ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆ ಶೇ.53.93ರಷ್ಟು ಮತದಾನ
ಮೈಸೂರು

ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆ ಶೇ.53.93ರಷ್ಟು ಮತದಾನ

November 4, 2018

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ 53.93 ರಷ್ಟು ಮಾತ್ರ ಮತದಾನವಾಗಿದೆ. ಹಲವೆಡೆ ಚುನಾವಣೆಯನ್ನು ಬಹಿಷ್ಕರಿಸಿರುವ ವರದಿಗಳಾಗಿವೆ.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಕ್ಷೇತ್ರ ಮದ್ದೂರಿನಲ್ಲಿ (ಶೇ.57.25) ಅತೀ ಹೆಚ್ಚು ಮತದಾನವಾಗಿದ್ದರೆ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ (ಶೇ.46.87) ಅತೀ ಕಡಿಮೆ ಮತದಾನ ನಡೆದಿದೆ. ಇದರೊಂದಿಗೆ ಕಣದಲ್ಲಿರುವ ಮೈತ್ರಿಕೂಟದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯ ಡಾ.ಸಿದ್ದರಾಮಯ್ಯ ಸೇರಿದಂತೆ 9 ಮಂದಿ ಅಭ್ಯರ್ಥಿಗಳ ಹಣೆಬರಹ ಮತ ಯಂತ್ರ ಸೇರಿದ್ದು, ನ. 6ಕ್ಕೆ ಇವರ ಭವಿಷ್ಯ ಬಹಿರಂಗವಾಗಲಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ.47.18, ಮಳವಳ್ಳಿ ಶೇ. 47.11, ಮೇಲುಕೋಟೆ ಶೇ. 55.93, ಕೆ.ಆರ್.ಪೇಟೆ ಶೇ. 55.75, ಮದ್ದೂರು ಶೇ. 57.25, ಶ್ರೀರಂಗಪಟ್ಟಣ ಶೇ. 56.05, ನಾಗಮಂಗಲ ಶೇ. 56.30, ಕೆ.ಆರ್.ನಗರ ಶೇ. 46.87 ಸೇರಿ ಒಟ್ಟಾರೆ ಜಿಲ್ಲೆಯಲ್ಲಿ ಶೇ.52.63ರಷ್ಟು ಮತದಾನವಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೈಸೂರು ಜಿಲ್ಲೆಯ ಕೆ.ಆರ್.ನಗರ ಸೇರಿ ದಂತೆ 8 ಕ್ಷೇತ್ರಗಳಲ್ಲಿಯೂ ಬೆಳಿಗ್ಗೆ 9 ಗಂಟೆಗೆ ಕೇವಲ ಶೇ 4.18 ರಷ್ಟು ಮತದಾನವಾ ಗಿತ್ತು. ಬೆಳಿಗ್ಗೆ 11ಕ್ಕೆ ಶೇ 13.35, ಮಧ್ಯಾಹ್ನ 1 ಗಂಟೆ ನಂತರ ಶೇ 26.74 ಹಾಗೂ 3 ಗಂಟೆಗೆ ಶೇ 37.7 ಮತದಾನವಾಗಿತ್ತು. ಅಂತಿಮವಾಗಿ ಸಂಜೆ 6ಕ್ಕೆ ಶೇ. 52.75 ಮತದಾನವಾಗಿದೆ. ಎಲ್ಲೆಡೆಯೂ ಮತ ದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಪ್ರಮುಖ ರಾಜಕಾರಣಿಗಳು ತಮ್ಮ ಹಕ್ಕು ಚಲಾಯಿಸಿದರು.

ಸಚಿವ ಪುಟ್ಟರಾಜು, ಮೇಲುಕೋಟೆ ಕ್ಷೇತ್ರದ ಚಿನಕುರಳಿ ಗ್ರಾಮದಲ್ಲಿ ಬೆಳಿಗ್ಗೆ 7:30ಕ್ಕೆ, ಸಚಿವ ಡಿ.ಸಿ.ತಮ್ಮಣ್ಣ ಮದ್ದೂರು ಕ್ಷೇತ್ರದ ದೊಡ್ಡರಸಿಕೆರೆ ಯಲ್ಲಿ ಬೆಳಿಗ್ಗೆ 11:30ಕ್ಕೆ, ಶಾಸಕ ಸುರೇಶ್‍ಗೌಡ ನಾಗಮಂಗಲ ಟೌನ್‍ನಲ್ಲಿ ಬೆಳಿಗ್ಗೆ 10ಕ್ಕೆ, ಶಾಸಕ ನಾರಾಯಣಗೌಡ ಕೆ.ಆರ್.ಪೇಟೆ ಟೌನ್‍ನಲ್ಲಿ ಬೆಳಿಗ್ಗೆ 11ಕ್ಕೆ, ಶಾಸಕ ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ಕ್ಷೇತ್ರದ ಅರಕೆರೆ ಗ್ರಾಮದಲ್ಲಿ ಮಧ್ಯಾಹ್ನ 12ಕ್ಕೆ ಮತದಾನ ಮಾಡಿದರು. ಶಾಸಕ ಅನ್ನದಾನಿ ಮಳವಳ್ಳಿ ಕ್ಷೇತ್ರದ ಹುಸ್ಕೂರು ಗ್ರಾಮದಲ್ಲಿ ಬೆಳಿಗ್ಗೆ 9ಕ್ಕೆ, ಶಾಸಕ ಶ್ರೀನಿವಾಸ್ ಮಂಡ್ಯ ಕ್ಷೇತ್ರದ ಹನಕೆರೆ ಗ್ರಾಮದಲ್ಲಿ ಬೆಳಿಗ್ಗೆ 9:30ಕ್ಕೆ, ಸಚಿವ ಸಾ.ರಾ.ಮಹೇಶ್ ಕೆ.ಆರ್.ನಗರ ಕ್ಷೇತ್ರದ ಸಾಲಿಗ್ರಾಮದಲ್ಲಿ ಬೆಳಿಗ್ಗೆ 10ಕ್ಕೆ, ಮಾಜಿ ಸಚಿವ ಅಂಬರೀಶ್ ಮದ್ದೂರು ಕ್ಷೇತ್ರದ ದೊಡ್ಡರಸಿಕೆರೆ ಗ್ರಾಮದಲ್ಲಿ ಬೆಳಿಗ್ಗೆ 11:30ಕ್ಕೆ, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಮಂಡ್ಯದ ಯತ್ತಗದಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ 7ಕ್ಕೆ ಹಾಗೂ ಮೈತ್ರಿ ಕೂಟದ ಅಭ್ಯರ್ಥಿ ಎಲ್.ಆರ್. ಶಿವರಾಮೇ ಗೌಡ ನಾಗಮಂಗಲ ಟೌನ್‍ನಲ್ಲಿ ಬೆಳಿಗ್ಗೆ 7ಕ್ಕೆ ಮತದಾನ ಮಾಡಿದರು.

ಸಚಿವ ಎನ್.ಚಲುವರಾಯಸ್ವಾಮಿ ನಾಗಮಂಗಲ ಕ್ಷೇತ್ರದ ಇಜ್ಜಳಘಟ್ಟ ಗ್ರಾಮದಲ್ಲಿ ಮಧ್ಯಾಹ್ನ 12ಕ್ಕೆ, ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮದ್ದೂರು ಕ್ಷೇತ್ರದ ಕೊಪ್ಪ ಗ್ರಾಮದಲ್ಲಿ ಬೆಳಿಗ್ಗೆ 10ಕ್ಕೆ, ಪರಿಷತ್ ಸದಸ್ಯ ಅಪ್ಪಾಜಿಗೌಡ ಮದ್ದೂರು ಕ್ಷೇತ್ರದ ಕಸಲಗೆರೆ ಗ್ರಾಮದಲ್ಲಿ ಬೆಳಿಗ್ಗೆ 11ಕ್ಕೆ ತಮ್ಮ ಹಕ್ಕು ಚಲಾಯಿಸಿದರು.

ಜಮಖಂಡಿ ಶೇ.77.17

ಬಾಗಲಕೋಟೆ, ನ.3- ವಿಧಾನಸಭೆಯ ಉಪ ಚುನಾ ವಣೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಜಮಖಂಡಿಯಲ್ಲಿ ಶೇ. 77.17ರಷ್ಟು ಮತದಾನವಾಗಿದ್ದು, ಎಲ್ಲರ ದೃಷ್ಟಿ ನ.6ರಂದು ನಡೆಯಲಿರುವ ಮತ ಎಣಿಕೆಯತ್ತ ನೆಟ್ಟಿದೆ. ಶನಿವಾರ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಿನಿಂದ ಆರಂಭಗೊಂಡಿತು. ಬೆಳಗಿನ ಜಾವ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಆಗಮಿಸಿದರು. ಆದರೆ, ಮಧ್ಯಾಹ್ನದ ವೇಳೆ ಮತದಾನ ನೀರಸ ವಾಗಿತ್ತು. ಬಿಸಿಲಿನ ಪ್ರಖರತೆಯಿಂದ ಮತದಾರರು ಮನೆ ಬಿಟ್ಟು ಹೊರಗೆ ಬಾರದೇ ಇದ್ದುದರಿಂದ ಮತದಾನ ಪ್ರಕ್ರಿಯೆ ಮಧ್ಯಾಹ್ನ ಅಷ್ಟೊಂದು ಬಿರುಸಾಗಿ ಇರಲಿಲ್ಲ. ಆದರೆ ಸಂಜೆ ವೇಳೆ ಬಿರುಸಿನ ಮತದಾನ ನಡೆಯಿತು. ಕಾಂಗ್ರೆಸ್‍ನಿಂದ ದಿ. ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್ ನ್ಯಾಮಗೌಡ ಸ್ಪರ್ಧಿಸಿದ್ದರೆ, ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಪ್ರತಿಸ್ಪರ್ಧಿ.

ಬಳ್ಳಾರಿ ಶೇ.63.85

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ವ್ಯಾಪ್ತಿಗೆ ಬರುವ ಜಿಲ್ಲೆಯ ಸಿರುಗುಪ್ಪ ಹೊರತುಪಡಿಸಿ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಕಂಪ್ಲಿ, ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಹೂವಿನ ಹಡಗಲಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಶಾಂತಿ ಯುತ ಮತದಾನ ನಡೆಯಿತು. ಜಿಲ್ಲೆಯಲ್ಲಿ ಶೇ.63.85ರಷ್ಟು ಮತ ದಾನ ನಡೆದಿದೆ.

ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಮತದಾರರು ಮಾತ್ರ ಮತಗಟ್ಟೆ ಬಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಪುರುಷರು ನಿರುತ್ಸಾಹದಿಂದ ಒಬ್ಬೊಬ್ಬ ರಾಗಿ ಮತಗಟ್ಟೆಗೆ ಬರುತ್ತಿದ್ದುದು ಕಂಡುಬಂತು. ಆದರೂ ಮತಗಟ್ಟೆ ಬಳಿ ನೆರೆದಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಮತ್ತು ಮತದಾರರಲ್ಲಿ ಉತ್ಸಾಹ ಕಂಡುಬರಲಿಲ್ಲ. ಕತ್ತಲಲ್ಲಿ ಕುರುಡು ಕಾಂಚಾಣ ಕುಣಿದಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇಲ್ಲಿ ಬಿಜೆಪಿಯಿಂದ ಮಾಜಿ ಸಂಸದೆ ಶಾಂತ ಕಣದಲ್ಲಿದ್ದರೆ, ಇವರ ವಿರುದ್ಧ ಕಾಂಗ್ರೆಸ್‍ನ ವಿ.ಎಸ್.ಉಗ್ರಪ್ಪ ಸ್ಪರ್ಧಿಸಿದ್ದಾರೆ.

ಶಿವಮೊಗ್ಗ ಶೇ.61.05

ಶಿವಮೊಗ್ಗ, ನ.3- ಜಿಲ್ಲೆಯಲ್ಲಿ ಶೇ.61.05ರಷ್ಟು ಮತದಾನವಾಗಿದೆ. ಹೊಸನಗರ ತಾಲೂಕಿನ ನೆಲಗಳಲೆ 190ನೇ ಮತ ಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ 2 ಗಂಟೆ ತಡವಾಗಿ ಮತದಾನ ಆರಂಭ ವಾಯಿತು. ಶಿವಮೊಗ್ಗ ತಾಲೂಕಿನ ಅಡಗಡಿ ಮತಗಟ್ಟೆ ಸೇರಿದಂತೆ ಕೆಲ ಮತಗಟ್ಟೆಗಳಲ್ಲಿಯೂ ಮತಯಂತ್ರದಲ್ಲಿ ದೋಷ ಕಂಡು ಬಂದಿತ್ತು. ಜತೆಗೆ ವಿದ್ಯುತ್ ವ್ಯತ್ಯಯದಿಂದಲೂ ಮತದಾನ ವಿಳಂಬವಾ ಗಿತ್ತು. ಶಿಕಾರಿಪುರ ತಾಲೂಕಿನ 124ನೇ ಮತಗಟ್ಟೆ ಹಾಗೂ ಈಸೂರಿನ 207 ಮತಗಟ್ಟೆಯಲ್ಲಿ ಮತಯಂತ್ರದ ಬಟನ್ ಸ್ಥಗಿತಗೊಂಡು ವಿಳಂಬವಾಗಿತ್ತು. ಸಾಗರ ತಾಲೂಕು ತಾಳಗುಪ್ಪ ದಲ್ಲಿಯೂ ವಿವಿ ಪ್ಯಾಡ್ ಕೈಕೊಟ್ಟಿತ್ತು. ಎಲ್ಲ ಕಡೆಗಳಲ್ಲಿಯೂ ತಾಂತ್ರಿಕ ದೋಷ ಪರಿಹರಿಸುವ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ಮತದಾನ ಕಾರ್ಯವನ್ನು ಸುಗಮಗೊಳಿಸಿದರು.

ಗಣ್ಯರ ಮತದಾನ: ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರೂ ಒಟ್ಟಾಗಿ ಬಂದು ಮತದಾನ ಮಾಡಿದರು.

ಇದಕ್ಕೂ ಮುನ್ನ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಕುಟುಂಬ ಕಾರ್ಯಕರ್ತರೊಂದಿಗೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ರಾಮನಗರ ಶೇ.71.88

ರಾಮನಗರ, ನ.3- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಸ್ಪರ್ಧೆಯ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಶಾಂತಿಯುತವಾಗಿ ನಡೆದಿದೆ. ಈ ಬಾರಿ ಶೇ.71.88ರಷ್ಟು ಮತಗಳು ಚಲಾವಣೆಗೊಂಡಿವೆ. ಬೆಳಿಗ್ಗೆ ಮಂದಗತಿಯಲ್ಲಿ ಪ್ರಾರಂಭಗೊಂಡ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕವೂ ಚುರುಕು ಪಡೆದುಕೊಳ್ಳಲಿಲ್ಲ. 3 ಗಂಟೆ ನಂತರ ಸ್ವಲ್ಪ ಮಟ್ಟಿಗೆ ಬಿರುಸುಗೊಂಡು ಸಂಜೆ ವೇಳೆಗೆ ಮತಗಟ್ಟೆಗಳತ್ತ ದೌಡಾಯಿಸಿದ ಮತದಾರರು ಮತ ಚಲಾಯಿಸಿದರು. ಬೆಳಿಗ್ಗೆ 9ರ ವೇಳೆಗೆ ಶೇ.8, 11ರ ವೇಳೆಗೆ ಶೇ.16, ಮಧ್ಯಾಹ್ನ 1 ಗಂಟೆಗೆ ಶೇ.40, 3 ಗಂಟೆಗೆ ಶೇ.54, ಸಂಜೆ 5ಕ್ಕೆ ಶೇ.67.22ರಷ್ಟು ಮತದಾನವಾಗಿತ್ತು.

3ರಿಂದ ಸಂಜೆ 6ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪರಿಣಾಮ ಅಂತಿಮ ವಾಗಿ ಶೇ.71.88ರಷ್ಟು ಮತದಾನವಾಯಿತು. ರಾಮನಗರ ಕ್ಷೇತ್ರದಲ್ಲಿ ಹಿಂದಿನಿಂದಲೂ ಜೆಡಿಎಸ್-ಕಾಂಗ್ರೆಸ್ ಪಕ್ಷಗಳೇ ಪರಸ್ಪರ ಪ್ರತಿಸ್ಪರ್ಧಿಗಳಾಗುತ್ತಿದ್ದವು. ಆದರೆ, ಈ ಬಾರಿ ಉಭಯ ಪಕ್ಷಗಳು ದೋಸ್ತಿಗಳಾಗಿ ಚುನಾವಣೆ ಎದುರಿಸಿದ ಪರಿಣಾಮ ಕಾರ್ಯಕರ್ತರ ನಡುವೆ ಯಾವುದೇ ಮಾತಿನ ಚಕಮಕಿ, ಹೊಡೆದಾಟ, ಬಡಿದಾಟ ಕಂಡು ಬರಲಿಲ್ಲ. ಜತೆಗೆ ಬಿಜೆಪಿ ಅಭ್ಯರ್ಥಿ ಚುನಾವಣಾ ಕಣದಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಶಾಂತಿಯುತ ಮತದಾನ ನಡೆಯಿತು.

Translate »