ಕೊಡಗಿನ ನೀರು ಪಡೆಯುವ ತಮಿಳುನಾಡು ಅದರ ಹಾನಿಯ  ತುಂಬುವುದು ನ್ಯಾಯವಲ್ಲವೇ?
ಕೊಡಗು, ಮೈಸೂರು

ಕೊಡಗಿನ ನೀರು ಪಡೆಯುವ ತಮಿಳುನಾಡು ಅದರ ಹಾನಿಯ ತುಂಬುವುದು ನ್ಯಾಯವಲ್ಲವೇ?

November 15, 2018

ಮೈಸೂರು: ಸದಾ ಕೊಡಗಿನ ನೀರು ಬಳಸುವ, ಒಂದು ವೇಳೆ ಬೇಡಿಕೆಯಂತೆ ನೀರು ಸಿಗದಿದ್ದರೆ ತಗಾದೆ ತೆಗೆದು ಕೇಂದ್ರ ಸರ್ಕಾರ, ನ್ಯಾಯಾಲಯದ ಮೊರೆ ಹೋಗುವ ತಮಿಳುನಾಡು, ಈಗ ಭಾರೀ ಮಳೆ, ಆ ಮೂಲಕ ನೆರೆಯಿಂದ ಕೊಡಗಿನಲ್ಲಿ ಉಂಟಾಗಿರುವ ಹಾನಿ ಯನ್ನು ತುಂಬಿಕೊಡಬೇಕಲ್ಲವೆ? ಈ ಒಂದು ನೈಸರ್ಗಿಕ ನ್ಯಾಯವನ್ನು ನಾಡಿನ ಖ್ಯಾತ ಸಾಹಿತಿ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್. ಭೈರಪ್ಪನವರು ಮುಂದಿಟ್ಟಿದ್ದಾರೆ.

ಈ ಬಾರಿ ಕೊಡಗಿನಲ್ಲಿ ಸುರಿದಿರುವ ಹುಚ್ಚು ಮಳೆ ಹಾಗೂ ಭಾರೀ ಬಿರುಗಾಳಿಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ವೆಚ್ಚವನ್ನು ಮಾಡಬೇಕಿದೆ. ಈ ಮಧ್ಯೆ ಸಾರ್ವಜನಿಕರೂ ಸಂತ್ರಸ್ತರ ಪುನರ್ವಸತಿಗಾಗಿ ದೇಣಿಗೆಗಳನ್ನು ನೀಡುತ್ತಿದ್ದಾರೆ.

ಆದರೆ ಮಳೆ ಇರಲಿ, ಇಲ್ಲದಿರಲಿ ತಗಾದೆ ತೆಗೆದು ನೀರು ಕಬಳಿಸುವ, ಅದಕ್ಕಾಗಿ ಕೇಂದ್ರ ಹಾಗೂ ನ್ಯಾಯಾಲಯದ ಮೊರೆ ಹೋಗಿ ನೀರು ಪಡೆಯುವ ತಮಿಳುನಾಡು ತನ್ನ ನೀರಿನ ಮೂಲಸ್ಥಾನವಾದ ಕೊಡಗಿನ ಹಾನಿಯನ್ನು ತುಂಬುವುದು ತನ್ನ ಕರ್ತವ್ಯ ಅಲ್ಲ ಎಂಬಂತೆ ತೆಪ್ಪಗಿರುವುದು ಯಾವ ನ್ಯಾಯ? ಎಂದು ಭೈರಪ್ಪ ಅವರು ಪ್ರಶ್ನಿಸಿದ್ದಾರೆ.

ಪ್ರಸ್ತುತ, ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವುದು ಕರ್ನಾಟಕದ `ಕರ್ತವ್ಯ’ ವಾದರೆ, ಅದರ ಫಲ ಉಣ್ಣುವ `ಹಕ್ಕು’ ಮಾತ್ರ ತಮಿಳ್ನಾಡಿನದ್ದಾಗಿದೆ. ಈ ಅಂಶಗಳನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರ, ಇಲ್ಲವೇ ಸಂಬಂಧಿಸಿದ ಟ್ರಿಬ್ಯುನಲ್ ಅಥವಾ ಉನ್ನತ ನ್ಯಾಯಾಲಯಕ್ಕಾಗಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯವೆಂದು ತಾವು ಭಾವಿಸಿದ್ದು, ಅದಕ್ಕೆ ಸಂಬಂಧಿಸಿದವರು ಮನ್ನಣೆ ನೀಡದೇ ಇದ್ದರೂ, ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ವೇಳೆ ಈ ಅಂಶವೂ ಆಧಾರವಾಗಲಿದೆ ಎಂಬ ಅಭಿಪ್ರಾಯವನ್ನು ಎಸ್.ಎಲ್. ಭೈರಪ್ಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಭೈರಪ್ಪನವರು ಪತ್ರವನ್ನು ಬರೆದಿದ್ದು, ಅದರ ಪೂರ್ಣಪಾಠವನ್ನು ಇಲ್ಲಿ ಪ್ರಕಟಿಸಲಾಗಿದೆ.

Translate »