ಇಂದಿನಿಂದ ರೈತರೊಂದಿಗೆ ಮುಖ್ಯಮಂತ್ರಿ ನೇರ ಸಂವಾದ
ಮೈಸೂರು

ಇಂದಿನಿಂದ ರೈತರೊಂದಿಗೆ ಮುಖ್ಯಮಂತ್ರಿ ನೇರ ಸಂವಾದ

November 14, 2018

ಬೆಂಗಳೂರು ನ.13 : ಗ್ರಾಮೀಣ ಜನತೆಯ ಸಮಸ್ಯೆಯನ್ನು ಸ್ಥಳ ದಲ್ಲೇ ಆಲಿಸಿ, ರೈತರ ಸಂಕಷ್ಟಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆಯಿಂದ ರೈತರೊಟ್ಟಿಗೆ ನೇರ ಸಂವಾದ ನಡೆಸಲಿದ್ದಾರೆ.

ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ, ಇಸ್ರೇಲ್ ಪದ್ಧತಿಯನ್ನು ಅನುಷ್ಠಾನಗೊಳಿಸಿ, ಅಲ್ಪ ವೆಚ್ಚದಲ್ಲಿ ಹೆಚ್ಚು ಬೆಳೆ ತೆಗೆಯುವ ಸಂಬಂಧ ಮುಖ್ಯಮಂತ್ರಿಯವರೇ ಖುದ್ದಾಗಿ ರೈತರಿಗೆ ಮನವರಿಕೆ ಮಾಡಿಕೊಡುವುದೇ ಸಂವಾದದ ಉದ್ದೇಶ.

ಸ್ಥಳೀಯ ಸಮಸ್ಯೆಗಳನ್ನು ಆಲಿಸುವು ದರ ಜೊತೆಗೆ ರೈತರ ಕಷ್ಟಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವುದು ಒಂದೆಡೆಯಾದರೆ, ಸರ್ಕಾರದ ಯೋಜನೆಗಳನ್ನು ಬಳಕೆ ಮಾಡಿ ಹೆಚ್ಚು ಕೃಷಿ ಉತ್ಪನ್ನ ಮಾಡಿ ಇದರಿಂದ ನಿಮಗೆ ಲಾಭ ಎಂದು ಉತ್ತೇಜಿಸಲಿದ್ದಾರೆ.

ರೈತರು ಒಂದಾಗಿ 200 ರಿಂದ 300 ಎಕರೆಯಲ್ಲಿ ಗುಂಪು ಕೃಷಿ ಚಟುವಟಿಕೆ ಕೈಗೊಂಡರೆ ರಾಜ್ಯ ಸರ್ಕಾರವೇ ರಿಯಾಯಿತಿ ದರದಲ್ಲಿ ಆಧುನಿಕ ಸಲಕರಣೆಗಳನ್ನು ಒದಗಿಸಲಿದೆ. ಇಂತಹ ಗುಂಪುಗಳಿಗೆ ಸಹಕಾರ ಇಲಾಖೆ ಮಾನ್ಯತೆ ನೀಡಲಿದ್ದು, ಇದರಿಂದ ನಿಮಗೆ ಶೂನ್ಯ ಬಡ್ಡಿ ಹಾಗೂ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ.

ಇದನ್ನು ಬಳಕೆ ಮಾಡಿ ಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಬೆಳೆ ತೆಗೆಯಿರಿ. ಇದರ ಲಾಭ ನಿಮಗೂ ಮತ್ತು ಗ್ರಾಹಕರಿಗೂ ಸಿಗಲಿ ಎಂದು ರೈತರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಒಂದು ವೇಳೆ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ದೊರೆಯದಿದ್ದರೆ ಸರ್ಕಾರವೇ ಮಧ್ಯಪ್ರವೇಶ ಮಾಡಿ, ಖರೀದಿ ಮಾಡಲಿದೆ ಎಂಬುದನ್ನು ರೈತರಿಗೆ ತಿಳಿಸಲಿದ್ದಾರೆ. ರೈತ ಸ್ಪಂದನಾ ಹೆಸರಿನಲ್ಲಿ ಮುಖ್ಯಮಂತ್ರಿಯವರು ಸಂವಾದ ನಡೆಸುವ ಕಾರ್ಯಕ್ರಮವನ್ನು ಬೀದರ್ ಜಿಲ್ಲೆಯಿಂದಲೇ ಆರಂಭಿಸಲಿದ್ದಾರೆ. ರೈತರೊಂದಿಗೆ ಸಂವಾದ ನಡೆಸುವ ಮುನ್ನ ಇಲ್ಲಿನ ಚಿಟ್ಟ ಗ್ರಾಮದ ಪ್ರಗತಿಪರ ರೈತರ ಕ್ಷೇತ್ರಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಪರಿಶೀಲನೆ ನಡೆಸಲಿದ್ದಾರೆ.

Translate »