ದುನಿಯಾ ವಿಜಯ್‍ಗೆ ಕೀರ್ತಿ ಗೌಡ  5ನೇ ಪತ್ನಿ: ಮೊದಲ ಪತ್ನಿ ನಾಗರತ್ನ
ಮೈಸೂರು

ದುನಿಯಾ ವಿಜಯ್‍ಗೆ ಕೀರ್ತಿ ಗೌಡ  5ನೇ ಪತ್ನಿ: ಮೊದಲ ಪತ್ನಿ ನಾಗರತ್ನ

October 3, 2018

ಬೆಂಗಳೂರು: ನಟ ದುನಿಯಾ ವಿಜಯ್ ಬಾಳಿನಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ವಿಜಿಗೆ ಕೀರ್ತಿ ಗೌಡ ಎರಡನೇ ಪತ್ನಿ ಅಲ್ಲ. ಐದನೇ ಪತ್ನಿ ಎಂದು ಅವರ ಮೊದಲ ಪತ್ನಿ ನಾಗರತ್ನ ಅವರು ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

ನಿನ್ನೆ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ, ನಾಗರತ್ನ ವಿರುದ್ಧ ದುನಿಯಾ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ನಾಗರತ್ನ ಅವರು, ಚಿನ್ನದ ಮೊಟ್ಟೆ ಇಡೋ ಕೋಳಿ ನೋಡ್ಕೊಂಡು ನಾನು ಬಂದಿಲ್ಲ. ಅದನ್ನು ನೋಡಿ ಬಂದವರು ಇನ್ನೊಬ್ಬರು. ನನಗೆ ಆ ಮಾತನ್ನು ಹೇಳುವುದು ಬೇಡ.

ತಂದೆ, ತಾಯಿ ಹೆಸರಿನಲ್ಲಿ ಅನುಕಂಪ ಗಿಟ್ಟಿಸೋದು ಬೇಡ. ನನ್ನ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ವರ್ಷಕ್ಕೆ ಒಂದೊಂದು ಮದುವೆಯಾಗೋದು ಯಾವ ನ್ಯಾಯ ಹೇಳಿ ಎಂದು ವಾಗ್ದಾಳಿ ನಡೆಸಿದರು.

ಅತ್ತೆ, ಮಾವನನ್ನು ನೋಡಿಕೊಳ್ಳಲಿಲ್ಲ ಎಂಬುದೆಲ್ಲಾ ಸುಳ್ಳು ಮತ್ತು ದುನಿಯಾ ವಿಜಯ್ ಕೀರ್ತಿ ಗೌಡ ಅವರನ್ನು ಮದುವೆಯೇ ಆಗಿಲ್ಲ ಎಂದ ನಾಗರತ್ನ, ದುನಿಯಾ ವಿಜಯ್‍ಗೆ ಈ ರೀತಿಯ ಸಂಬಂಧಗಳು ಹೊಸದಲ್ಲ. ನನ್ನ ಮದುವೆಗೂ ಮುಂಚೆಯೇ ಅವರಿಗೆ ಇನ್ನೊಂದು ಮದುವೆಯಾಗಿತ್ತು. ನಂತರ ಶುಭಾ ಪೂಂಜಾ ಬಂದರು, ಬಳಿಕ ಜಯಮ್ಮನ ಮಗ ಸಿನಿಮಾದ ಹೀರೋಯಿನ್ ಭಾರತಿ.. ಈಗ ಕೀರ್ತಿ ಗೌಡ.. ಹೀಗೆ ವರ್ಷಕ್ಕೆ ಒಂದೊಂದು ಮದುವೆ ಆಗೋದು ವಿಜಿಗೆ ಕರಗತವಾಗಿದೆ ಎಂದು ವ್ಯಂಗ್ಯವಾಡಿದರು.

ಕೀರ್ತಿ ಗೌಡ ಬಂದ ಮೇಲೆ ವಿಜಿಯ ಯಾವ ಸಿನಿಮಾ ಹಿಟ್ ಆಗಿದೆ. ಕೀರ್ತಿ ಗೌಡಗಾಗಿ ವಿಜಿ ಇಷ್ಟೆಲ್ಲಾ ಕಥೆ ಹೆಣೆಯುತ್ತಿದ್ದಾರೆ. ನನ್ನ ಜೊತೆ ಯಾವ ಒಡಂಬಡಿಕೆಯೂ ಮಾಡಿ ಕೊಂಡಿಲ್ಲ. ನಾನು ಯಾವ ಕಾರಣಕ್ಕೂ ಡೈವೋರ್ಸ್ ನೀಡಲ್ಲ. ನಾನು ಕೂಡಾ ಸಂಸಾರ ನಡೆಸಲು ಬಂದವಳು ಎಂದು ನಾಗರತ್ನ ತಿರುಗೇಟು ನೀಡಿದ್ದಾರೆ.

2009ರಲ್ಲಿ ದುನಿಯಾ ಋಣ ಎಂಬ ಹೆಸರಿನ ಮನೆಯನ್ನು ನನ್ನ ಹೆಸರಿಗೆ ಬರೆದಿದ್ದರು. ಅವರ ಮಕ್ಕಳಿಗೆ ಅವರು ಆಸ್ತಿ ಬರೆದಿರುವುದರಲ್ಲಿ ವಿಶೇಷ ಏನಿದೆ? ಹಲವು ಕಡೆ ದುನಿಯಾ ವಿಜಯ್ ಗೆ ಸಂಬಂಧಿಸಿದ ಮನೆಗಳಿವೆ. ಅವುಗಳೆಲ್ಲ ಏನಾಯ್ತು? ಯಾರ ಅನುಕಂಪ ಗಿಟ್ಟಿಸಲು ಅವರು ಬಾಡಿಗೆ ಮನೆಯಲ್ಲಿದ್ದಾರೆ? ಎಂದು ಪ್ರಶ್ನಿಸಿದರು.

Translate »