ಟಿಪ್ಪು ಜಯಂತಿ ವಿರುದ್ಧ ಕೊಡಗಲ್ಲಿ ಕರಾಳ ದಿನಾಚರಣೆ
ಮೈಸೂರು

ಟಿಪ್ಪು ಜಯಂತಿ ವಿರುದ್ಧ ಕೊಡಗಲ್ಲಿ ಕರಾಳ ದಿನಾಚರಣೆ

November 11, 2018

ಮಡಿಕೇರಿ: ರಾಜ್ಯ ಸರಕಾರದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ್ದ ಕೊಡಗು ಬಂದ್‍ಗೆ ನಗರದಲ್ಲಿ ಉತ್ತಮ ಸ್ಪಂದನೆ ಕಂಡು ಬಂತು. ಜನರು ಕೂಡ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಕರಾಳ ದಿನ ಆಚರಿಸುವ ಮೂಲಕ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿದರು.

ಕುಟ್ಟಪ್ಪ ಸ್ಮರಣೆ-ಬಂಧನ: 2015ರಲ್ಲಿ ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿಯ ಸಂದರ್ಭ ಮೃತಪಟ್ಟ ಕುಟ್ಟಪ್ಪ ಅವರ ಸ್ಮರಣಾರ್ಥ ಬಿಜೆಪಿ ಮತ್ತು ವಿವಿಧ ಹಿಂದೂ ಪರ ಸಂಘಟನೆಗಳು ಕುಟ್ಟಪ್ಪ ಅವರ ಹೆಸರಲ್ಲಿ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನೂರಾರು ಕಾರ್ಯಕರ್ತರು ದೇವಾಲಯದ ಹೊರ ಆವರಣದಲ್ಲಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಗೆಡವಿ, ಟಿಪ್ಪು ಜಯಂತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಆ ಬಳಿಕ ದೇವಾಲಯದ ಆವರಣದಲ್ಲಿರುವ ಕೆರೆಗೆ 3 ಸುತ್ತು ಪ್ರದಕ್ಷಿಣೆ ನಡೆಸಿ ಟಿಪ್ಪು ಜಯಂತಿ ನಡೆಯುತ್ತಿದ್ದ ಕೋಟೆ ವಿಧಾನ ಸಭಾಂಗಣಕ್ಕೆ ಮುತ್ತಿಗೆ ಹಾಕಲು ಪ್ರತಿ ಭಟನೆಯ ಮೆರವಣಿಗೆ ಮೂಲಕ ಸಾಗಲು ಮುಂದಾದರು.

ಈ ಬಗ್ಗೆ ಮೊದಲೇ ಅರಿತಿದ್ದ ಪೊಲೀಸರು ದೇವಾಲಯದ ಎಲ್ಲಾ ಪ್ರವೇಶ ದ್ವಾರಗಳಲ್ಲೂ ನಾಕಾ ಬಂಧಿ ವಿಧಿಸಿದ್ದರು. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿಯ ಮುಖಂಡರು ದೇವಾಲಯ ದಿಂದ ಹೊರ ಬರುತ್ತಿದ್ದಂತೆಯೇ ಅವರನ್ನು ಬಂಧಿಸಲು ಮುಂದಾದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ತಳ್ಳಾಟ ನೂಕಾಟ ನಡೆಯಿತಾ ದರೂ ಅಂತಿಮವಾಗಿ ಪೊಲೀಸರು ಪ್ರತಿ ಭಟನಾಕಾರರನ್ನು ಬಂಧಿಸಿ ಕರೆದೊಯ್ಯು ವಲ್ಲಿ ಸಫಲರಾದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ನಗರಾಧ್ಯಕ್ಷ ಮಹೇಶ್ ಜೈನಿ, ಮುಖಂಡರಾದ ಕಾಂತಿ ಸತೀಶ್, ರಾಬಿನ್ ದೇವಯ್ಯ, ಬಿ.ಕೆ. ಜಗದೀಶ್, ವಿಶ್ವ ಹಿಂದೂ ಪರಿಷತ್‍ನ ಡಿ. ನರಸಿಂಹ, ಬಜರಂಗದಳದ ಚೇತನ್, ಗಣೇಶ್ ಮಕ್ಕಂದೂರು, ಹಿಂದೂ ಜಾಗರಣ ವೇದಿಕೆಯ ಕುಕ್ಕೇರ ಅಜೀತ್, ಧನಂಜಯ್ ಅಗೋಳಿಕಜೆ, ಎಬಿವಿಪಿಯ ವಿದ್ಯಾರ್ಥಿ ಪ್ರಮುಖ್ ವಿನಯ್ ಸೇರಿದಂತೆ ಒಟ್ಟು 114 ಮಂದಿಯನ್ನು ಬಂಧಿಸಿ ಆ ಬಳಿಕ ಬಿಡುಗಡೆ ಮಾಡಲಾಯಿತು.

ದ್ರೋಣ್ ಕಣ್ಗಾವಲು: ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದೇವಾಲಯ ಒಳ ಆವರಣದಲ್ಲಿ ಪ್ರತಿಭಟನೆ ನಡೆಸಿ ಕೊಳಕ್ಕೆ 3 ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದ ಸಂದರ್ಭ ಕಾರ್ಯಕರ್ತ ಚಲನ-ವಲನಗಳನ್ನು ಗಮನಿಸಲು ಪೊಲೀಸರು ದ್ರೋಣ್ ಕ್ಯಾಮರಾ ಮೊರೆ ಹೋಗಿದ್ದರು. 2 ಸುತ್ತು ಹಾರಾಟ ನಡೆಸಿದ ದ್ರೋಣ್ ಕ್ಯಾಮರಾ ಪ್ರತಿಭಟನಾಕಾರರು ದೇವಾಲಯ ಆವರಣದಿಂದ ಹೊರ ಬಂದ ಸಂದರ್ಭ ಹಾರಾಟ ನಿಲ್ಲಿಸಿತು.

Translate »