ಜನಾರ್ದನ ರೆಡ್ಡಿಗೆ ಜಾಮೀನು: ಜೈಲಿನಿಂದ ಬಿಡುಗಡೆ
ಮೈಸೂರು

ಜನಾರ್ದನ ರೆಡ್ಡಿಗೆ ಜಾಮೀನು: ಜೈಲಿನಿಂದ ಬಿಡುಗಡೆ

November 15, 2018

ಬೆಂಗಳೂರು: ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ಡೀಲ್‍ನಲ್ಲಿ ಜೈಲು ಪಾಲಾಗಿದ್ದ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದ್ದು ಒಂದನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಐದು ದಿನಗಳ ಜೈಲು ವಾಸದಿಂದ ಇಂದು ಸಂಜೆ ಜನಾರ್ಧನ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದರು.

ನವೆಂಬರ್ 10 ರಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 1ನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್ ಅವರು ನವೆಂಬರ್ 24 ರವರೆಗೂ 14 ದಿನಗಳ ಕಾಲ ಜನಾರ್ದನ ರೆಡ್ಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜನಾರ್ದನ ರೆಡ್ಡಿ ಅವರಿಗೆ ಇಂದು ಜಾಮೀನು ಮಂಜೂರಾಗಿದೆ.ಮೊದಲ ದಿನದಿಂದ ಜನಾರ್ದನ ರೆಡ್ಡಿ ಅವರು ಅಂಬಿಡೆಂಟ್ ಸಂಸ್ಥೆಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದರು. ಆದರೆ ಕೆಲ ಪ್ರಭಾವಿಗಳ ಒತ್ತಡದಿಂದ ರೆಡ್ಡಿ ಅವರನ್ನು ಬಂಧನ ಮಾಡಲಾಯಿತು. ಮೂಲ ಪ್ರಕರಣ ಬಿಟ್ಟು ಬೇರೆ ಯಾವುದೋ ಅಂಶದ ಮೇಲೆ ತನಿಖೆ ನಡೆಸಲಾಯಿತು. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದೇವೆ. ಸಿಸಿಬಿ ಪೊಲೀಸರ ವಿಚಾರಣೆಯನ್ನು ಸತತ 24 ಗಂಟೆಗಳ ಕಾಲ ಎದುರಿ ಸಿದ್ದೆವು. ಅದ್ದರಿಂದ ಕಾನೂನು ನಮಗೆ ನ್ಯಾಯ ನೀಡಿದೆ ಎಂದು ವಕೀಲ ಚಂದ್ರಶೇಖರ್ ತಿಳಿಸಿದ್ದಾರೆ.

ಜಾಮೀನು ನೀಡಲು ನ್ಯಾಯಾಲಯ 1 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದಿದೆ. ಮುಂದಿನ ಹಂತದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ಮುಂದಿನ ಹಂತದಲ್ಲಿ ಜನಾರ್ದನ ರೆಡ್ಡಿ ಅವರಿಗೆ ಸಿಸಿಬಿ ಎಷ್ಟೇ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿ ಸಹಕಾರ ನೀಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ಆಂಬಿಡೆಂಟ್ ಪ್ರಕರಣದಲ್ಲಿ ಜನರಿಗೆ ಮೋಸ ಮಾಡಿದ ಜನರಿಗೆ ನ್ಯಾಯ ನೀಡುವ ಕಾರ್ಯಕ್ಕೆ ಪೊಲೀಸರು ತನಿಖೆ ನಡೆಸಬೇಕಿತ್ತು. ಆದರೆ ಪ್ರಕರಣದ ತನಿಖೆ ಬದಲಾಗಿ ಬೇರೆ ಹಾದಿಯಲ್ಲಿ ನಡೆದಿತ್ತು. ಈ ಅಂಶವೇ ನಮಗೆ ಪ್ರಕರಣದಲ್ಲಿ ಮೊದಲ ಜಯ ಸಿಗಲು ಕಾರಣವಾಯಿತು ಎಂದು ತಿಳಿಸಿದರು. ಆಂಬಿಡೆಂಟ್ ಕಂಪನಿ ಜೊತೆ ಬಹುಕೋಟಿ ಡೀಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದರು ಎನ್ನಲಾಗಿತ್ತು. ಆದರೆ ನ.10 ರ ಮಧ್ಯಾಹ್ನ ತಮ್ಮ ವಕೀಲರ ಜೊತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಅಂದು ತಡರಾತ್ರಿವರೆಗೂ ಸುದೀರ್ಘ ವಿಚಾರಣೆ ನಡೆದಿತ್ತು. ಬಳಿಕ ನ.11 ರಂದು ಸಿಸಿಬಿ ಪೊಲೀಸರು ರೆಡ್ಡಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ರೆಡ್ಡಿ ಬಂಧನ ವಿಚಾರದಲ್ಲಿ ಸೂಕ್ತ ಸಾಕ್ಷ್ಯಗಳನ್ನು ನೀಡುವಂತೆ ತಿಳಿಸಿತ್ತು. ಇಂದು ಬೆಳಿಗ್ಗೆಯೇ ಪ್ರಕರಣದ ತನಿಖಾಧಿಕಾರಿ ಎಸಿಪಿ ವೆಂಕಟೇಶ ಪ್ರಸನ್ನ, ಎಸಿಪಿ ಸುಬ್ರಮಣಿ, ಎಸಿಪಿ ಮಂಜುನಾಥ ಚೌಧರಿ ಅವರು ನ್ಯಾಯಾಲಯದ ಮುಂದೆ ಹಾಜರಿದ್ದರು. ಇತ್ತ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆ ಸುದ್ದಿ ತಿಳಿದ ಅವರ ಬೆಂಬಲಿಗರು ನಗರದ ಪರಪ್ಪನ ಅಗ್ರಹಾರ ಜೈಲಿನ ಬಳಿ ಆಗಮಿಸಿದ್ದರು. ರೆಡ್ಡಿ ಜೈಲಿನಿಂದ ಹೊರ ಬರುತ್ತಿದ್ದಂತೆ ಜೈಕಾರ ಹಾಕಿ, ಬರಮಾಡಿಕೊಂಡರು.

Translate »