ಕಂದಾಯ ರಶೀದಿ ಕಡ್ಡಾಯ ಮಾಡದೇ ಸಣ್ಣ, ಮಧ್ಯಮ ವರ್ಗದ ರಹದಾರಿ ಕಲ್ಪಿಸಲು ಸಂದೇಶ್ ಸ್ವಾಮಿ ಆಗ್ರಹ
ಮೈಸೂರು

ಕಂದಾಯ ರಶೀದಿ ಕಡ್ಡಾಯ ಮಾಡದೇ ಸಣ್ಣ, ಮಧ್ಯಮ ವರ್ಗದ ರಹದಾರಿ ಕಲ್ಪಿಸಲು ಸಂದೇಶ್ ಸ್ವಾಮಿ ಆಗ್ರಹ

July 19, 2018

ಮೈಸೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆದಾರರಿಗೆ ಕಂದಾಯ ರಶೀದಿ ಕಡ್ಡಾಯ ಮಾಡದೇ ರಹದಾರಿ ಅಥವಾ ತಾತ್ಕಾಲಿಕ ರಹದಾರಿ ನೀಡಬೇಕೆಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಉದ್ದಿಮೆ ರಹದಾರಿ ನೀಡುವಾಗ ಅಥವಾ ನವೀಕರಿಸುವಾಗ ಕಂದಾಯ ಪಾವತಿಯ ರಶೀದಿ ಅವಶ್ಯಕವೆಂದು ತಿಳಿಸಿ ಉದ್ದಿಮೆ ನವೀಕರಿಸಲು ಅಧಿಕಾರಿಗಳು ನಿರಾಕರಿಸುತ್ತಿ ರುವುದು ಕಂಡು ಬಂದಿದೆ ಎಂದಿದ್ದಾರೆ.

ಮೈಸೂರು ನಗರದಲ್ಲಿ ಸುಮಾರು 2 ಲಕ್ಷದಷ್ಟು ಸಣ್ಣ, ಮಧ್ಯಮ ಹಾಗೂ ಬೃಹತ್ ಉದ್ದಿಮೆಗಳಿದ್ದು, ಅದರಲ್ಲಿ ಶೇ.30ರಷ್ಟು ಉದ್ದಿಮೆದಾರರು ಮಾತ್ರ ರಹದಾರಿ ಪಡೆಯುತ್ತಿದ್ದು, ಶೇ.70ರಷ್ಟು ಉದ್ದಿಮೆದಾರರು ಹಲವಾರು ಕಾರಣಗಳಿಂದ ರಹದಾರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನಗರ ಪಾಲಿಕೆಗೆ ವಾರ್ಷಿಕ 6ರಿಂದ 8 ಕೋಟಿ ಆದಾಯ ನಷ್ಟವಾಗುತ್ತಿದೆ.

ಉದ್ದಿಮೆದಾರರ ಕಟ್ಟಡ ಮಾಲೀಕರು ಕಂದಾಯ ಪಾವತಿಸಿದ್ದರೂ ಉದ್ದಿಮೆದಾರರಿಗೆ ಹಲವಾರು ಕಾರಣದಿಂದ ರಶೀದಿ ನೀಡದೇ ಅನಗತ್ಯ ತೊಂದರೆ ಕೊಡುತ್ತಿರುವುದರಿಂದ ಬಹುತೇಕ ಉದ್ದಿಮೆದಾರರು ರಹದಾರಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಂದೇಶ್ ಸ್ವಾಮಿ ತಿಳಿಸಿದ್ದಾರೆ.

ಕಂದಾಯ ರಶೀದಿ ನೀಡದೇ ಇರುವ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಪಾಲಿಕೆಯಿಂದ ರಹದಾರಿ ನೀಡದ ಕಾರಣ ಅಂತಹ ಉದ್ದಿಮೆದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸಹಾಯ ಧನದಿಂದ ವಂಚಿತರಾಗುತ್ತಿದ್ದಾರೆ. ಪಾಲಿಕೆ ನೀಡುವ ಉದ್ದಿಮೆ ರಹದಾರಿಯು ಯಾವುದೇ ಆಸ್ತಿಯ ಅಧಿಕೃತ ದಾಖಲೆಯಾಗದಿರುವ ಕಾರಣ ರಹದಾರಿ ನೀಡುವುದಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅಥವಾ ತಾತ್ಕಾಲಿಕ ರಹದಾರಿಯನ್ನಾದರೂ, ನೀಡಬಹುದು ಎಂದು ಸಲಹೆ ನೀಡಿದ್ದಾರೆ.

ಈ ಸಂಬಂಧ ಹಿಂದಿನ ಕೌನ್ಸಿಲ್ ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆದು ಪಾಲಿಕೆಯ ಆದಾಯ ದೃಷ್ಟಿಯಿಂದ ಹಾಗೂ ಉದ್ದಿಮೆದಾರರ ಜೀವನೋಪಾಯಕ್ಕಾಗಿ ತಾತ್ಕಾಲಿಕ ರಹದಾರಿ ನೀಡುವಂತೆ ತೀರ್ಮಾನಿಸಲಾಗಿದೆ. ಆದ್ದರಿಂದ ರಶೀದಿ ಕಂದಾಯ ಕಡ್ಡಾಯ ಮಾಡದೇ ರಹದಾರಿ ಅಥವಾ ತಾತ್ಕಾಲಿಕ ರಹದಾರಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪಾಲಿಕೆ ಆಯುಕ್ತರನ್ನು ಸಂದೇಶ್ ಸ್ವಾಮಿ ಕೋರಿದ್ದಾರೆ.

Translate »