ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ..
ಮೈಸೂರು

ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ..

November 15, 2018

ಬೆಳಗಾವಿ: ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ. ನಮ್ಮ ಕುಟುಂಬ, ಪರಿ ವಾರಕ್ಕೆ ಟಿಪ್ಪು ಸುಲ್ತಾನ್ ಸಾಕಷ್ಟು ತೊಂದರೆ ನೀಡಿದ್ದ ಎಂದು ಮೈಸೂರಿನ ರಾಜ ಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಕೆಎಲ್‍ಇ ಫಿಸಿಯೋಥೆರಪಿ ಕೇಂದ್ರವನ್ನು ಉದ್ಘಾ ಟಿಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಪ್ರಮೋದಾದೇವಿ, ಸರ್ಕಾರ ಏಕೆ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ, ಇದರ ಹಿಂದಿನ ಉದ್ದೇಶವೇನೆಂದು ನಮಗೆ ತಿಳಿಯುತ್ತಿಲ್ಲ. ಇದಕ್ಕೆ ನಮ್ಮ ಬೆಂಬಲವೂ ಇಲ್ಲ ಎಂದಿದ್ದಾರೆ. “ಟಿಪ್ಪು ಜಯಂತಿಯನ್ನು ಸರ್ಕಾರ ಯಾವ ಕಾರಣಕ್ಕಾಗಿ ಆಚರಿಸುತ್ತಿದೆ? ಅವನು ನಮ್ಮ ಕುಟುಂಬಕ್ಕೆ ದೊಡ್ಡ ಪ್ರಮಾಣದಲ್ಲಿ ತೊಂದರೆ ನೀಡಿದ್ದ. ಆತ ಮಹಾರಾಣಿ ಲಕ್ಷ್ಮಮ್ಮಣ್ಣಿ ದೇವಿಯವರನ್ನು ಶ್ರೀರಂಗಪಟ್ಟಣದ ಜನನ ಮಂಟಪದಲ್ಲಿ ನಿರ್ಬಂಧ ರೂಪದಲ್ಲಿ ಇಟ್ಟಿದ್ದ. ಅವನ ದಾಳಿಗಳಿಂದ ಮೈಸೂರಿನ ಅರಸರಿಗೆ ಭಾರೀ ನೋವಾಗಿತ್ತು” ಎಂದಿದ್ದಾರೆ.

“ದೀಪಾವಳಿಯ ದಿನದಂದೇ ಮೇಲುಕೋಟೆಯ ಐಯ್ಯಂಗಾರ್ ಸಮುದಾಯದ ಮೇಲೆ ಸಾಮೂಹಿಕ ನರಮೇಧ ನಡೆಸಿದ್ದ ಟಿಪ್ಪು ಮುಮ್ಮಡಿ ಚಿಕ್ಕರಾಜ ಒಡೆಯರ್ ಕಾಲದಲ್ಲಿ ಟಿಪ್ಪು ರಾಜಮನೆತನದವರನ್ನು ಬಂಧನದಲ್ಲಿರಿಸಿದ್ದನು. ಆದರೆ ಹೀಗೆಲ್ಲಾ ನೋವುಂಟು ಮಾಡಿದ್ದರೂ ಸಹ ನಮ್ಮ ಹಿರಿಯರ ಮಾತಿನಂತೆ ನಾನು ನಮಗೆ ನೋವುಂಟು ಮಾಡಿದವರ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಟಿಪ್ಪುವಿನ ವಿರುದ್ಧ ಹೇಳಿಕೆ ನೀಡಲಾರೆ”.

“ನಾನೊಬ್ಬ ದೇಶದ ನಾಗರಿಕಳಾಗಿದ್ದು ಟಿಪ್ಪು ಜಯಂತಿಯ ವಿಚಾರದಲ್ಲಿ ಸರ್ಕಾರವನ್ನು ಪ್ರಶ್ನಿಸಲಾರೆ. ಇದು ಅವರಿಗೆ ಬಿಟ್ಟ ವಿಚಾರ.ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ”. ಪ್ರಮೋದಾದೇವಿ ಹೇಳಿದ್ದಾರೆ. ಇನ್ನು ರಾಜಕೀಯ ಪ್ರವೇಶದ ಕುರಿತಂತೆ ಮಾತನಾಡಿದ ಪ್ರಮೋದಾದೇವಿ “ತಾವೆಂದೂ ರಾಜಕೀಯಕ್ಕೆ ಪ್ರವೇಶಿಸಲ್ಲ. ಜನಸೇವೆ ಮಾಡಲು ರಾಜಕಾರಣಕ್ಕೆ ಸೇರ್ಪಡೆಯಾಗುವುದು ಅನಿವಾರ್ಯವಲ್ಲ. ಪುತ್ರ ಯದುವೀರ್ ಸಹ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯಕ್ಕೆ ಇಳಿಯುವುದಿಲ್ಲ. ಮುಂದೆ ಅವರೇನಾದರೂ ಮನಸ್ಸು ಬದಲಿಸಿದರೆ ಗೊತ್ತಿಲ್ಲ” ಎಂದರು.

ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಮಾತನಾಡಿ, “ಕಾನೂನು ಪ್ರಕಾರ ಎಲ್ಲರಿಗೆ ಸಮಾನ ಹಕ್ಕಿದೆ, ಮಹಿಳೆಯರು ದೇವಾಲಯ ಪ್ರವೇಶ ಮಾಡುವುದು ಅಪರಾಧವಲ್ಲ. ಆದರೆ ಧಾರ್ಮಿಕ ನಂಬಿಕೆಯನ್ನೂ ಸಹ ಅಲ್ಲಗೆಳೆಯಲಾಗದು. ನಮ್ಮ ಕುಟುಂಬದಲ್ಲಿ ಹಿಂದಿನವರ ಪರಂಪರೆಯನ್ನೇ ಪಾಲನೆ ಮಾಡುವುದು ನಡೆದುಕೊಂಡು ಬಂದಿದೆ. ಹೀಗಾಗಿ ನಾನು ಈ ಕುರಿತಂತೆ ಏನನ್ನೂ ಹೇಳಲಾರೆ. ದೇವಾಲಯಕ್ಕೆ ಹೋಗುವುದು, ಬಿಡುವುದು ಅವರವರ ಭಾವಕ್ಕೆ ಬಿಟ್ಟ ವಿಚಾರ” ಎಂದಿದ್ದಾರೆ.

Translate »