ಕೆಸಿ ಬಡಾವಣೆಯಲ್ಲಿ ಕಾವೇರಿ ನೀರು ಪೂರೈಕೆಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಕೆಸಿ ಬಡಾವಣೆಯಲ್ಲಿ ಕಾವೇರಿ ನೀರು ಪೂರೈಕೆಗೆ ಶಾಸಕ ರಾಮದಾಸ್ ಚಾಲನೆ

October 3, 2018

ಮೈಸೂರು:  ಕುಡಿಯಲು ಕಾವೇರಿ ನೀರು ಪೂರೈಸಬೇಕೆಂಬ ಮೈಸೂರಿನ ಕೆಸಿ ಬಡಾವಣೆಯ ನಿವಾಸಿಗಳ ಬಹುದಿನ ಬೇಡಿಕೆ ಈಡೇರಿದ್ದು, ಕಾವೇರಿ ನೀರು ಸರಬರಾಜಿಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಮಂಗಳವಾರ ಚಾಲನೆ ನೀಡಿದರು.

ಇಂದು ಬೆಳಿಗ್ಗೆ ಬಡಾವಣೆಯಲ್ಲಿ ನೀರು ಪೂರೈಕೆಯ ಪೈಪ್‍ಲೈನ್ ಆನ್ ಮಾಡುವ ಮೂಲಕ ಕಾವೇರಿ ನೀರು ಸರಬಾರಾಜು ವ್ಯವಸ್ಥೆಗೆ ಅವರು ಚಾಲನೆ ನೀಡಿದರು. ಜೊತೆಗೆ ಪ್ರತಿ ದಿನ 2 ಗಂಟೆಗಳ ಕಾಲ ಕಾವೇರಿ ನೀರು ನೀಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಬಡಾವಣೆಯಲ್ಲಿರುವ ಅನೇಕ ಗಣ್ಯರ ಮನೆಗಳಿಗೆ ಭೇಟಿ ನೀಡಿ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿರುವುದನ್ನು ಖಚಿತಪಡಿಸಿಕೊಂಡರು. ಬಡಾವಣೆಯಲ್ಲಿರುವ `ಮೈಸೂರು ಮಿತ್ರ’ ಹಾಗೂ ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅವರ ನಿವಾಸಕ್ಕೂ ಭೇಟಿ ನೀಡಿ ಕಾವೇರಿ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಕಾವೇರಿ ನೀರು ಪೂರೈಕೆ ಸಂಬಂಧ ಸೆ.29ರಂದು ಮೈಸೂರಿಗೆ ಕುಡಿಯುವ ನೀರು ಪೂರೈಸುವ ಮೇಳಾಪುರದ ಕಾವೇರಿ ನದಿಯಿಂದ ನೀರೆತ್ತುವ ಕೇಂದ್ರ, ದೇವನೂರು, ರಮ್ಮನಹಳ್ಳಿ ನೀರು ಶುದ್ಧಿಕರಣ ಘಟಕ ಹಾಗೂ ಜರ್ಮನ್ ಪ್ರೆಸ್ ಆವರಣದ ನೀರು ಸಂಗ್ರಹ ಘಟಕಕ್ಕೆ ಭೇಟಿ ನೀಡಿ ಎಸ್.ಎ.ರಾಮದಾಸ್ ಪರಿಶೀಲಿಸಿದ್ದರು.

ನಗರ ಪಾಲಿಕೆ ಸದಸ್ಯರಾದ ಛಾಯಾದೇವಿ, ರೂಪ, ವಾಣಿವಿಲಾಸ ಕಾರ್ಯಪಾಲಕ ಅಭಿಯಂತರ ಹರೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್, ಅಭಿಯಂತರ ಧನುಷ್, ಬಿಜೆಪಿ ಮುಖಂಡರಾದ ಪ್ರಸನ್ನ, ಯೋಗೇಶ್, ಮಧು, ಹರೀಶ್ ಮತ್ತಿತರರು ಹಾಜರಿದ್ದರು.

ವೃತ್ತ ಉದ್ಘಾಟನೆ: ಮೈಸೂರಿನ ಅರವಿಂದನಗರದ ಶಿವನ ದೇವಸ್ಥಾನ ಎದುರಿಗೆ ನೂತನವಾಗಿ ನಿರ್ಮಿಸಿರುವ ವೃತ್ತವನ್ನು ಮಂಗಳವಾರ ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು. ರೋಟರಿ ಸಂಸ್ಥೆ ಸೇರಿದಂತೆ ಮತ್ತಿತರರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಿರ್ಮಿಸಿರುವ ಈ ನೂತನ `ರೋಟರಿ ವೃತ್ತ’ವನ್ನು ಅವರು ಉದ್ಘಾಟಿಸಿದರು. ಈ ವೇಳೆ ರಾಮಕೃಷ್ಣ ಆಶ್ರಮದ ಸ್ವಾಮಿ ಆತ್ಮಾನಂದ, ಪಾಲಿಕೆ ಸದಸ್ಯೆ ಚಂಪಕ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »