ತಲಕಾಡು ಕಾವೇರಿ ನಿಸರ್ಗಧಾಮ ಜಲಮಯ: ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ
ಮೈಸೂರು

ತಲಕಾಡು ಕಾವೇರಿ ನಿಸರ್ಗಧಾಮ ಜಲಮಯ: ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ

July 19, 2018

ಮೈಸೂರು: ಕಾವೇರಿ ಹಾಗೂ ಕಪಿಲಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ತಲಕಾಡು ಕಾವೇರಿ ನಿಸರ್ಗಧಾಮ ಜಲಾವೃತಗೊಂಡಿದ್ದು, ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.

ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿರುವುದರಿಂದ ಎರಡು ನದಿಯ ನೀರು ತಿ.ನರಸೀಪುರದಲ್ಲಿ ಸಂಗಮವಾಗಿ ತಲಕಾಡಿನ ಮೂಲಕ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಹಾಗೂ ಕಾವೇರಿ ನಿಸರ್ಗಧಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ತಿ.ನರಸೀಪುರದಿಂದ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ತಲಕಾಡಿಗೆ ಬರುವ ಪ್ರವಾಸಿಗರು ಮರಳುಗುಡ್ಡ ಹಾಗೂ ಕಾವೇರಿ ದಡಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ.

ಮರಳು ದಿಬ್ಬದ ನಡುವೆಯೇ ಕಾವೇರಿ ನದಿ ಹರಿಯುವುದರಿಂದ ಜಲಕ್ರೀಡೆಗೆ ಮೈಸೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ಸ್ಥಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳಲು ತಲಕಾಡು ಪೊಲೀಸರೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮುಂದಾಗಿದ್ದಾರೆ. ಇದರಿಂದಾಗಿ ತಲಕಾಡು ಗ್ರಾಮದಿಂದ ನದಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ, ನದಿಯ ದಡದತ್ತ ಯಾರೊಬ್ಬರು ಪ್ರವೇಶಿಸದಂತೆ ತಡೆಹಿಡಿಯಲಾಗಿದೆ.

ಡಿಸಿ ಪರಿಶೀಲನೆ: ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡುತ್ತಿರುವುದರಿಂದ ವಿವಿಧೆಡೆ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿರುವುದು ಹಾಗೂ ಪ್ರವಾಸಿಗರ ದಂಡೇ ಆಗಮಿಸುತ್ತಿರುವುದರಿಂದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಲಕಾಡಿಗೆ ತೆರಳಿ ಕೈಗೊಂಡಿರುವ ಭದ್ರತಾ ಕ್ರಮವನ್ನು ಅವಲೋಕಿಸಿದರು. ಇನ್ನೂ ನೀರಿನ ಪ್ರಮಾಣ ಹೆಚ್ಚಾಗಬಹುದು. ಯಾವುದೇ ಕಾರಣಕ್ಕೂ ಪ್ರವಾಸಿಗರಾಗಲೀ, ಸ್ಥಳೀಯರಾಗಲೀ ತೊಂದರೆಗೆ ಸಿಲುಕದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದರು.

ಜಂಟಿ ಕಾರ್ಯಾಚರಣೆ: ತಲಕಾಡಿನಲ್ಲಿ ಪ್ರವಾಸಿಗರು ನದಿ ದಡಕ್ಕೆ ಹೋಗುವುದನ್ನು ತಡೆಗಟ್ಟಲು ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯೋನ್ಮುಖವಾಗಿವೆ. ಮುಖ್ಯ ರಸ್ತೆಯಲ್ಲಿಯೇ ಪರಿಸ್ಥಿತಿ ಪ್ರವಾಸಿಗರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಆದರೆ ವಿವಿಧ ದೇವಾಲಯಕ್ಕೆ ತೆರಳಿದ್ದ ಪ್ರವಾಸಿಗರು ಪೊಲೀಸರ ಕಣ್ತಪ್ಪಿಸಿ ನದಿ ದಡದತ್ತ ಹೋಗಲು ಯತ್ನಿಸುವವರ ಮೇಲೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ದೇವಾಲಯದ ಸುತ್ತಮುತ್ತಲ ಜಾಗ ಕಾವೇರಿ ನಿಸರ್ಗಧಾಮಕ್ಕೆ ಸೇರಿರುವುದರಿಂದ ಅರಣ್ಯ ಇಲಾಖೆಯ ಸುಪರ್ದಿಗೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಉಪವಲಯ ಸಂರಕ್ಷಣಾಧಿಕಾರಿ ಎಂ.ಎಸ್.ಉಮೇಶ್, ಗಾರ್ಡ್‍ಗಳಾದ ಮಹದೇವಯ್ಯ, ಲೋಕೇಶ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

Translate »