಚೇರಿಗೆ ಹೋಗೋಣ ಎಂದು ವಕೀಲ ಚಂದ್ರ ಶೇಖರ್ ಅವರನ್ನು ಕೇಳಿದ್ದೆ. ಆದರೆ, ಅವರು ಎಫ್‍ಐಆರ್‍ನಲ್ಲಿ ಹೆಸರಿಲ್ಲ. ನಮಗೆ ನೋಟೀಸ್ ಕೂಡ ಬಂದಿಲ್ಲ. ಹಾಗಿರುವಾಗ ಯಾಕೆ ಹೋಗಬೇಕು?

ಕಾನೂನು ಬದ್ಧವಾಗಿ ಅವರು ನೋಟೀಸ್ ಕೊಟ್ಟರೆ ಮಾತ್ರ ನಾವು ಹೋಗಲು ಸಾಧ್ಯ ಎಂದರು. ಅದರಿಂದಾಗಿ ಇಷ್ಟು ದಿನ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿಲ್ಲ ಎಂದು ಅವರು ಹೇಳಿದರು. ನಾನು ಎಲ್ಲೂ ತಲೆಮರೆಸಿಕೊಂಡಿರಲಿಲ್ಲ. ಬೆಂಗಳೂರು ಮಹಾನಗರದಲ್ಲೇ ಇದ್ದೆ. ಬೆಂಗಳೂರು ಬಿಟ್ಟು ಹೋಗುವ ಅವಶ್ಯಕತೆಯೂ ಇಲ್ಲ. ಪೊಲೀಸರು ಪೂರ್ವಾಗ್ರಹ ಪೀಡಿತರಾಗಿ ಕೆಟ್ಟ ಉದ್ದೇಶದಿಂದ ಹೀಗೇ ಮಾಡುತ್ತಿದ್ದಾರೆ ಎಂಬ ಕಾರಣದಿಂದ ವಕೀಲರೊಂದಿಗೆ ಚರ್ಚಿಸುತ್ತಿದ್ದೆ. ನನಗೆ ಯಾವುದೇ ರೀತಿಯ ಆತಂಕವಿಲ್ಲ. ನಾನು ತಪ್ಪೇ ಮಾಡಲಿಲ್ಲವಾದ್ದರಿಂದ ಆತಂಕ ಏಕಿರುತ್ತದೆ ಎಂದ ಅವರು, ನಾನು ತಪ್ಪು ಮಾಡಿದ್ದರೆ, ಸಿಸಿಬಿ ಪೊಲೀಸರು ಮಾಧ್ಯಮಗಳ ಮುಂದೆ ಒಂದೇ ಒಂದು ದಾಖಲೆಯ ನ್ನಾದರೂ ತೋರಿಸಬೇಕಾಗಿತ್ತು. ಅವರು ಯಾಕೆ ಹೀಗೆ ಮಾಧ್ಯಮಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮನಸ್ಸಿಗೆ ನೋವಾಗುತ್ತಿದೆ ಎಂದು ರೆಡ್ಡಿ ಹೇಳಿದರು. ನಾನು ಪೊಲೀಸನ ಮಗನಾಗಿ ಪೊಲೀಸ್ ಕ್ವಾರ್ಟರ್ಸ್ ನಲ್ಲೇ ಹುಟ್ಟಿ ಬೆಳೆದಿದ್ದೇನೆ. ನನಗೆ ಪೊಲೀಸರ ಮೇಲೆ ಅಪಾರ ಗೌರವವಿದೆ. ಇನ್ನು ಮುಂದಾದರೂ ಪೊಲೀಸರು ರಾಜಕೀಯ ಷಡ್ಯಂತ್ರಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ವಿಚಾರಣೆ ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದ ಅವರು ನಾನು ಯಾವುದೇ ಡೀಲ್ ಮಾಡಿಲ್ಲ. ಭಗವಂತ ಅಂತಹ ಸ್ಥಿತಿಯಲ್ಲಿ ನನ್ನನ್ನು ಇಟ್ಟಿಲ್ಲ. ಕೊನೆ ಉಸಿರಿರುವರೆವಿಗೂ 10 ಜನರಿಗೆ ಸಹಾಯ ಮಾಡುವಂತಹ ಸ್ಥಿತಿಯಲ್ಲಿ ನನ್ನನ್ನು ಭಗವಂತ ಇಟ್ಟಿದ್ದಾನೆ ಹೊರತು ಕೈಚಾಚುವ ಸ್ಥಿತಿಯಲ್ಲಿ ಇಟ್ಟಿಲ್ಲ. ಇಂದು ಮಧ್ಯಾಹ್ನ 3.15ಕ್ಕೆ ವಕೀಲ ಚಂದ್ರಶೇಖರ್ ಅವರೊಂದಿಗೆ ಸಿಸಿಬಿ ಕಚೇರಿಗೆ ಹೋಗುತ್ತೇನೆ ಎಂದು ವಿಡಿಯೋದಲ್ಲಿ ರೆಡ್ಡಿ ಹೇಳಿದರು. ಆದರೆ ಅವರು ಸಂಜೆ 4 ಗಂಟೆಗೆ ಸಿಸಿಬಿ ಕಚೇರಿಗೆ ತೆರಳಿದರು.

Translate »