ಪಂಚಭೂತಗಳಲ್ಲಿ ಅನಂತಕುಮಾರ್ ಲೀನ
ಮೈಸೂರು

ಪಂಚಭೂತಗಳಲ್ಲಿ ಅನಂತಕುಮಾರ್ ಲೀನ

November 14, 2018

ಬೆಂಗಳೂರು: ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅನಂತಕುಮಾರ್ ಅವರ ಪಾರ್ಥಿವ ಶರೀರ ಮಂಗಳವಾರ ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾಯಿತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಮುಂಜಾನೆ ಕೊನೆಯುಸಿರೆಳೆದಿದ್ದ ಅನಂತಕುಮಾರ್ ಅವರ ಅಂತ್ಯಕ್ರಿಯೆ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿತು.

ಋಗ್ವೇದ ಆಶ್ವಲಾಯನ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳು ನಡೆದವು. ಅನಂತಕುಮಾರ್ ಅವರ ಸೋದರ ನಂದಕುಮಾರ್, ಪುರೋಹಿತ ಶ್ರೀನಾಥ್ ಮಾರ್ಗದರ್ಶನದಲ್ಲಿ ವಿಧಿ-ವಿಧಾನ ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. 45 ನಿಮಿಷಗಳ ಕಾಲ ಈ ಪ್ರಕ್ರಿಯೆಗಳು ನಡೆದವು. ಸರ್ಕಾರಿ ಗೌರವ ಸಲ್ಲಿಸುತ್ತಿದ್ದಂತೆ ಕುಶಾಲ ತೋಪು ಸಿಡಿಸಿ, ಭಾರತೀಯ ಸೇನೆಯಿಂದಲೂ ಗೌರವ ಸಲ್ಲಿಸಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಆರ್‍ಎಸ್‍ಎಸ್ ಸಹ ಕಾರ್ಯವಾಹ ಭಯ್ಯಾಜಿ ಜೋಷಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಂತಿಮ ನಮನ ಸಲ್ಲಿಸಿದರು.

ರಾಜ್ಯ ಸರ್ಕಾರದ ಪರವಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು. ಅಲ್ಲದೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಬಿಜೆಪಿ ರಾಜ್ಯ ಉಸ್ತು ವಾರಿ ಮುರಳೀಧರ್‍ರಾವ್, ವಿ.ಸೋಮಣ್ಣ, ರವಿಕುಮಾರ್, ಸಂಸದರಾದ ರಮೇಶ್ ಜಿಗಜಿಣಗಿ, ಬಿ.ವೈ.ರಾಘವೇಂದ್ರ ಹಾಗೂ ಶಾಸಕರಾದ ಬಸವರಾಜ್ ಯತ್ನಾಳ್, ಸುನೀಲ್ ಕುಮಾರ್, ಬಸವರಾಜ್ ಬೊಮ್ಮಾಯಿ ಭಾಗಿಯಾಗಿದ್ದರು.

ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಂದೇ ಮಾತರಂ ಗೀತೆ ನಂತರ ಪಾರ್ಥಿವ ಶರೀರವನ್ನು ಚಾಮರಾಜಪೇಟೆ ಹಿಂದೂ ರುದ್ರಭೂಮಿಯತ್ತ ಕೊಂಡೊಯ್ಯಲಾಯಿತು. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ಅನೇಕ ನಾಯಕರು ಅಗಲಿದ ನೆಚ್ಚಿನ ಗೆಳೆಯನನ್ನು ಭಾರವಾದ ಹೃದಯದಿಂದಲೇ ಬೀಳ್ಕೊಟ್ಟರು.

ನೆರೆದಿದ್ದ ಅವರ ಅಭಿಮಾನಿಗಳು, ಕಾರ್ಯಕರ್ತರು, ಸ್ನೇಹಿತರು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು, ವಿವಿಧ ಕ್ಷೇತ್ರಗಳ ಗಣ್ಯರು, ಕೇಂದ್ರ ಸಚಿವರು ಸೇರಿದಂತೆ ಮತ್ತಿತರರು ಅನಂತ್‍ಕುಮಾರ್ ಅಮರ್ ಹೇ, ಮತ್ತೆ ಹುಟ್ಟಿ ಬಾ, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದರು. ನೆರೆದಿದ್ದ ಜನಸ್ತೋಮ ಅನಂತ್‍ಕುಮಾರ್ ಅವರು ಪಕ್ಷಕ್ಕೆ ಸಲ್ಲಿಸಿದ ಸೇವೆ, ಬೆಂಗಳೂರು ಹಾಗೂ ರಾಜ್ಯಕ್ಕೆ ಸಚಿವರಾದ ವೇಳೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಅವರ ನಾಯಕತ್ವವನ್ನು ಗುಣಗಾನ ಮಾಡುತ್ತಿದ್ದರು.

ನೆಚ್ಚಿನ ಸ್ಥಳದಲ್ಲೇ ಅಂತಿಮ ದರ್ಶನ: ಇದಕ್ಕೂ ಮುನ್ನ ಅನಂತ್‍ಕುಮಾರ್ ಪಾರ್ಥಿವ ಶರೀರವನ್ನು ಬೆಳಿಗ್ಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಇದು ಅವರ ನೆಚ್ಚಿನ ತಾಣವೂ ಹೌದು. ಈ ಹಿಂದೆ ಇದೇ ಸ್ಥಳದಲ್ಲಿ ಅವರು ಸಾವಿರಾರು ಬಾರಿ ಭಾಷಣ ಮಾಡಿದ್ದನ್ನು ಅನೇಕರು ಸ್ಮರಿಸಿದರು. ಪಕ್ಷದ ಕಾರ್ಯಕರ್ತರಲ್ಲದೆ, ಮಹಿಳೆ ಯರು, ವೃದ್ಧರು, ವಿದ್ಯಾರ್ಥಿಗಳು, ವಿವಿಧ ಪಕ್ಷಗಳ ಮುಖಂಡರು, ಬೇರೆ ಬೇರೆ ಕ್ಷೇತ್ರದ ಗಣ್ಯರು, ಸಾಹಿತಿಗಳು, ಬರಹಗಾರರು, ಚಿಂತಕರು, ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕರು ಅನಂತ್‍ಕುಮಾರ್ ನೆನೆದು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತೆ ಇತ್ತು.

Translate »