ಮೈಸೂರು

ಮೈತ್ರಿ ಅಭ್ಯರ್ಥಿ ವಿಜಯಶಂಕರ್ ನಾಮಪತ್ರ ಅಪೂರ್ಣ, ದೋಷಪೂರಿತ: ಆರೋಪ

March 28, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಹೆಚ್.ವಿಜಯಶಂಕರ್ ಸಲ್ಲಿಸಿರುವ ಎಲ್ಲಾ ನಾಲ್ಕು ಸೆಟ್ ನಾಮಪತ್ರಗಳು ಅಪೂರ್ಣ ಹಾಗೂ ದೋಷಪೂರಿತ ವಾಗಿವೆ ಎಂದು ಬಿಜೆಪಿ ವಕ್ತಾರರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಬೆಳಿಗ್ಗೆಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಲ್ಲಿಕೆ ಯಾಗಿರುವ ನಾಮಪತ್ರಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ ಹಾಜರಿದ್ದ ಅವರು, ನಂತರ ಮಧ್ಯಾಹ್ನ 2.30 ಗಂಟೆಗೆ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ತುರ್ತು ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ವಿಜಯಶಂಕರ್ ಸಲ್ಲಿಸಿರುವ ನಮೂನೆ 26ರ ಪ್ರಮಾಣ ಪತ್ರದ ಪುಟ ಸಂಖ್ಯೆ 3ರಲ್ಲಿ ಅವಲಂಭಿತ ಪುತ್ರಿ ವಿ.ಹೆಚ್.ಕನಕ ‘ಪಾನ್ ಕಾರ್ಡ್ ಪಡೆದಿಲ್ಲ’ ಎಂದು ನಮೂದಿಸಿದ್ದಾರೆ. ಪಾನ್ ಹೊಂದದಿದ್ದಲ್ಲಿ ‘ಪಾನ್ ಸಂಖ್ಯೆ ಹಂಚಿಕೆಯಾಗಿಲ್ಲ’ ಎಂದು ನಮೂದಿಸಬೇಕೆಂದು ಚುನಾ ವಣಾ ಆಯೋಗ ಸೂಚಿಸಿದೆ ಎಂದು ಮಧುಸೂದನ್ ತಿಳಿಸಿದರು.

ಪುಟ ಸಂಖ್ಯೆ 12(ii) ಅಂಕಣದಲ್ಲಿ ಕೇಳಿರುವ ಸರ್ಕಾರಿ ಬಾಕಿಗಳು ಸಂಬಂಧಿ ಸಿದಂತೆ ಏನನ್ನೂ ಬರೆಯದೆ ಖಾಲಿ ಬಿಡಲಾಗಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ಅಂಕಣದಲ್ಲಿ 6 ಜಾಗಗಳನ್ನು ಯಾವುದೇ ಮಾಹಿತಿ ನೀಡದೆ ಖಾಲಿ ಬಿಟ್ಟಿದ್ದಾರೆ. ಆಸ್ತಿಗಳ ಮಾರುಕಟ್ಟೆ ಬೆಲೆ ಅಂಕಣದಲ್ಲಿ ಏನನ್ನೂ ನಮೂದಿಸಿಲ್ಲ ಎಂದು ಗೋ.ಮಧುಸೂದನ್ ಆರೋಪಿಸಿದರು.
ಸಿ.ಹೆಚ್.ವಿಜಯಶಂಕರ್ ಪ್ರಮಾಣ ಪತ್ರ ದೃಢೀಕರಿಸಿರುವ ನೋಟರಿ ಅವರು ಪ್ರಮಾಣಪತ್ರದಲ್ಲಿ ದಾಖಲೆಯ ಸಂಖ್ಯೆ ಯನ್ನು ನಮೂದಿಸಿಲ್ಲ. ಹಾಗೂ ಅದರ ಕಡೇ ಪುಟವನ್ನೂ ಹೊರತು ಪಡಿಸಿ ಯಾವುದೇ ಪುಟದಲ್ಲೂ ನೋಟರಿ ಅವರು ದಿನಾಂಕವನ್ನು ಬರೆದಿಲ್ಲವಾದ್ದರಿಂದ ಅಪೂರ್ಣ ಮತ್ತು ದೋಷಪೂರಿತ ಎಂದು ಪರಿಗಣಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯ ಶಂಕರ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ನಾವು ಕೇಳಿದ್ದೇವೆ. ಅಲ್ಲದೆ ನಾಮಪತ್ರ ಊರ್ಜಿತವಾಗಿದೆ ಎಂದು ಪರಿಗಣಿಸದಂತೆಯೂ ದೂರು ನೀಡಿದೆವು. ಆದರೆ ಚುನಾವಣಾಧಿಕಾರಿ ಅಭಿರಾಂ ಜಿ. ಶಂಕರ್ ನಮ್ಮ ಆಕ್ಷೇಪಣೆಗಳನ್ನು ಪರಿಗಣಿಸದೆ ವಿಜಯಶಂಕರ್ ನಾಮಪತ್ರವನ್ನು ಕ್ರಮ ಬದ್ಧ ಎಂದು ಘೋಷಿಸಿದ್ದಾರೆ. ಆಳುವ ಪಕ್ಷದವರು ಚುನಾವಣಾಧಿಕಾರಿಗಳ ಮೇಲೆ ಒತ್ತಡ ತಂದು ಈ ರೀತಿ ಮಾಡಿಸಿ ರಬಹುದೆಂಬ ಅನುಮಾನವಿದೆ ಎಂದು ಆರೋಪಿಸಿದ್ದಾರೆ.
ಹೈಕೋರ್ಟ್ ಮೊರೆ: ದೋಷಪೂರಿತ ಹಾಗೂ ಅಪೂರ್ಣ ನಾಮಪತ್ರವನ್ನು ಕ್ರಮಬದ್ಧಗೊಳಿಸಿರುವ ಸಂಬಂಧ ತಾವು ನಾಳೆ (ಮಾ.28) ಬೆಂಗಳೂರಿಗೆ ತೆರಳಿ ದಾಖಲೆಗಳೊಂದಿಗೆ ರಾಜ್ಯ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಗೋ. ಮಧುಸೂದನ್ ಇದೇ ವೇಳೆ ನುಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ವಕೀಲ ಉಮೇಶ್ ಕುಮಾರ್ ಹಾಗೂ ಮಾಧ್ಯಮ ಸಂಚಾಲಕ ಪ್ರಭಾಕರ್ ಶಿಂಧೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »