ಕೊಡಗು ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಿಎಂ ಚಾಲನೆ
ಮೈಸೂರು

ಕೊಡಗು ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಿಎಂ ಚಾಲನೆ

December 8, 2018

ಮಡಿಕೇರಿ:  ಕೊಡಗಿನ ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಸರ್ಕಾರದಿಂದ ಮನೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

ಸೋಮವಾರಪೇಟೆ ತಾಲೂಕು ಜಂಬೂರು ಗ್ರಾಮದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಸಮಾರಂಭದಲ್ಲಿ ರಿಮೋಟ್ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು, ಇದೇ ವೇದಿಕೆಯಲ್ಲಿ ನೆರೆ ಸಂತ್ರಸ್ತರಿಗೆ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ನೆರೆ ಹಾವಳಿಯಿಂದ ಮನೆ ಸಾಮಾಗ್ರಿಗಳನ್ನು ಕಳೆದು ಕೊಂಡವರಿಗೆ 50 ಸಾವಿರ ರೂ.ವರೆಗೆ ಈಗಾಗಲೇ ಪರಿಹಾರ ನೀಡಲಾಗಿದೆ. ದೇಶದಲ್ಲಿಯೇ ಮಾದರಿಯಾಗುವಂತೆ ತಲಾ 10 ಲಕ್ಷ ರೂ.ವೆಚ್ಚದಲ್ಲಿ ಮನೆಗಳನ್ನು ಸಂತ್ರಸ್ತರಿಗೆ ಗುಣ ಮಟ್ಟದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಕೊಡಗು ನೆರೆ ಸಂತ್ರಸ್ತರಿಗೆಂದೇ 202.23 ಕೋಟಿ ರೂ. ಮೀಸಲಿಟ್ಟಿದ್ದು, ಅದನ್ನು ಕೊಡಗು ಸಂತ್ರಸ್ತರಿಗೇ ವಿನಿಯೋಗಿಸಲಾಗುವುದು. ಅಲ್ಲದೇ ವಿವಿಧ ಸಂಘಟನೆಗಳಿಂದಲೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಕಷ್ಟು ಹಣ ಸಂದಾಯವಾಗಿದ್ದು, ಪ್ರಾಮಾಣಿಕವಾಗಿ ಕೊಡಗು ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸಿದೆ ಎಂದು ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರ, ಕೊಡಗು ಸೇರಿದಂತೆ ಪ್ರಕೃತಿ ವಿಕೋಪ ಪೀಡಿತ 8 ಜಿಲ್ಲೆಗಳಿಗೆ ಪರಿಹಾರವಾಗಿ 546 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಈಗಾಗಲೇ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ವನ್ನು ಸ್ಥಾಪಿಸಲಾಗಿದೆ. ಇದಕ್ಕೆ ಆರಂಭದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಲಾಗಿತ್ತು. ಅದರಂತೆ 85 ಕೋಟಿ ರೂ. ಬಿಡುಗಡೆ ಮಾಡಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅತಿವೃಷ್ಟಿಯಿಂದ ನಿರಾಶ್ರಿತರಾಗಿರುವ ಜನರಿಗೆ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದೆ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮಾಸಿಕ ಜೀವನ ನಿರ್ವಹಣೆಗೆ ರೂ. 10,000 ನೀಡಲಾಗಿದೆ. ಹೊಸ ಮನೆ ನಿರ್ಮಾಣವಾಗುವವರೆಗೂ ಈ ನೆರವು ನಿರಾಶ್ರಿತರಿಗೆ ದೊರೆಯಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಸ್ವಂತ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸುವವರಿಗೆ 15 ಲಕ್ಷ ನೀಡಲಾಗುವುದು ಎಂದು ತಿಳಿಸಿದರು. ಕೊಡಗು ಅಭಿವೃದ್ಧಿಗಾಗಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರದಿಂದ ಕಾರ್ಯಕ್ರಮಗಳನ್ನು ರೂಪಿಸಿದ್ದು, ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು. ಕೊಡಗು ಮೊದಲಿನಂತಾಗಲು ಸರ್ಕಾರವು ನಾನಾ ಕಾರ್ಯಕ್ರಮ ಕೈಗೊಂಡಿದೆ ಎಂದು ಹೇಳಿದರು. ಕೊಡಗು ಪರಿಹಾರ ನಿಧಿಗೆ ಬಂದಂತಹ ಹಣವನ್ನು ಸಂಪೂರ್ಣ ಕೊಡಗಿನ ಪುನಶ್ಚೇತನಕ್ಕೆ ಬಳಸಲಾಗುವುದು. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಅವರು ಹೇಳಿದರು. ನಿರಾಶ್ರಿತರಿಗಾಗಿ ರಾಜ್ಯದ ವಿವಿಧೆಡೆ ಯಿಂದ ಹರಿದು ಬಂದಂತಹ ನೆರವನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳ 2 ಲಕ್ಷ ರೂ. ಹಾಗೂ ಸಹಕಾರ ಬ್ಯಾಂಕುಗಳ 1 ಲಕ್ಷ ರೂ. ರೈತರ ಸಾಲ ಮನ್ನಾ ಮಾಡಲಾಗುವುದು. ರೈತರು ಆತ್ಮಸ್ಥೈರ್ಯದಿಂದ ಬದುಕಬೇಕು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಹೇಳಿದರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಾತನಾಡಿ, ಸರ್ಕಾರ ಕೊಡಗಿನ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು. ಈಗಾಗಲೇ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆ ಮಾಡಲಾಗಿದ್ದು, ಕೊಡಗು ಪೂರ್ಣ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಹಣ ಬಿಡುಗಡೆಯಾಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕೊಡಗು ನೆರೆ ಸಂತ್ರಸ್ತರ ಕಣ್ಣೀರು ಒರೆಸಲು ಸರ್ಕಾರ ಸದಾ ಸಿದ್ಧವಾಗಿದೆ. ಕೊಡಗಿನ ನೆರೆ ಸಂತ್ರಸ್ತರಿಗೆ ಉತ್ತಮ ಮನೆ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ 9.85 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತದೆ. ಒಂದು ತಿಂಗಳಲ್ಲಿ 55 ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಕೊಡಗು ಪುನರ್ ನಿರ್ಮಾಣ ಸೇರಿದಂತೆ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಂಡಿದೆ. ಈಗಾಗಲೇ ಪ್ರಾಧಿಕಾರ ರಚನೆ ಮಾಡಲಾಗಿದ್ದು, ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೇಂದ್ರ ಸರ್ಕಾರದಿಂದ 546 ಕೋಟಿ ರೂ. ಬಿಡುಗಡೆಯಾಗಿದೆ. ಇನ್ಫೋಸಿಸ್ ಸುಧಾಮೂರ್ತಿ ಅವರು ಮನೆ ನಿರ್ಮಾಣಕ್ಕೆ 25 ಕೋಟಿ ರೂ. ನೀಡಲಿದ್ದಾರೆ. ಪುಣೆ ಉದ್ಯಮಿಯೊಬ್ಬರು ಮನೆ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದಿಂದ 100 ಕೋಟಿ ರೂ.ಗಳ ಚೆಕ್‍ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಘದ ಅಧ್ಯಕ್ಷ ರಾಮು ಇದೇ ವೇಳೆ ಹಸ್ತಾಂತರಿಸಿದರು. ಪ್ರಕೃತಿ ವಿಕೋಪ ಸಂಬಂಧ ಜಿಲ್ಲಾಡಳಿತ ಹೊರ ತಂದಿರುವ ಕಿರುಚಿತ್ರ ಪ್ರದರ್ಶಿಸಲಾಯಿತು. ಸಾಂಕೇತಿಕವಾಗಿ ಮನೆ ಆಯ್ಕೆ ಪತ್ರ ನೀಡಲಾಯಿತು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎಲ್.ಬೋಜೇಗೌಡ, ಅಭಿವೃದ್ಧಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಮೈಸೂರು ವಲಯದ ಐಜಿಪಿ ಶರತ್‍ಚಂದ್ರ, ಸುಮನ್ ಡಿ.ಪೆನ್ನೇಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು ಇತರರು ಇದ್ದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸ್ವಾಗತಿಸಿದರು. ಮಾದಾಪುರ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಿರೂಪಿಸಿ, ವಂದಿಸಿದರು.

ಸಂಸದ-ಸಿಎಂ ಮಾತಿನ ಜಟಾಪಟಿ

ಸೋಮವಾರಪೇಟೆ:  ಕೊಡಗಿನ ಪ್ರಕೃತಿ ವಿಕೋಪ ಪರಿಹಾರವಾಗಿ ಕೇಂದ್ರ ಸರ್ಕಾರದ ನೆರವಿನ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೆರಳಿದ ಘಟನೆ ಸೋಮವಾರಪೇಟೆ ತಾಲೂಕು ಜಂಬೂರಿನಲ್ಲಿ ಇಂದು ನಡೆಯಿತು.

ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಅವರು, ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರದ ಕೊಡುಗೆಯೇ ಅಪಾರ ಎಂದಾಗ ಸಭಿಕರು ಚಪ್ಪಾಳೆಗೈದರು. ಇದರಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೆರಳಿ ಕೆಂಡವಾದರು. ಪ್ರತಾಪ್ ಸಿಂಹ ಅವರಿಗೆ ಭಾಷಣ ಸಾಕು ಎಂದು ಹೇಳಿದರು. ಆಗ “ಆಯ್ತು ಆಯ್ತು ಸ್ಕೂಲ್‍ಗೆ ಮಕ್ಕಳನ್ನು ಅಡ್ಮಿಷನ್ ಮಾಡುವಾಗ ಸನ್ ಆಫ್, ಡಾಟರ್ ಆಫ್ ಎಂದು ಹೇಳಬೇಕಾಗುತ್ತದೆ. ಅಪ್ಪ ಯಾರು? ಅಮ್ಮ ಯಾರು? ಎಂದು ಹೇಳಬೇಕಾಗುತ್ತದೆ. ಹಾಗೇ ನಾವೇನು ಮಾಡಿದ್ದೇವೆ ಎಂಬುದನ್ನು ಹೇಳಿದ್ದೇನೆ” ಎಂದು ಮುಖ್ಯಮಂತ್ರಿಗಳಿಗೆ ತಿರುಗೇಟು ನೀಡಿ ಪ್ರತಾಪ್ ಸಿಂಹ ತಮ್ಮ ಭಾಷಣ ಮುಗಿಸಿ, ಆಸನದಲ್ಲಿ ಬಂದು ಕುಳಿತ ನಂತರವೂ ಮುಖ್ಯಮಂತ್ರಿಗಳು ಮತ್ತು ಸಂಸದರ ನಡುವೆ ಸಣ್ಣ ಮಟ್ಟದ ಮಾತಿನ ಜಟಾಪಟಿ ನಡೆಯಿತು.

Translate »