ಸುಚಿತ್ರ ಗ್ಯಾಲರಿಯಲ್ಲಿ ಗಾಂಧೀಜಿ ಹೋರಾಟಗಳ ಚಿತ್ರಕಲಾ ಪ್ರದರ್ಶನ
ಮೈಸೂರು

ಸುಚಿತ್ರ ಗ್ಯಾಲರಿಯಲ್ಲಿ ಗಾಂಧೀಜಿ ಹೋರಾಟಗಳ ಚಿತ್ರಕಲಾ ಪ್ರದರ್ಶನ

October 3, 2018

ಮೈಸೂರು: ಮೈಸೂರಿನ ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರು ರಚಿಸಿರುವ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಸಂಗ್ರಾಮಗಳನ್ನು ಬಿಂಭಿಸುವ ಚಿತ್ರಕಲಾ ಪ್ರದರ್ಶನ ಇಂದು ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಕಲಾಕೂಟದ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ‘ಗಾಂಧೀಜಿ-ಸ್ವಾತಂತ್ರ್ಯ ಹೋರಾಟಗಳು’ ಕುರಿತಾದ ಚಿತ್ರ ಪ್ರದರ್ಶನವನ್ನು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಪಕದ ಪ್ರೊ.ಜಿ.ಟಿ.ರಾಮಚಂದ್ರಪ್ಪ ಅವರು ಉದ್ಘಾಟಿಸಿದರು. ಚಿತ್ರ ಪ್ರದರ್ಶನ ವೀಕ್ಷಿಸಿದ ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ಆರಂಭದಿಂದ ಅಂತ್ಯದವರೆಗೂ ನಡೆದ ಘಟನಾವಳಿಗಳನ್ನು ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರು ತಮ್ಮ ರೇಖಾ ಚಿತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಎಂದರು.

ಬ್ರಿಟೀಷರ ವಿರುದ್ಧ ಶಾಂತಿಯಿಂದ ಹೋರಾಟ ನಡೆಸುವ ಮೂಲಕ ದೇಶಾದ್ಯಂತ ಯುವಕರನ್ನು ಬಡಿದೆಬ್ಬಿಸಿ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿ ಅವರು ಅನುಭವಿಸಿದ ಜೈಲು ವಾಸ, ಮಾಡಿದ ಸತ್ಯಾಗ್ರಹಗಳು, ದುಂಡು ಮೇಜಿನ ಸಭೆ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇತಿಹಾಸವೇ ಕಲಾವಿದನ ಕುಂಚದಲ್ಲಿ ಮೂಡಿ ಬಂದಿದೆ ಎಂದು ಪ್ರೊ.ಜಿ.ಟಿ.ರಾಮಚಂದ್ರಪ್ಪ ನುಡಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಂಗ ಕಲಾವಿದ ಜನಾರ್ಧನ್ (ಜನ್ನಿ), ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕಲಾವಿದ ಯು.ಜಿ. ಮೋಹನ್ ಕುಮಾರ್ ಆರಾಧ್ಯ, ಜಯಪ್ಪ ಹೊನ್ನಾಳಿ, ಎಸ್.ನಾಗರಾಜು, ರಾಜಶೇಖರ ಕದಂಬ, ಮೂಗೂರು ನಂಜುಂಡ, ಸ್ವಾಮಿ ಸೇರಿದಂತೆ ಹಲವು ಸಾಹಿತಿಗಳು ಕನ್ನಡ ಪರ ಹೋರಾಟಗಾರರು ಭಾಗವಹಿಸಿದ್ದರು.

Translate »