ಮೈಸೂರು

ಸಮುದಾಯಗಳ ನಡುವೆ ದ್ವೇಷಾಸೂಯೆ ಉಂಟು ಮಾಡಿ ರಾಜಕೀಯ ಲಾಭ ಗಳಿಸುವ ಯತ್ನ

September 2, 2018

ಮೈಸೂರು ನಗರಪಾಲಿಕೆ ವಾರ್ಡ್ ನಂ.35ರಲ್ಲಿ ಅಹಿತಕರ ಘಟನೆ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 35 ಸಾತಗಳ್ಳಿ ಮೊದಲ ಹಂತಕ್ಕೆ ಸಂಬಂಧಿಸಿದಂತೆ ಕಲ್ಯಾಣ ಗಿರಿಯ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆ ಬಳಿ ಶುಕ್ರ ವಾರ ಸಂಜೆ ನಡೆದ ಅಹಿತಕರ ಘಟನೆ ಹಿಂದೆ ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿ ರಾಜ ಕೀಯ ಲಾಭ ಪಡೆಯುವ ದುರುದ್ದೇಶವಿದೆ ಎಂದು ಬಿಜೆಪಿ ಮುಖಂಡರೂ ಆದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆರೋಪಿಸಿದರು.

ಮೈಸೂರಿನ ತ್ರಿವೇಣಿ ವೃತ್ತದಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಗಳ ನಡುವೆ ಕಂದಕ ನಿರ್ಮಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಕೆಲವು ಕಿಡಿಗೇಡಿಗಳು ಗಲಭೆ ಸೃಷ್ಟಿಸಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಮತ- ಪಂಥದ ಭೇದವಿಲ್ಲದೆ ಎಲ್ಲಾ ಸಮುದಾಯದವರು ಸಾಮ ರಸ್ಯದಿಂದ ಬದುಕುತ್ತಿದ್ದಾರೆ. ಆದರೆ ಕೆಲವೇ ಕಿಡಿಗೇಡಿ ಗಳು ಮಾಡುವ ಇಂತಹ ಕೃತ್ಯದಿಂದ ಸಮಾಜದ ಶಾಂತಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗಲಭೆ ನಡೆದ ಉರ್ದು ಶಾಲೆಯಲ್ಲಿ 5 ಬೂತ್ ಗಳನ್ನು ತೆರೆಯಲಾಗಿತ್ತು. ಈ ಎಲ್ಲಾ ಬೂತ್‍ಗಳಿಂದ ಒಟ್ಟು 5800 ಮತದಾರರು ಇದ್ದು, ಇದನ್ನು ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದ್ದರೂ ಅಗತ್ಯವಾದಷ್ಟು ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆಗೆ ಕ್ರಮ ಕೈಗೊಂಡಿರಲಿಲ್ಲ. ಈ ಮತಗಟ್ಟೆಗೆ ಸಮೀಪದಲ್ಲೇ ಜೆಎಸ್‍ಎಸ್ ಕಾಲೇಜು ಇದ್ದು, ಇಲ್ಲಿ ವಿಶಾಲ ಕೊಠಡಿ ಹಾಗೂ ಆವರಣವಿದ್ದರೂ ಉದ್ದೇಶಪೂರ್ವಕ ವಾಗಿಯೇ ಕಿಷ್ಕಿಂಧೆಯಂತಹ ಸ್ಥಳದಲ್ಲಿ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಿದ್ದ ಇಲ್ಲಿಗೆ ಕೇವಲ ನಾಲ್ವರು ಪೊಲೀಸ ರನ್ನಷ್ಟೇ ಭದ್ರತೆಗಾಗಿ ನಿಯೋಜಿಸ ಲಾಗಿತ್ತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ಇಕ್ಕಟ್ಟಿನ ಸ್ಥಳದಲ್ಲಿ ಗಲಭೆ ನಿಯಂತ್ರಿಸಲು ಕಷ್ಟ ಸಾಧ್ಯ. ಅಂದು ಸಂಜೆ ಸುಮಾರು 4ರ ವೇಳೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಎಸ್‍ಡಿಪಿಐನ ನೂರಾರು ಕಾರ್ಯಕರ್ತರು ದಿಢೀರ್ ಜಮಾಯಿಸಿ ಮತ ಚಲಾಯಿಸಲು ಬರುವವರಲ್ಲಿ ಭೀತಿ ಉಂಟಾಗುವಂತಹ ವಾತಾವರಣ ನಿರ್ಮಿಸಿದ್ದರು. ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು ಎಂಬುದೊಂದೇ ಅವರ ಉದ್ದೇಶವಾಗಿತ್ತು. ಭಯದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹಲವು ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದು, ಇದು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಶೋಭೆಯಲ್ಲ ಎಂದರು.

ಗಲಭೆಗೆ ತನ್ವೀರ್ ಪರೋಕ್ಷ ಕಾರಣ: ಇಡೀ ಎನ್‍ಆರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗಳು ಬಂದಾಗ ಕೆಲವು ದುಷ್ಕರ್ಮಿಗಳು ಗಲಭೆ ಮೂಲಕ ಅಶಾಂತಿ, ಭಯ ಸೃಷ್ಟಿಸಿ ಸಮುದಾಯಗಳ ನಡುವೆ ಕಂದಕ ಉಂಟು ಮಾಡಲು ಮುಂದಾಗಾಗುತ್ತಾರೆ. ಆದರೆ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಇಂತಹ ಗಲಭೆಗಳಿಗೆ ಕಡಿವಾಣ ಹಾಕುವಂತಹ ಪ್ರಯತ್ನವನ್ನು ಎಂದೂ ಮಾಡದೇ ಪರೋಕ್ಷವಾಗಿ ಕ್ಷೇತ್ರದಲ್ಲಿ ಕೋಮು ಗಲಭೆಗೆ ಕಾರಣರಾಗಿದ್ದಾರೆ. ಸರ್ಕಾರಿ ಅಧಿಕಾರಿ ಗಳು ಶಾಸಕ ತನ್ವೀರ್ ಸೇಠ್ ಅವರ ಕೈ ಗೊಂಬೆಯಾಗಿ ದ್ದಾರೆ ಎಂದು ಸಂದೇಶ್‍ಸ್ವಾಮಿ ಆಪಾದಿಸಿದರು.

ಗಲಭೆ ಸೃಷ್ಟಿಸುವಂತಹ ಕಿಡಿಗೇಡಿಗಳಿಗೆ ಕಡಿವಾಣ ಹಾಕುವ ಮೂಲಕ ಇಲ್ಲಿನ ಜನತೆ ಸಾಮರಸ್ಯದಿಂದ ಬದುಕಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ ನನಗೆ ಒಂದು ಏಟು ಬಿದ್ದಿದ್ದು, ಉಳಿದಂತೆ ಏಳೆಂಟು ಮಂದಿ ನಮ್ಮ ಕಾರ್ಯಕರ್ತರು ಹಲ್ಲೆಗೆ ಒಳ ಗಾಗಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಈಗಲಾದರೂ ಎಚ್ಚೆತ್ತು ಇಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸಾಮರಸ್ಯದ ಬದುಕಿಗೆ ಧಕ್ಕೆ ತರು ತ್ತಿರುವಂತಹ ಪರಿಸ್ಥಿತಿ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಬಿ.ಆನಂದ್ ಮಾತನಾಡಿ, ಶುಕ್ರವಾರ ಸಂಜೆ 4.15ರ ವೇಳೆಯಲ್ಲಿ ಒಬ್ಬ ಯುವಕ ಮತ ಗಟ್ಟೆ ಒಳಗೆ ಹೋಗಿಬರುವುದನ್ನು ಪದೇ ಪದೆ ಮಾಡುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಏಕಾಏಕಿ ಗುಂಪೊಂದು ನಮ್ಮ ಮೇಲೆ ಹಲ್ಲೆಗೆ ಮುಂದಾಯಿತು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ರೀತಿ ಅಹಿತಕರ ವಾತಾವರಣಕ್ಕೆ ಕಾರಣರಾದವರನ್ನು ಬಂಧಿಸಿ, ಶಿಕ್ಷೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಎನ್‍ಆರ್ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜು ಸಿ.ಗೌಡ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »