ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ಪಟಾಕಿಗಳನ್ನು ರಾತ್ರಿ 8ರಿಂದ 10 ಗಂಟೆ ವರೆಗಷ್ಟೇ ಸಿಡಿಸಲು ರಾಜ್ಯ ಸರ್ಕಾರ ಸಮಯ ನಿಗದಿ ಪಡಿಸಿದೆ. ಅಷ್ಟೇ ಅಲ್ಲ, ಪಟಾಕಿಗಳನ್ನು ದೀಪದ ಹಬ್ಬದ ಹಿಂದಿನ ಮತ್ತು ನಂತರದ ಏಳು ದಿನ ಮಾತ್ರ ಸಿಡಿಸ ಬಹುದಾಗಿದೆ. ಸರಣಿ ಸ್ಫೋಟದ ಪಟಾಕಿಗಳನ್ನು ಸಾಮೂಹಿಕವಾಗಿ ಬಯಲು ಪ್ರದೇಶದಲ್ಲಿ ಮಾತ್ರ ಸುಡ ಬಹುದಾಗಿದೆ
ಎಂದು ನಿರ್ಬಂಧವನ್ನೂ ವಿಧಿಸಲಾಗಿದೆ.
ಒಂದು ವೇಳೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣಾ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಲಾಗಿದೆ. ಪರಿಸರ ಹಾಳುಗೆಡವದಂತೆ ದೀಪದ ಹಬ್ಬ ದೀಪಾವಳಿ ಆಚರಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಬ್ಬ ಆಚರಿಸಲು ಸರಣಿ ಸ್ಫೋಟಕ ಪಟಾಕಿಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ನಿಷೇಧಿಸಿ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಸ್ಫೋಟಕ ಪಟಾಕಿಗಳನ್ನು ಪರವಾನಗಿ ಪಡೆದವರು ಮಾತ್ರ ಆದೇಶಾನುಸಾರ ಮಾರಾಟ ಮಾಡಬಹುದಾಗಿದ್ದು, ಪಟಾಕಿ ಸಿಡಿಸುವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಹಾಗೂ ಅಪಾಯಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತದ ಎಲ್ಲಾ ವಿಭಾಗಗಳು ವ್ಯಾಪಕ ಪ್ರಚಾರ ನಡೆಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು 14 ದಿನಗಳ ಕಾಲ, ಅಂದರೆ ದೀಪಾವಳಿ ಹಬ್ಬ ಪ್ರಾರಂಭವಾಗುವ ಏಳು ದಿನ ಮೊದಲಿನಿಂದ, ದೀಪಾವಳಿ ಹಬ್ಬದ ನಂತರದ ಏಳು ದಿನಗಳವರೆಗೆ ಪಟಾಕಿ ಸಿಡಿಸುವುದರ ಬಗ್ಗೆ ಮೇಲ್ವಿಚಾರಣೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.