ಸ್ಥಳೀಯ ಮೈತ್ರಿ ಸಮನ್ವಯತೆ ವಿಚಾರದಲ್ಲಿ ಸಚಿವ ಜಿಟಿಡಿ ಬೇಸರ
ಮೈಸೂರು

ಸ್ಥಳೀಯ ಮೈತ್ರಿ ಸಮನ್ವಯತೆ ವಿಚಾರದಲ್ಲಿ ಸಚಿವ ಜಿಟಿಡಿ ಬೇಸರ

April 2, 2019

ಮೈಸೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರು ಮೈತ್ರಿ ಧರ್ಮ ಪರಿ ಪಾಲನೆಯ ಆದೇಶ ನೀಡಿದ್ದರೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳ ನಡುವೆ ಸಮನ್ವಯತೆ ಮೂಡಿರಲಿಲ್ಲ.

ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಿ.ಹೆಚ್.ವಿಜಯಶಂಕರ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದ ನಂತರದಲ್ಲಿ ಉಭಯ ಪಕ್ಷಗಳ ನಡು ವಿನ ಅಂತರ ಹೆಚ್ಚಾದಂತೆ ಕಂಡು ಬಂದಿತ್ತು. ಇದಕ್ಕೆ ಇಂಬು ನೀಡುವಂತೆ ಸ್ಥಳೀಯವಾಗಿ ಜೆಡಿಎಸ್ ಪ್ರಭಾವಿ ನಾಯಕರಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ದೂರ ಉಳಿದಿದ್ದರು. ವರಿಷ್ಠರ ಆದೇಶದಂತೆ ಸಚಿವ ಸಾ.ರಾ.ಮಹೇಶ್, ಮೈತ್ರಿ ಅಭ್ಯರ್ಥಿ ವಿಜಯಶಂಕರ್ ನಾಮಪತ್ರ ಸಲ್ಲಿಸುವ ಸಂದರ್ಭ ದಲ್ಲಿ ಹಾಜರಿದ್ದು, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದರು.

ಆದರೆ ಸಚಿವ ಜಿ.ಟಿ.ದೇವೇಗೌಡರು ಪೂರ್ವ ಯೋಜಿತ ಕಾರ್ಯಕ್ರಮಗಳ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಅಭ್ಯರ್ಥಿ ಘೋಷಣೆ ಬಳಿಕ ಜಿ.ಟಿ. ದೇವೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್‍ನ ಕೆಲವರು ಅಸಡ್ಡೆ ಪ್ರದರ್ಶಿಸಿದ್ದು ಜಿಟಿಡಿ ಅಸಮಾಧಾನಕ್ಕೆ ಕಾರಣ ಎನ್ನಲಾಗಿತ್ತು. ಮೈತ್ರಿ ಅಭ್ಯರ್ಥಿ ವಿಜಯಶಂಕರ್, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಭೇಟಿಗೆ ಅಪೇಕ್ಷಿಸಿದಾಗ ಜಿಟಿಡಿ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ದ್ದದ್ದು, ಕಾಂಗ್ರೆಸ್-ಜೆಡಿಎಸ್ ಜಂಟಿ ಸುದ್ದಿಗೋಷ್ಠಿ ಹಾಗೂ ಚುನಾವಣಾ ಪ್ರಚಾರದ ವಿಚಾರಗಳ ಬಗ್ಗೆ ತಡವಾಗಿ ತಿಳಿಸಿದ್ದು, ಹೀಗೆ ಹಲವು ಕಾರಣಗಳಿಂದ ಉಭಯ ಪಕ್ಷಗಳ ನಾಯಕರ ಬೇಸರಕ್ಕೆ ಕಾರಣ ವಾಗಿತ್ತು ಎಂದು ತಿಳಿದುಬಂದಿದೆ.

ಹಲವು ದಿನಗಳ ಬಳಿಕ ಮೈಸೂರಿಗೆ ಆಗ ಮಿಸಿದ ಜಿಟಿಡಿ, ಸ್ಥಳೀಯವಾಗಿ ಮೈತ್ರಿ ಪಕ್ಷಗಳ ನಡುವೆ ಸಮನ್ವಯತೆ ಕೊರತೆಯಿದೆ ಎಂದು ಕೆಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರ ಹಿನ್ನೆಲೆ ಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳ ನಿಯೋಗ ಜಿಟಿಡಿ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿತು. ಈ ವೇಳೆ ಮೈತ್ರಿ ಸಮನ್ವಯತೆ ವಿಚಾರದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರಿಗೆ ಮನಃಸ್ತಾಪ ಆಗಿದೆ ಎಂಬುದನ್ನು ಒಪ್ಪಿದ ತನ್ವೀರ್‍ಸೇಠ್, ಸೈದ್ಧಾಂತಿಕ ರಾಜಕೀಯ ಮಾಡಿಕೊಂಡು ಬಂದಿರುವ ಇವರು, ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಸಮನ್ವಯ ಸಂದೇಶ: ಕೆಲವೊಂದು ವೈಯಕ್ತಿಕ ಕಾರಣಗಳಿಂದ ಹಾಗೂ ಪೂರ್ವಯೋಜಿತ ಕಾರ್ಯಕ್ರಮಗಳಿಂದಾಗಿ ಜಿ.ಟಿ.ದೇವೇಗೌಡರು ಮೈಸೂರಿನಲ್ಲಿ ಇರಲಿಲ್ಲ. ಜೊತೆಗೆ ಸಮ್ಮಿಶ್ರ ಸರ್ಕಾರದ ಮೈತ್ರಿ ಧರ್ಮ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ಕೆಲವು ವಿಚಾರಗಳಲ್ಲಿ ಮನಃಸ್ತಾಪ ಆಗಿದೆ. ಸಂವಹನ ಕೊರತೆ, ಕೆಲವರ ಮಾತು ಗಳನ್ನು ಅರ್ಥೈಸಿಕೊಳ್ಳುವಲ್ಲಿ ವ್ಯತ್ಯಾಸವಾಗಿರು ವುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಜಿಟಿಡಿ ಹಿಂದಿನಿಂದಲೂ ಸಿದ್ಧಾಂತಗಳಿಗೆ ಬದ್ಧರಾಗಿ ರಾಜ ಕಾರಣ ಮಾಡಿಕೊಂಡು ಬಂದಿದ್ದಾರೆ. ಇವ ರೆಂದೂ ವರಿಷ್ಠರ ಗೆರೆಯನ್ನು ದಾಟುವುದಿಲ್ಲ. ತಾಯಿ ಚಾಮುಂಡೇಶ್ವರಿ ನೆಲದಲ್ಲಿ ಕೈಗೊಂಡ ನಿರ್ಧಾರಗಳಿಂದ ರಾಜ್ಯಕ್ಕೆ ಸಂದೇಶ ಸಾರಿದ ನಿದರ್ಶನವಿದೆ. ಹಾಗಾಗಿ ಒಂದು ವಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ ಕರೆದು, ಸಮನ್ವಯತೆ ಸಂದೇಶವನ್ನು ಇಡೀ ರಾಜ್ಯಕ್ಕೆ ಸಾರುತ್ತೇವೆಂದು ತಿಳಿಸಿದರು. ಜಿ.ಟಿ.ದೇವೇಗೌಡರು ಮೈಸೂರಿನಲ್ಲಿ ಇಲ್ಲ ಎಂಬ ವಿಚಾರ ಕೆಲವರಲ್ಲಿ ಸಂಶಯ ಮೂಡಿಸಿತ್ತು. ಆದರೆ ನಮಗೆ ಯಾವುದೇ ಸಂಶಯವಿಲ್ಲ. ನಾವೆಂದೂ ವರಿಷ್ಠರ ತೀರ್ಮಾನ ಮೀರಿದವರಲ್ಲ. ಈಗಷ್ಟೇ ಚುನಾವಣಾ ಕಾವು ಹೆಚ್ಚಿದೆ. ನರಸಿಂಹರಾಜ ಕ್ಷೇತ್ರದಲ್ಲಿ ನಾನು ಹಾಗೂ ಅಬ್ದುಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ ಏ.8ರಂದು ನಡೆಯಲಿರುವ ಪ್ರಚಾರ ಕಾರ್ಯದಲ್ಲಿ ಜಿ.ಟಿ.ದೇವೇಗೌಡರೂ ಭಾಗಿಯಾಗುತ್ತಾರೆ. ಅದಕ್ಕೂ ಮುನ್ನ ಜಂಟಿ ಪತ್ರಿಕಾಗೋಷ್ಠಿ ಮೂಲಕ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಗೆಲುವಿಗೆ ರೂಪುರೇಷೆ ಸಿದ್ಧಪಡಿಸುವುದು, ಉಭಯ ಪಕ್ಷಗಳ ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಜಿಟಿಡಿ ಭೇಟಿ ಮಾಡಿದ ನಿಯೋಗದಲ್ಲಿ ತನ್ವೀರ್‍ಸೇಠ್ ಅವರೊಂದಿಗೆ ಮೇಯರ್ ಪುಷ್ಪಲತಾ ಜಗನ್ನಾಥ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮಾಜಿ ಮೇಯರ್ ಅಯೂಬ್‍ಖಾನ್, ಉಪಾಧ್ಯಕ್ಷರಾದ ಪ್ರಕಾಶ್‍ಕುಮಾರ್, ಹೆಡತಲೆ ಮಂಜುನಾಥ್, ತಾಪಂ ಸದಸ್ಯ ದಾಸನೂರು ಪದ್ಮನಾಬ್, ಪ್ರಧಾನ ಕಾರ್ಯ ದರ್ಶಿ ಗಿರೀಶ್, ಕಾಂಗ್ರೆಸ್ ವಕ್ತಾರ ಮಹೇಶ್, ಕೆಪಿಸಿಸಿ ಸದಸ್ಯ ಮಂಜುನಾಥ್, ಮುಖಂಡ ರಾದ ಅಬ್ದುಲ್‍ಖಾದರ್, ಶ್ರೀನಾಥ್‍ಬಾಬು, ನಾಗೇಶ್ ಕರಿಯಪ್ಪ, ತಿವಾರಿ ಮಂಜು ನಾಥ್, ಮಂಜು ಸೇರಿದಂತೆ ಅನೇಕ ಮುಖಂಡರಿದ್ದರು. ಜೆಡಿಎಸ್ ಮುಖಂಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್(ಅಬ್ದುಲ್ಲಾ) ಉಪಸ್ಥಿತರಿದ್ದರು.

ಜೆಡಿಎಸ್ ಕಾರ್ಯಕರ್ತರ ವಿರೋಧ
ಮೈಸೂರು: ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯ ಶಂಕರ್ ಪರ ಪ್ರಚಾರಕ್ಕೆ ಬರಬಾರದೆಂದು ತಮಗೆ ಪಕ್ಷದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟು ಕೊಡಲಾಗಿದೆ. ಆದರೆ ಅಭ್ಯರ್ಥಿ ಆಯ್ಕೆಗೂ ಮುನ್ನವೇ ಈ ಭಾಗದ ಜೆಡಿಎಸ್ ಶಾಸಕರುಗಳಾದ ಎ.ಹೆಚ್. ವಿಶ್ವನಾಥ್, ಮಹ ದೇವ್ ಮತ್ತು ತಮ್ಮನ್ನು ಸೇರಿಸಿ ಸಭೆ ಮಾಡಿ ಚರ್ಚಿಸಬೇಕಾಗಿತ್ತು. ಆದರೆ, ಆ ಕೆಲಸ ನಡೆದಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸಾ.ರಾ.ಮಹೇಶ್ ಅವರ ನಡುವೆ ಏನು ನಡೆದಿದೆಯೋ ಗೊತ್ತಿಲ್ಲ. ಈವರೆವಿಗೂ ಸಾ.ರಾ. ಮಹೇಶ್ ಅವರು ನನ್ನ ಜೊತೆ ಏನನ್ನೂ ಹೇಳಿಲ್ಲ. ಆದರೆ, ವಿಜಯಶಂಕರ್ ನಾಮಪತ್ರ ಸಲ್ಲಿಸುವ ದಿನ ನನಗೆ ಕರೆ ಮಾಡಿ ದೇವೇಗೌಡರು ಹೇಳಿದ್ದಾರೆ. ನೀವು ನಾಮಪತ್ರ ಸಲ್ಲಿಕೆಗೆ ಬರಬೇಕು ಎಂದರು. ಆಗ ನಾನು ಗುಲ್ಬರ್ಗಾದಲ್ಲಿ ಒಂದು ವಿವಿ ಉದ್ಘಾಟನೆಗೆ ತೆರಳುತ್ತಿದ್ದೆ. ಅದನ್ನು ಅವರಿಗೆ ತಿಳಿಸಿದೆ ಎಂದರು. ಕಾಂಗ್ರೆಸ್‍ನವರು ಬಹಳ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಅವರು ಮುದ್ರಿಸಿರುವ ಕರಪತ್ರ ಗಳಲ್ಲಿ ಹೆಚ್.ಡಿ.ದೇವೇಗೌಡರು, ಸಿಎಂ ಕುಮಾರ ಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡರ ಫೋಟೊ ಬಿಟ್ಟರೆ ಜೆಡಿಎಸ್ ಶಾಸಕರಾಗಿರುವ ವಿಶ್ವನಾಥ್, ಮಹದೇವು ಮತ್ತು ನನ್ನ ಫೋಟೊಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಹೆಚ್.ಸಿ.ಮಹದೇವಪ್ಪ ಮತ್ತು ಸಿ.ಹೆಚ್. ವಿಜಯಶಂಕರ್ ಫೋನ್ ಮಾಡಿ ಮಾತನಾಡಿ, ದ್ದಾರೆ. ಆದರೆ ನಾನು ಪ್ರಚಾರಕ್ಕೆ ಬರಬಾರ ದೆಂದು ಕಾರ್ಯಕರ್ತರ ಒತ್ತಡವಿದೆ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದ ರಿಂದ ನಾನು ಬೇರೆ ನಿರ್ಧಾರ ಕೈಗೊಳ್ಳಲು ಸಾಧ್ಯ ವಿಲ್ಲ. ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರ ಜೊತೆ ಚರ್ಚಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ ಎಂದರು.
ನನ್ನೊಬ್ಬನಿಂದಲೇ ಚುನಾವಣೆಯಲ್ಲಿ ಅಭ್ಯರ್ಥಿ ಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ. ವಿಧಾನಸಭಾ ಚುನಾವಣೆ ಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಜಿ.ಟಿ.ದೇವೇಗೌಡರನ್ನು ಗೆಲ್ಲಿಸಬೇಕು ಹಾಗೂ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂದು ಕೆಲಸ ಮಾಡಿದ್ದರು. ಈ ಚುನಾವಣೆ ವಿಚಾರ ಹಾಗಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಅಭ್ಯ ರ್ಥಿಗೆ ಚಾಮುಂಡೇಶ್ವರಿಯಲ್ಲಿ ಎಷ್ಟು ಮತ ಲೀಡ್ ಸಿಗಬಹುದು ಎಂದು ಈಗಲೇ ನಾನು ಹೇಳಲು ಸಾಧ್ಯವಿಲ್ಲ. ಕೆಲವರು ಬೇಕಾದರೆ ಏನೇ ಗೆಲ್ಲಿಸಿ ಬಿಡು ತ್ತೇನೆ ಎಂದು ಹೇಳಿಕೊಳ್ಳಬಹುದು. ಅವರ ಹಾಗೆ ನಾನು ಹೇಳಲು ಸಾಧ್ಯವಿಲ್ಲ ಎಂದರು.

ವಿಧಾನಸಭೆ ಚುನಾವಣೆ ಮುಗಿದು ಇನ್ನೂ ಒಂದು ವರ್ಷವೂ ಕಳೆದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೇ ಇನ್ನೂ ಗುದ್ದಾಟ ನಡೆಯುತ್ತಿದೆ. ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ ಜಿ.ಟಿ.ದೇವೇ ಗೌಡ, ಮೈತ್ರಿ ಅಭ್ಯರ್ಥಿ ಹಾಕುವುದಕ್ಕಿಂತ ಫ್ರೆಂಡ್ಲಿ ಫೈಟ್ ನಡೆದಿದ್ದರೆ ಚೆನ್ನಾಗಿತ್ತು ಎಂದು ಅಭಿಪ್ರಾಯಪಟ್ಟರು.

ವಾರದಲ್ಲಿ ಮೈತ್ರಿ ಸಂದೇಶ
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಜಿ.ಟಿ. ದೇವೇಗೌಡರು, ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಒಟ್ಟಾಗಿದ್ದೇವೆ ಎಂಬ ಸಂದೇಶ ನೀಡಬೇಕೆಂದು ಇಂದು ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಕೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷರಾದ ಎ.ಹೆಚ್.ವಿಶ್ವನಾಥ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್, ಮೈಸೂರು ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಕೊಡಗಿನ ಮಾಜಿ ಸಚಿವ ಜೀವಿಜಯ ಸೇರಿದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರೊಂದಿಗೆ ಮಾತನಾಡಿ ಕಾಂಗ್ರೆಸ್-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಗೆ ದಿನಾಂಕ ನಿಗದಿ ಮಾಡುವಂತೆ ಕೇಳಿ ಕೊಂಡಿದ್ದಾರೆ. ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರೂ ದೂರವಾಣಿ ಯಲ್ಲಿ ಮಾತನಾಡಿ, ಕೊಡಗಿನಲ್ಲಿ ಪ್ರಚಾರ ಮುಗಿಸಿಕೊಂಡು ನಿಮ್ಮನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ. ಈ ಬಗ್ಗೆ ನಮ್ಮ ಜೆಡಿಎಸ್ ರಾಜ್ಯಾಧ್ಯಕ್ಷ ರಾದ ಎ.ಹೆಚ್.ವಿಶ್ವನಾಥ್ ಅವರೊಂದಿಗೆ ನಾನು ಮಾತನಾಡಿದ್ದೇನೆ ಎಂದರು. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ವಿದೆ. ಈಗಷ್ಟೆ ಎಲ್ಲಾ ಲೋಕಸಭಾ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿಸಿ, ಬೆಂಗಳೂರಿನಲ್ಲಿ ಬೃಹತ್ ಪರಿವರ್ತನಾ ಸಮಾವೇಶ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲಾಗಿದೆ. ವರಿಷ್ಠರಾದ ಹೆಚ್.ಡಿ.ದೇವೇ ಗೌಡರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಉಭಯ ಪಕ್ಷಗಳ ಎಲ್ಲಾ ನಾಯಕರೂ ಪಾಲ್ಗೊಂಡು ಸಮನ್ವಯತೆ ಸಂದೇಶ ಸಾರಿದ್ದಾರೆ. ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಉಭಯ ಪಕ್ಷಗಳ ನಾಯಕರೂ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್‍ನ ಸ್ಥಳೀಯ ನಾಯಕರು, ಮುಖಂಡರು ನನ್ನನ್ನು ಭೇಟಿ ಮಾಡಿ, ಮಾತನಾಡಿದ್ದಾರೆ. ಹಾಗಾಗಿ ಒಂದು ವಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಸಮನ್ವಯತೆ ಸಂದೇಶ ನೀಡುವ ಕೆಲಸ ಮಾಡುತ್ತೇವೆ ಎಂದು ಜಿಟಿಡಿ ಸ್ಪಷ್ಟಪಡಿಸಿದರು.

Translate »