ಚಾಮರಾಜನಗರ

ಗುಂಡ್ಲುಪೇಟೆಗೆ ಮತ್ತೆ ಕೇರಳ ತ್ಯಾಜ್ಯ: ಚೆಕ್‍ಪೋಸ್ಟ್ ಸಿಬ್ಬಂದಿ ಅಮಾನತಿಗೆ ಕರವೇ ಕಾರ್ಯಕರ್ತರ ಆಗ್ರಹ

October 9, 2018

ಗುಂಡ್ಲುಪೇಟೆ:  ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿ ಕೇರಳದಿಂದ ಕಸಾಯಿಖಾನೆ ತ್ಯಾಜ್ಯಗಳನ್ನು ತಂದು ಪಟ್ಟಣದ ಸಮೀಪ ಸುರಿಯುತ್ತಿದ್ದ ಎರಡು ಲಾರಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಪಟ್ಟಣದ ಶ್ರೀರಾಮದೇವರ ಗುಡ್ಡದ ಸಮೀಪ ಎರಡು ಲಾರಿಗಳು ನಿಂತಿದ್ದ ಬಗ್ಗೆ ಅನುಮಾನಗೊಂಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸಮೀಪಕ್ಕೆ ಹೋಗಿ ನೋಡಿದಾಗ ತ್ಯಾಜ್ಯಗಳನ್ನು ಸುರಿಯುತ್ತಿದ್ದುದು ಕಂಡುಬಂದಿತು. ಪರಿಶೀಲಿಸಿದಾಗ ಕಸಾಯಿಖಾನೆಯ ಹಾಗೂ ಕೊಳೆತ ತರಕಾರಿ ಹಣ್ಣುಗಳು ಮತ್ತು ಕೊಳಚೆ ಪದಾರ್ಥ ಗಳಿದ್ದುದು ಕಂಡುಬಂದಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎರಡು ಲಾರಿಗಳನ್ನು ಠಾಣೆಗೆ ತರಲಾಯಿತು.

ಚಾಲಕರಾದ ಸಯ್ಯದ್ ಹಾಗೂ ಗಫಾರ್ ಅವರನ್ನು ವಿಚಾರಿಸಿದಾಗ ಕೇರಳದ ತಾಮ್ರ ಚೇರಿಯ ಕಸಾಯಿ ಖಾನೆಗಳ ಹಾಗೂ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಗುತ್ತಿಗೆದಾರ ಇವುಗಳನ್ನು ಲಾರಿಗೆ ತುಂಬಿ ಇಲ್ಲಿ ಸುರಿಯುವಂತೆ ಕಳುಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕರವೇ ಪ್ರತಿಭಟನೆ ಎಚ್ಚರಿಕೆ: ಪದೇ ಪದೇ ಕೇರಳದಿಂದ ತ್ಯಾಜ್ಯಗಳನ್ನು ಹೊತ್ತ ಲಾರಿಗಳು ಗಡಿಯನ್ನು ಪ್ರವೇಶಿಸುತ್ತಿದ್ದರೂ ಚೆಕ್ ಪೋಸ್ಟ್ ಸಿಬ್ಬಂದಿ ಹಣ ಪಡೆದು ಲಾರಿಗಳನ್ನು ಬಿಡುತ್ತಿದ್ದಾರೆ. ಪ್ರತಿ ದಿನವೂ ಕತ್ತಲಾಗುತ್ತಿದ್ದಂತೆ ಗಡಿದಾಟುವ ಲಾರಿಗಳು ತಾಲೂಕಿನ ನಿರ್ಜನ ಪ್ರದೇಶದಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿವೆ. ನೆಪಮಾತ್ರಕ್ಕೆ ಚೆಕ್ ಪೋಸ್ಟುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಸಿಬ್ಬಂದಿಗಳು ಹಣ ಪಡೆದು ಅಕ್ರಮ ಸಾಗಾಣೆಗೆ ನೆರವಾಗು ತ್ತಿದ್ದಾರೆ ಎಂದು ದೂರಿದರು.

ಈ ಬಗ್ಗೆ ಕಳೆದ ವಾರ ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆಯಲ್ಲಿ ದೂರು ನೀಡಿದ್ದರೂ ಯಾವುದೇ ಉಪಯೋಗವಾಗಿಲ್ಲ. ಆದ್ದರಿಂದ ಕೂಡಲೇ ಚೆಕ್ ಪೋಸ್ಟ್ ಸಿಬ್ಬಂದಿಗಳನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿ ಮಂಗಳವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಸುರೇಶ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ನಾಗರಾಜು, ಸಂಘಟನಾ ಕಾರ್ಯದರ್ಶಿ ಜಗದೀಶ್, ಸುರೇಶ್ ಮಾಸಿನ್ ಎಚ್ಚರಿಕೆ ನೀಡಿದ್ದಾರೆ.

Translate »