ಉದ್ದಿಮೆ ಪರವಾನಗಿ ನವೀಕರಣಕ್ಕೆ  ಪಾಲಿಕೆ ಅಧಿಕಾರಿಗಳಿಂದ ಕಿರುಕುಳ
ಮೈಸೂರು

ಉದ್ದಿಮೆ ಪರವಾನಗಿ ನವೀಕರಣಕ್ಕೆ  ಪಾಲಿಕೆ ಅಧಿಕಾರಿಗಳಿಂದ ಕಿರುಕುಳ

November 11, 2018

ಮೈಸೂರು: ಉದ್ದಿಮೆ ಪರವಾನಗಿ ನವೀಕರಣಕ್ಕೆ ಜಿಎಸ್‍ಟಿ ಪ್ರಮಾಣ ಪತ್ರವೊಂದಿ ದ್ದರೆ ಸಾಕು. ಆದರೆ ಮೈಸೂರು ಮಹಾ ನಗರಪಾಲಿಕೆಯ ಕೆಲ ಅಧಿಕಾರಿ ಗಳು ಅನಗತ್ಯವಾದ ದಾಖಲೆಗಳನ್ನು ಕೇಳುವ ಮೂಲಕ ಉದ್ದಿಮೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಸಂದೇಶ್‍ಸ್ವಾಮಿ ಆರೋಪಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ವಲಯ ಕಚೇರಿ ಗಳಲ್ಲಿ ವಲಯ ಆಯುಕ್ತರೇ ಇಲ್ಲದೇ ಮಧ್ಯವರ್ತಿಗಳ ಮೂಲಕ ಉದ್ದಿಮೆ ಪರವಾನಗಿ ಕೊಡುವಂತಹ ವ್ಯವಸ್ಥೆ ನಿರ್ಮಾಣ ವಾಗಿದೆ. ಮೈಸೂರು ನಗರದಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳು 1 ಲಕ್ಷದಿಂದ ಒಂದೂವರೆ ಲಕ್ಷದಷ್ಟಿವೆ. ಆದರೆ ನಗರ ಪಾಲಿಕೆ ದಾಖಲೆಗಳಲ್ಲಿ ಕೇವಲ 31 ಸಾವಿರ ಉದ್ದಿಮೆಗಳೆಂದು ಉಲ್ಲೇಖಿಸಲಾಗಿದೆ. ಇದರಿಂದ ಪಾಲಿಕೆಗೆ ನ್ಯಾಯಯುತವಾಗಿ ಬರಬೇಕಿರುವ ತೆರಿಗೆ ಬಾರದಂತಾಗಿದೆ ಎಂದು ವಿಷಾದಿಸಿದರು.

ಪರವಾನಗಿ ಇಲ್ಲದೇ ನಡೆಯುತ್ತಿರುವ ಉದ್ದಿಮೆಗಳಿಗೆ ಪರ ವಾನಗಿ ನೀಡುವ ಪ್ರಕ್ರಿಯೆಯನ್ನೇ ಪಾಲಿಕೆ ಮಾಡುತ್ತಿಲ್ಲ. ಹೊಸ ದಾಗಿ ಉದ್ದಿಮೆ ಪರವಾನಗಿ ನೀಡಲು ಮಾತ್ರವೇ ಖಾತೆ, ಕಂದಾಯ ರಶೀದಿ, ಕ್ರಯಪತ್ರ ಸೇರಿದಂತೆ ಕೆಲ ದಾಖಲೆಗಳನ್ನು ಹಾಜರು ಪಡಿಸಬೇಕು. ಆದರೆ ನವೀಕರಣಕ್ಕೆ ಇಷ್ಟೂ ದಾಖಲೆಗಳನ್ನು ಹಾಜರು ಪಡಿಸಬೇಕಾದ ಅಗತ್ಯವಿಲ್ಲ. ಕೇವಲ ಕಂದಾಯ ರಶೀದಿ ಹಾಗೂ ಈ ಹಿಂದೆ ನವೀಕರಣಗೊಂಡ ಪರವಾನಗಿಯ ಪ್ರತಿ ಇದ್ದರೆ ಸಾಕು. ಮುಖ್ಯವಾಗಿ ಜಿಎಸ್‍ಟಿ ಪ್ರಮಾಣ ಪತ್ರವೊಂದಿದ್ದರೆ ಪರಿಶೀಲಿಸಿ ಪರವಾನಗಿ ನವೀಕರಣ ಮಾಡಬಹುದು ಎಂದು ತಿಳಿಸಿದರು.

ಬಾಡಿಗೆ ಕಟ್ಟಡದಲ್ಲಿ ನಡೆಯುವ ಉದ್ದಿಮೆಗಳ ಸಂಬಂಧ ವ್ಯಾಜ್ಯ ಇದ್ದರೂ ನವೀಕರಣ ಮಾಡಲು ಈ ಹಿಂದೆಯೇ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ನವೀಕರಣ ದಾಖಲೆ ಕಾನೂನಾತ್ಮಕ ದಾಖಲೆಯಲ್ಲ. ಉದ್ಯಮ ನಡೆಸಲಷ್ಟೇ ಸೀಮಿತ ಎಂದೂ ಕೌನ್ಸಿಲ್‍ನಲ್ಲಿ ತೀರ್ಮಾನಿಸಲಾಗಿದೆ. ಹೀಗಿದ್ದರೂ ಉದ್ದಿಮೆ ಪರವಾನಗಿ ನವೀಕರಣ ವೇಳೆ ಕೆಲ ಅಧಿಕಾರಿಗಳು ಸತಾಯಿ ಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಎಂದು ಆರೋಪಿಸಿದರು.

ಈ ಹಿಂದೆ ಆರೋಗ್ಯ ನಿರೀಕ್ಷಕರೇ ಉದ್ದಿಮೆ ಪರವಾನಗಿ ನೀಡುವ ಪ್ರಕ್ರಿಯೆ ನಡೆಸುತ್ತಿದ್ದರು. 2014-15ರಿಂದ ಈ ಜವಾಬ್ದಾರಿಯನ್ನು ಕಂದಾಯ ನಿರೀಕ್ಷಕರಿಗೆ ನೀಡಲಾಗಿದೆ. ಅವರಿಗೆ ಕಂದಾಯ ಪಾವತಿ ಮಾಡಿರುವವರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಎಂಬ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೆ ತರಲಾಯಿತು. ಹೀಗಿದ್ದರೂ ಸಮರ್ಪಕ ತೆರಿಗೆ ವಸೂಲಿ ಮಾಡದೇ ಪಾಲಿಕೆಗೆ ನಷ್ಟ ಉಂಟು ಮಾಡಲಾಗುತ್ತಿದೆ. 2014-15ರ ಸಮೀಕ್ಷೆ ಪ್ರಕಾರ ಮೈಸೂರು ನಗರದಲ್ಲಿ 1 ಲಕ್ಷದ 27 ಸಾವಿರ ವಿವಿಧ ರೀತಿಯ ಹಾಗೂ ನಾನಾ ಸ್ತರದ ಉದ್ದಿಮೆಗಳು ನಡೆಯುತ್ತಿವೆ. ಆದರೆ ಇಂದಿಗೂ ಕೇವಲ 10ರಿಂದ 12 ಸಾವಿರ ಉದ್ದಿಮೆಗಳಿಂದಷ್ಟೇ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.

ಉದ್ದಿಮೆ ಪರವಾನಗಿಗೆ ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.15ರಷ್ಟು ಶುಲ್ಕ ಹೆಚ್ಚಳ ಮಾಡ ಬಹುದೆಂದು ಈ ಹಿಂದೆಯೇ ಕೌನ್ಸಿಲ್‍ನಲ್ಲಿ ನಿರ್ಣಯವಾಗಿದೆ. ಆದರೆ ಇದನ್ನು ಗಾಳಿಗೆ ತೂರಿ ಮಧ್ಯವರ್ತಿಗಳ ಮೂಲಕ ಮನ ಬಂದಂತೆ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆಯುಕ್ತರು ಸೂಕ್ತ ಕ್ರಮ ಕೈಗೊಂಡು ನಗರಪಾಲಿಕೆಗೆ ಉಂಟಾಗುತ್ತಿರುವ ನಷ್ಟ ತಪ್ಪಿಸಬೇಕು, ಉದ್ದಿಮೆದಾರರಿಗೂ ಅನುಕೂಲ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.

Translate »