ಸುಮಲತಾ ಪರ ‘ದರ್ಶನ್’ ರೋಡ್ ಶೋ
ಮೈಸೂರು

ಸುಮಲತಾ ಪರ ‘ದರ್ಶನ್’ ರೋಡ್ ಶೋ

April 2, 2019

ಶ್ರೀರಂಗಪಟ್ಟಣ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚಿತ್ರನಟ ದರ್ಶನ್ ಅವರು ಇಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಾದ್ಯಂತ ರೋಡ್ ಶೋ ನಡೆಸುವ ಮೂಲಕ ಅಬ್ಬರದ ಪ್ರಚಾರ ನಡೆಸಿದರು.

ಇಂದು ಬೆಳಿಗ್ಗೆ ಕೆಆರ್‍ಎಸ್‍ನ ಅರಳೀಕಟ್ಟೆ ಬಳಿ ಅಂಬರೀಶ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿ ಮಾತನಾಡಿದ ಅವರು, ಈ ಚುನಾವಣೆ ವೇಳೆಯಲ್ಲಿ ಯಾರ್ಯಾರು ಏನೇನೋ ಮಾತನಾಡುತ್ತಿದ್ದಾರೆ. ನಾನು, ಅದಕ್ಕೆಲ್ಲಾ ಉತ್ತರ ನೀಡುವುದಿಲ್ಲ. ನೀವು ಸುಮಲತಾ ಅವರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಅವರಿಗೆ ಉತ್ತರ ಕೊಡಿ ಎಂದು ಮನವಿ ಮಾಡಿದರು. ಅಂಬರೀಶ್ ಅವರು ಶಾಸಕರಾಗಿ, ಸಂಸದರಾಗಿ, ಕೇಂದ್ರ ಮತ್ತು ರಾಜ್ಯದ ಸಚಿವರಾಗಿ ಅಧಿಕಾರ ನಡೆಸಿದ್ದಾರೆ. ಅವರ ಜೊತೆ ಜೀವನ ಮಾಡಿರುವ ಸುಮಲತಾ ಅವರು, ಆ ಅಧಿಕಾರಗಳನ್ನೆಲ್ಲಾ ಹತ್ತಿರದಿಂದ ನೋಡಿದ್ದಾರೆ. ಅವರಿಗೆ ಅಧಿಕಾರ ದಾಹ ಇಲ್ಲ. ಅಂಬರೀಶ್ ಅವರು ಬಿಟ್ಟು ಹೋಗಿರುವ ಕೆಲಸವನ್ನು ಪೂರ್ಣಗೊಳಿ ಸುವ ಉದ್ದೇಶದಿಂದ ಮಂಡ್ಯ ಜನತೆಯ ಒತ್ತಾ ಯಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಹೇಳಿದರಲ್ಲದೆ, ಪಕ್ಷೇತರರಾಗಿ ಸ್ಪರ್ಧಿಸಿ ರುವ ಅವರ ಕ್ರಮಸಂಖ್ಯೆ

20 ಆಗಿದ್ದು, ಅವರ ಚಿಹ್ನೆ ಎಂದು ಹೇಳುತಾ ಕಹಳೆಯನ್ನು ಎತ್ತಿ ಪ್ರದರ್ಶಿಸಿದರು. ಸುಮಲತಾ ಅವರು ರಾಜಕೀಯವಾಗಿ ಯಾವಾಗಲೂ ಹಸ್ತಕ್ಷೇಪ ಮಾಡಿದವರೇ ಅಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಂಡ್ಯ ಜನತೆಯ ಋಣ ತೀರಿಸುವ ಸಲುವಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ರಾಜಕೀಯ ಚದುರಂಗದಾಟದಲ್ಲಿ ನಡೆಯುತ್ತಿರುವ ಮೋಸ ಹಾಗೂ ಗೊಂದಲದ ಬಗ್ಗೆ ಮತದಾರರಾದ ನೀವುಗಳೇ ಚುನಾವಣೆಯಲ್ಲಿ ಸುಮಲತಾ ಅವರಿಗೆ ಮತ ನೀಡುವ ಮೂಲಕ ಉತ್ತರ ಕೊಡಬೇಕು ಎಂದು ಮನವಿ ಮಾಡಿದರು. ದರ್ಶನ್ ಅವರು ಇಂದು ಕೆಆರ್‍ಎಸ್, ಹುಲಿಕೆರೆ, ಬಸ್ತಿಪುರ, ಬೆಳಗೊಳ, ಹೊಸ ಆನಂದೂರು, ಮೊಗರಹಳ್ಳಿ, ಹೊಸಹಳ್ಳಿ, ಕಾರೇಪುರ, ಕಾಲಹಳ್ಳಿ, ಶ್ರೀರಂಗಪಟ್ಟಣ, ಗಂಜಾಂ, ನಗುವನಹಳ್ಳಿ, ಚಂದಗಾಲು, ಹೊಸೂರು, ಮೇಳಾಪುರ, ಹೆಬ್ಬಾಡಿಹುಂಡಿ, ಹೆಬ್ಬಾಡಿ, ಹಂಪಾಪುರ, ಚಿಕ್ಕಂಕನಹಳ್ಳಿ, ಸುಗ್ಗನಹಳ್ಳಿ, ಬಂತಗನಹಳ್ಳಿ, ಕೊಕ್ಕರೆಹುಂಡಿ, ಬಿದರಹಳ್ಳಿ, ಚನ್ನಹಳ್ಳಿ, ಕರೀಪುರ, ಮಹದೇವಪುರ, ಮಂಡ್ಯದ ಕೊಪ್ಪಲು, ಅರೆಕೆರೆ ಗ್ರಾಮಗಳಲ್ಲಿ ಕಿಕ್ಕಿರಿದ ಅಭಿಮಾನಿಗಳ ನಡುವೆ ರೋಡ್ ಶೋ ನಡೆಸಿದರು. ಈ ವೇಳೆ ಉಚ್ಛಾಟಿತ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ, ಅಂಬರೀಶ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಎಸ್.ಎಲ್. ಲಿಂಗರಾಜು ಸೇರಿದಂತೆ ಹಲವಾರು ಕಾಂಗ್ರೆಸ್ ಮತ್ತು ರೈತ ಸಂಘದ ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು. ರೋಡ್ ಶೋ ಉದ್ದಕ್ಕೂ ದರ್ಶನ್ ಅಭಿಮಾನಿಗಳು ‘ಡಿ ಬಾಸ್, ಡಿ ಬಾಸ್’ ಎಂದು ಕೂಗುತ್ತಾ ಸಾಗಿದರು. ಗ್ರಾಮವೊಂದರಲ್ಲಿ ಮಹಿಳೆಯರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ತಂಬಿಟ್ಟು ಆರತಿ ಕೊಂಡೊಯ್ಯುತ್ತಿರುವುದನ್ನು ನೋಡಿದ ದರ್ಶನ್, ‘ಎಲ್ಲರೂ ಪೂಜೆ ಮಾಡಿ ತಂಬಿಟ್ಟು ತೆಗೆದುಕೊಂಡು ಹೋಗುತ್ತಿದ್ದಾರೆ. ನೋಡಿದರೆ ತಿನ್ನಬೇಕು ಎಂದು ಆಸೆಯಾಗುತ್ತಿದೆ’ ಎಂದು ಹೇಳಿದಾಗ, ಮಹಿಳೆಯೊಬ್ಬರು ತಂಬಿಟ್ಟು ಕೊಡುವುದಾಗಿ ಹೇಳಿದರು. ಆಗ ದರ್ಶನ್, ‘ಕೊಡಿ ತಿನ್ಕೊಂಡೇ ಹೋಗ್ತೀನಿ’ ಎಂದು ಹೇಳಿದರು. ಈ ವೇಳೆ ಅಭಿಮಾನಿಯೊಬ್ಬರು ತಂಬಿಟ್ಟು ಆರತಿಯನ್ನು ಅವರ ಮುಂದೆ ಒಡ್ಡಿದಾಗ, ಅದರಲ್ಲಿ ಸ್ವಲ್ಪ ತಂಬಿಟ್ಟು ಮುರಿದು ತಿನ್ನುತ್ತಾ ಸಾಗಿದರು.

ದರ್ಶನ್ ರ್ಯಾಲಿ ಅರೆಕೆರೆ ಬಳಿಯ ಕೊಕ್ಕರೆಹುಂಡಿ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಅವರ ವಾಹನಕ್ಕೆ ಅಡ್ಡಿಪಡಿಸಿದ ಕೆಲಸ ಜೆಡಿಎಸ್ ಕಾರ್ಯಕರ್ತರು, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಘೋಷಣೆ ಕೂಗಿದರು. ಇದನ್ನು ಸಂಯಮದಿಂದಲೇ ಎದುರಿಸಿದ ದರ್ಶನ್, ಅಲ್ಲಿ ಪ್ರಚಾರ ಮಾಡದೇ ಮುಂದೆ ಸಾಗಿದರು.

ರೋಡ್ ಶೋ ಮಾರ್ಗದುದ್ದಕ್ಕೂ ದರ್ಶನ್ ಅಭಿಮಾನಿಗಳು ಮೊಬೈಲ್ ಹಿಡಿದು ಫೋಟೋ ಕ್ಲಿಕ್ಕಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಇಂದು ದರ್ಶನ್ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ 18 ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು.

ಕಳ್ಳರ ಕೈಚಳಕ: ದರ್ಶನ್ ರೋಡ್ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ನಡುವೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕೆಆರ್‍ಎಸ್‍ನಲ್ಲಿ ದರ್ಶನ್ ರೋಡ್ ಶೋ ನಡೆಸುತ್ತಿದ್ದ ವೇಳೆ ಗ್ರಾಪಂ ಸದಸ್ಯ ಮಜ್ಜಿಗೆಪುರ ಮಂಜುನಾಥ್ ಅವರ ಜೇಬಿನಿಂದ ಕಳ್ಳರು 11,500 ನಗದು ಹಾಗೂ ಕ್ರೆಡಿಟ್ ಕಾರ್ಡ್ ಎಗರಿಸಿದ್ದಾರೆ.

ಪಂಚರ್ ಆದ ಪ್ರಚಾರ ವಾಹನ…, ಕವನ ವಾಚಿಸಿದ ಬಾಲಕಿ…

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಇಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ ಚಿತ್ರನಟ ದರ್ಶನ್ ಅವರ ಪ್ರಚಾರ ವಾಹನ ಹೆಬ್ಬಾಡಿ ಹುಂಡಿ ಗ್ರಾಮದಲ್ಲಿ ಪಂಚರ್ ಆಯಿತು. ರೋಡ್ ಶೋನಲ್ಲೇ ಬಂದ ಬೇರೆ ವಾಹನ ಏರಿ ಅವರು ಪ್ರಚಾರ ಮುಂದುವರಿಸಿದರು.

ಗ್ರಾಮವೊಂದರಲ್ಲಿ ಬಾಲಕಿಯೋರ್ವಳು ತಾನು ಕವನ ವಾಚಿಸಬೇಕೆಂದು ದರ್ಶನ್ ಅವರಲ್ಲಿ ಮನವಿ ಮಾಡಲಾಗಿ, ಅದಕ್ಕೆ ಅವರು ಅವಕಾಶ ನೀಡಿದರು. ಬಾಲಕಿಯು ಅಂಬರೀಶ್ ಕುರಿತು ಕವನ ವಾಚಿಸಿ, ಶಹಬ್ಬಾಸ್‍ಗಿರಿ ಪಡೆದಳು.

ಬೆಳಗೊಳ ಬಯಲಲ್ಲಿ ಊಟ: ಪ್ರಚಾರ ಸಂದರ್ಭದಲ್ಲಿ ದರ್ಶನ್ ತಮ್ಮ ಅಭಿಮಾನಿ ಗಳು ಹಾಗೂ ಬೆಂಬಲಿಗರೊಂದಿಗೆ ಬೆಳಗೊಳ ಸಮೀಪ ಬಯಲಲ್ಲಿ ಹೊಂಗೆ ಮರದ ನೆರಳಲ್ಲಿ ಊಟ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದರು.

Translate »