ಸರ್ಕಾರದ ಗೌಪ್ಯತೆ ಉಲ್ಲಂಘನೆ: ಸಿಎಂ ರಾಜೀನಾಮೆಗೆ ಶಾಸಕ ರಾಮದಾಸ್ ಆಗ್ರಹ
ಮೈಸೂರು

ಸರ್ಕಾರದ ಗೌಪ್ಯತೆ ಉಲ್ಲಂಘನೆ: ಸಿಎಂ ರಾಜೀನಾಮೆಗೆ ಶಾಸಕ ರಾಮದಾಸ್ ಆಗ್ರಹ

March 30, 2019

ಮೈಸೂರು: ಐಟಿ ದಾಳಿಗೆ ಸಂಬಂಧಿಸಿದಂತೆ ಸಿನಿಮಾ ನಟರು, ರಾಜಕಾರಣಿಗಳು, ಅಧಿಕಾರಿಗಳು, ಜನ ಸಾಮಾನ್ಯರು ಯಾರಾದರೇನು ಎಲ್ಲರೂ ಒಂದೇ. ಐಟಿ ಇಲಾಖೆ ಇರುವುದೇ ತೆರಿಗೆ ವಂಚನೆ ಕಂಡು ಬಂದಾಗ ಅವರ ಕರ್ತವ್ಯ ವನ್ನು ಅವರು ಮಾಡುತ್ತಾರೆ ಎಂದು 2 ತಿಂಗಳ ಹಿಂದಷ್ಟೇ ಸಿನಿಮಾ ನಟರ ಮೇಲಿನ ಐಟಿ ದಾಳಿ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದೀಗ ತಮ್ಮ ಹೇಳಿಕೆಯನ್ನೇ ಮರೆತು ಐಟಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ಕಟುವಾಗಿ ಟೀಕಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕಾನೂನು ಎಲ್ಲರಿಗೂ ಒಂದೇ ಎಂದವರು ಇಂದು ಐಟಿ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿ ದ್ದಾರೆ ಎಂದರು. ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಸರ್ಕಾ ರದ ಗೌಪ್ಯ ವಿಚಾರಗಳನ್ನು ಬಹಿರಂಗಪಡಿ ಸುವುದಿಲ್ಲ ಎಂದು ಪ್ರಮಾಣ ಮಾಡಿರು ತ್ತಾರೆ. ಆದರೆ ರಾಜಕೀಯ ಪ್ರೇರಿತವಾಗಿ ಮುಖ್ಯಮಂತ್ರಿ ಗೌಪ್ಯತೆ ಬಿಟ್ಟು ಕೊಟ್ಟು ತಮ್ಮ ಹುದ್ದೆಗೆ ಅಪಚಾರ ಎಸಗಿದ್ದಾರೆ. ಯಾರನ್ನು ರಕ್ಷಿಸಲು ಈ ಕೆಲಸ ಮಾಡಿ ದ್ದಾರೆ? ಎಂದು ಪ್ರಶ್ನಿಸಿದರು.

ಇದು ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ಅಪರಾಧವಾಗಿದ್ದು, ಇದರಡಿ ಪ್ರಕರಣ ದಾಖಲಿಸಲಾಗುವುದು. ನಿಮ್ಮ ಕಾರ್ಯ ಮಾಡಲು ಬಿಡುವುದಿಲ್ಲ ಎಂದು ಐಟಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಇದು ನ್ಯಾಯ ಮತ್ತು ನಿಷ್ಪಕ್ಷಪಾತ ಕೆಲಸ ಮಾಡುವ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳೇ ಬೆದರಿಕೆ ಹಾಕಿದ್ದಾರೆ. ಕಾನೂನು ಪಾಲನೆ ಮಾಡ ಬೇಕಾದವರೇ ಕಾನೂನು ಭಂಗ ಮಾಡುವ ಕೆಲಸ ಮಾಡಿದ್ದಾರೆ. ಇದು ಸಂವಿಧಾನ ಬಾಹಿರ ಕ್ರಮ. ಕ್ರಿಮಿನಲ್ ಅಪರಾಧ. ಈ ಬಗ್ಗೆ ತಾವು ಮುಖ್ಯ ಚುನಾವಣಾ ಆಯುಕ್ತ ರಿಗೆ ದಾಖಲೆಗಳ ಸಹಿತ ದೂರು ನೀಡಲಿ ದ್ದೇವೆ. ರಾಜ್ಯಪಾಲರನ್ನು ಭೇಟಿ ಮಾಡಿ ಅವರಿಗೂ ದೂರು ಸಲ್ಲಿಸಲಿದ್ದೇವೆ ಎಂದರು. ಐಟಿ ದಾಳಿ ವಿಚಾರದಲ್ಲಿ ಮುಖ್ಯಮಂತ್ರಿಗಳ ನಡೆ ಮತ್ತು ಹೇಳಿಕೆಗಳು ಸರಿಯಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ರಾಮದಾಸ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಬಿಜೆಪಿ ಕೃಷ್ಣರಾಜ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ವಿದ್ಯಾ ಅರಸ್, ವಿ.ಎನ್.ಕೃಷ್ಣ, ಸಂಚಾಲಕ ಎಂ. ಆರ್.ಬಾಲಕೃಷ್ಣ ಉಪಸ್ಥಿತರಿದ್ದರು.

Translate »