ಛಾವಣಿ ಮೇಲೇರಿ ಮಾಲೀಕನಿಂದ ಆತ್ಮಹತ್ಯೆ ಬೆದರಿಕೆ
ಮೈಸೂರು

ಛಾವಣಿ ಮೇಲೇರಿ ಮಾಲೀಕನಿಂದ ಆತ್ಮಹತ್ಯೆ ಬೆದರಿಕೆ

November 14, 2018

ಮೈಸೂರು: ನಿಯಮ ಉಲ್ಲಂಘಿಸಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮಗೊಳಿಸಲು ಸಕಲ ಸಲಕರಣೆಗಳು, ಗ್ಯಾಂಗ್‍ಮನ್‍ಗಳೊಂದಿಗೆ ವೀರಾವೇಶದಿಂದ ತೆರಳಿದ್ದ ಮುಡಾ ಮತ್ತು ಪಾಲಿಕೆ ಅಧಿಕಾರಿಗಳು, ಮಾಲೀಕ ಛಾವಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ ಕಾರಣಕ್ಕೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದ ಪ್ರಸಂಗ ಮೈಸೂರಿನ ರಾಜೀವ್‍ನಗರ 2ನೇ ಹಂತದ ದೇವನೂರು ಕೆರೆ ಸಮೀಪ ಮಂಗಳವಾರ ಬೆಳಿಗ್ಗೆ ನಡೆಯಿತು.

ಪೂರ್ವ ಯೋಜನೆ, ಸರಿಯಾದ ಸಿದ್ಧತೆ, ಭದ್ರತಾ ವ್ಯವಸ್ಥೆ ಮಾಡಿಕೊಳ್ಳದೇ ಕಟ್ಟಡ ನೆಲಸಮ ಮಾಡಲು ಹೋದ ಅಧಿಕಾರಿಗಳು, ಮಾಲೀಕ ಸುಮಾರು 20 ಅಡಿ ಎತ್ತರದ ನಿರ್ಮಾಣ ಹಂತದ ಶಾದಿಮಹಲ್ ಛಾವಣಿ ಏರಿ, ಅಲ್ಲಿಂದ ಹಾರಿ, ಆತ್ಮಹತ್ಯೆ ಮಾಡಿ ಕೊಳ್ಳುತ್ತೇನೆಂದು ಬೆದರಿಸಿದ ಹಿನ್ನೆಲೆಯಲ್ಲಿ ಸುಮಾರು 3 ತಾಸು ಮೂಕ ಪ್ರೇಕ್ಷಕರಂತೆ ನೋಡಿಕೊಂಡು ನಿಂತಿದ್ದು, ಕಡೆಗೆ ಆತ ಕೆಳಗಿಳಿಯುವ ಮೊದಲೇ ಪೊಲೀಸರು, ನಂತರ ಅಧಿಕಾರಿಗಳು ಜಾಗದಿಂದ ಕಾಲ್ಕಿತ್ತರು.

ಘಟನೆ ವಿವರ: ಮೈಸೂರಿನ ದೇವನೂರು ಗ್ರಾಮದ ಸರ್ವೇ ನಂಬರ್ 50/1ರಲ್ಲಿ (ರಾಜೀವ್ ನಗರಕ್ಕೆ ಹೋಗುವ ಮುಖ್ಯ ರಸ್ತೆಯ ದೇವನೂರು ಕೆರೆಯ ಎಡಭಾಗದಲ್ಲಿ) ಸುಮಾರು ಅರ್ಧ ಎಕರೆ ಜಾಗದಲ್ಲಿ ಭೂ ಮಾಲೀಕರಾದ ಮುಷೀರ್ ಅಹಮದ್ ಹಾಗೂ ಮೊಹಮದ್ ಫಾರಿದ್ ಎಂಬುವರು ಶಾದಿಮಹಲ್ ನಿರ್ಮಿಸುತ್ತಿದ್ದಾರೆ. ಸದರಿ ಜಮೀನು ಅನ್ಯಕ್ರಾಂತವಾಗಿಲ್ಲ, ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆದಿಲ್ಲ. ಖಾತೆ ಮಾಡಿಸಿಕೊಂಡು ಕಂದಾಯವನ್ನೂ ಪಾವತಿಸದಿರುವುದರಿಂದ ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನ್ ಕಾಯ್ದೆ ಉಲ್ಲಂಘಟನೆಯಾಗಿದೆ ಎಂಬ ದೂರು ಬಂದಿತ್ತು.

ಈ ಬಗ್ಗೆ ಪರಿಶೀಲನೆ ನಡೆಸಿದ್ದ ಮುಡಾ ಅಧಿಕಾರಿಗಳು ಕಾಯ್ದೆ ಉಲ್ಲಂಘಿಸಿರುವುದು ಖಚಿತವಾದ ಬಳಿಕ ನಿರ್ಮಾಣ ಸ್ಥಗಿತಗೊಳಿಸಿ, ನಿಯಮಾನುಸಾರ ಭೂ ಪರಿವರ್ತನೆ ಮಾಡಿಸಿಕೊಂಡು, ನಕ್ಷೆ ಅನುಮೋದನೆ ಮಾಡಿಸಿಕೊಳ್ಳುವಂತೆ ಮಾಲೀಕರಿಗೆ ಹಲವು ಬಾರಿ ನೋಟೀಸ್ ಜಾರಿ ಮಾಡಿದ್ದರಲ್ಲದೆ, ಕಟ್ಟಡದ ಬಳಿಯೂ ಪ್ರತಿಯನ್ನು ಅಂಟಿಸಿದ್ದರು. ಅದನ್ನು ಲೆಕ್ಕಿಸದ ಮಾಲೀಕರು ಸುತ್ತ ಕಾಂಪೌಂಡ್ ನಿರ್ಮಿಸಿ, ಕಬ್ಬಿಣದ ಪಿಲ್ಲರ್‍ಗಳನ್ನು ಅಳವಡಿಸಿ ಅದರ ಮೇಲೆ ಛಾವಣಿಗೆ ಶೀಟ್ ಹಾಕಿ ಶಾದಿಮಹಲ್ ಕಟ್ಟುತ್ತಿದ್ದರು. ಮೌಖಿಕ ಹಾಗೂ ಲಿಖಿತ ತಿಳುವಳಿಕೆಯನ್ನೂ ಲೆಕ್ಕಿಸದೆ ನಿರ್ಮಾಣ ಕಾರ್ಯವನ್ನು ಮುಂದುವರಿಸಿದ್ದರಿಂದ ಇಂದು ಮುಡಾ ಮತ್ತು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು.

ಮುಂಜಾನೆ 5 ಗಂಟೆಗೆ 10 ಜೆಸಿಬಿ, 4 ಗ್ಯಾಸ್ ಕಟರ್, 5 ಟಿಪ್ಪರ್, 30 ಮಂದಿ ಸಿಬ್ಬಂದಿಗಳೊಂದಿಗೆ ಸಜ್ಜಾಗಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಉದಯಗಿರಿ ಠಾಣೆ ಇನ್‍ಸ್ಪೆಕ್ಟರ್ ಪಿ.ಪಿ.ಸಂತೋಷ್ ನೇತೃತ್ವದ 25 ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ನೆಲಸಮ ಕಾರ್ಯಾಚರಣೆ ಆರಂಭಿಸಿದರು. ಮೊದಲು ಶಾದಿಮಹಲ್‍ನ ಮುಖ್ಯ ನಿರ್ಮಾಣ ಕೆಡುವ ಬದಲು ಕಾಂಪೌಂಡ್‍ಗೆ ಹಾಕಿದ್ದ ಗ್ರಿಲ್‍ಗಳನ್ನು ಕೆಡವಲಾರಂಭಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಮುಷೀರ್ ಅಹಮದ್ ಅವರು, ತಾವು ಈಗಾಗಲೇ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿ ನೆಲಸಮಕ್ಕೆ ಅಡ್ಡಿಪಡಿಸಿದರು. ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ನೂರಾರು ಮಂದಿ ಜಮಾಯಿಸಿ, ಸುತ್ತುವರಿಯುತ್ತಿದ್ದಂತೆಯೇ ಪೊಲೀಸರು, ಅಧಿಕಾರಿಗಳು ಅವರತ್ತ ಗಮನಹರಿಸಿದಾಗ ಮುಷೀರ್ ಅಹಮದ್, ಎಲ್ಲರ ಕಣ್ತಪ್ಪಿಸಿ ಪಕ್ಕದ ಮನೆಯ ಕಟ್ಟಡದ ಮೇಲೇರಿ ಏಣಿಯ ಸಹಾಯದಿಂದ ನಿರ್ಮಾಣ ಹಂತದ ಕಟ್ಟಡದ ಛಾವಣಿ ಮೇಲೇರಿ ನಿಂತೇ ಬಿಟ್ಟರು. ನೀವು ಕಟ್ಟಡ ನೆಲಸಮ ಮಾಡಲು ಯತ್ನಿಸಿದರೆ ನಾನು ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇ ನೆಂದು ಹೆದರಿಸತೊಡಗಿದರು. ಇದರಿಂದ ವಿಚಲಿತರಾದ ಅಧಿಕಾರಿಗಳು ಏನು ಮಾಡಬೇಕೆಂದು ತೋಚದೆ ಕಾರ್ಯಾಚರಣೆ ಸ್ಥಗಿತಗೊಳಿಸಿದರು.

ಪೊಲೀಸರು ಹಾಗೂ ಮಾಲೀಕನ ಬೆಂಬಲಿಗರು ಕೆಳಗಿಳಿಯುವಂತೆ ಎಷ್ಟೇ ಹೇಳಿದರೂ ಮುಷೀರ್ ಅಹಮದ್ ಮಾತ್ರ ಕೆಳಗಿಳಿಯದೆ ಛಾವಣಿ ಮೇಲೆ ಕುಳಿತೇ ಬಿಟ್ಟರು. ಅಧಿಕಾರಿಗಳು ಸ್ಥಳದಿಂದ ತೆರಳುವವರೆಗೂ ತಾನು ಇಳಿಯುವುದಿಲ್ಲ ಎಂದು ಪಟ್ಟು ಹಿಡಿದ ಕಾರಣ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಂಡರೂ ಜಗ್ಗದ ಕಾರಣ ಅವರೂ ಕಾರ್ಯಾಚರಣೆ ಮಾಡುವ ಧೈರ್ಯ ತೋರಲಿಲ್ಲ. ಕಡೆಗೆ ನೀವೇ ತೆರವುಗೊಳಿಸಿ ಅದು ಮುಗಿದ ನಂತರವೇ ನಾವು ಹೋಗುತ್ತೇವೆ ಎಂದು ಅಧಿಕಾರಿಗಳು, ಮಾಲೀಕನ ಬೆಂಬಲಿಗರಿಗೆ ಹೇಳಿದರಾದರೂ, ಮುಷೀರ್ ಅಹಮದ್ ಮಾತ್ರ ಸುತಾರಾಂ ಒಪ್ಪಲಿಲ್ಲ. ಪರಿಣಾಮ ಪಾಲಿಕೆ, ಮುಡಾ ಅಧಿಕಾರಿಗಳು ಹಾಗೂ ಪೊಲೀಸರು ಸುಮಾರು 2 ತಾಸು ಮೂಕ ಪ್ರೇಕ್ಷಕರಂತೆ ನಿಂತು ನೋಡಬೇಕಾಯಿತು. ಕಡೆಗೆ ಭೂ ಪರಿವರ್ತನೆ, ನಕ್ಷೆ ಅನುಮೋದನೆ ಮಾಡಿಸಿಕೊಂಡು ಅಧಿಕೃತವಾಗಿ ಮೂರು ತಿಂಗಳೊಳಗಾಗಿ ಪ್ರತಿಗಳನ್ನು ಒದಗಿಸುತ್ತೇನೆ, ಅಲ್ಲಿಯವರೆಗೆ ಕಟ್ಟಡ ನಿರ್ಮಾಣ ಕೆಲಸ ಸ್ಥಗಿತಗೊಳಿಸುತ್ತೇವೆ ಎಂದು ಮಾಲೀಕನ ಪರವಾಗಿ ಸಂಬಂಧಿ ಮೊಹಮದ್ ಫಾರಿದ್ ಲಿಖಿತವಾಗಿ ಹೇಳಿಕೆ ನೀಡಿದ ನಂತರ ಬೆಳಿಗ್ಗೆ 11.30 ಗಂಟೆಗೆ ಅಧಿಕಾರಿಗಳು ಬರಿಗೈಲಿ ಹಿಂದಿರುಗಿದರು.

ಅಲ್ಲಿಯವರೆಗೂ ಕದಡದ ಮುಷೀರ್ ಅಹಮದ್, ಅಧಿಕಾರಿಗಳು ಜಾಗ ಖಾಲಿ ಮಾಡಿದ ಬಳಿಕ ಕೆಳಗಿಳಿದರು. ಅಧಿಕಾರಿಗಳು ಅಲ್ಲಿಂದ ತೆರಳುವ ಮೊದಲೇ ಪೊಲೀಸರು ಕಾಲ್ಕಿತ್ತ ಕಾರಣ ತಾವು ಇಲ್ಲಿದ್ದು ಏನೂ ಪ್ರಯೋಜನವಿಲ್ಲ ಎಂದು ಪಾಲಿಕೆ ಹಾಗೂ ಮುಡಾ ಅಧಿಕಾರಿಗಳು ನಿಸ್ಸಹಾಯಕರಾಗಿ ಹಿಂದಿರುಗಬೇಕಾಯಿತು.

ಕಾರ್ಯಾಚರಣೆ ಸ್ಥಳದಲ್ಲಿ ಪಾಲಿಕೆ, ಮುಡಾ ಆಯುಕ್ತ, ಸೂಪರಿಂಟೆಂಡಿಂಗ್ ಇಂಜಿನಿಯರ್ ಹಾಗೂ ಎಸಿಪಿ ಅಥವಾ ಡಿಸಿಪಿ ಮಟ್ಟದ ಪೊಲೀಸ್ ಅಧಿಕಾರಿಗಳು ಇಲ್ಲದಿದ್ದರಿಂದ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಕೆಳಮಟ್ಟದ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.

ಸರಿಯಾದ ಸಿದ್ಧತೆ, ಪೂರ್ವ ಯೋಜನೆ ಮಾಡಿಕೊಂಡು ಸೂಕ್ತ ಭದ್ರತೆಯೊಂದಿಗೆ ಕಟ್ಟಡದ ಸುತ್ತ ನಾಕಾಬಂದಿ ಮಾಡಿಕೊಂಡು ಕಾರ್ಯಾಚರಣೆ ಯೋಜನೆ ಮಾಡದಿ ರುವುದು ನೆಲಸಮ ಕಾರ್ಯಾಚರಣೆ ವೈಫಲ್ಯಕ್ಕೆ ಪ್ರಮುಖ ಕಾರಣವಾಯಿತು.

ಮುಡಾ ಕಾರ್ಯದರ್ಶಿ ಎಂ.ಕೆ.ಸವಿತಾ, ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳಾದ ಸುವರ್ಣ, ಪ್ರಭಾಕರ್, ವಿಶೇಷ ಭೂ ಸ್ವಾಧೀನಾಧಿಕಾರಿ ಇಂದ್ರಮ್ಮ, ನಗರ ಯೋಜನಾ ಸಹಾಯಕ ನಿರ್ದೇಶಕ ಪಿ.ಎಸ್.ನಟರಾಜ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳಾದ ಮೋಹನ್, ಭಾಸ್ಕರ್ ಹಾಗೂ ಇತರರು ಸ್ಥಳದಲ್ಲಿದ್ದರಾದರೂ ಮಾಲೀಕ ಮುಷೀರ್ ಅಹಮದ್ ಪಟ್ಟಿನ ಮುಂದೆ ಇವರ ಅಧಿಕಾರ, ನಿಯಮಾವಳಿ ಪಾಠ ಕೆಲಸ ಮಾಡಲಿಲ್ಲ.

Translate »