ಏ.1ರಿಂದ ಜು. 17ರವರೆಗೆ ಒಟ್ಟು 8.76 ಕೋಟಿ ರೂ. ತೆರಿಗೆ ಸಂಗ್ರಹ
ಮೈಸೂರು

ಏ.1ರಿಂದ ಜು. 17ರವರೆಗೆ ಒಟ್ಟು 8.76 ಕೋಟಿ ರೂ. ತೆರಿಗೆ ಸಂಗ್ರಹ

July 19, 2018

ಮೈಸೂರು: ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ವಸೂಲಾತಿಯನ್ನು ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.

ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ, ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ವಸತಿ ಬಡಾವಣೆಗಳಿಗೆ ಮೂಲಸೌಲಭ್ಯ ಒದಗಿಸುವುದರ ಜತೆಗೆ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಾಲಿಕೆಯು, ಅದಕ್ಕೆ ತಗಲುವ ವೆಚ್ಚ ಭರಿಸಲು ನಾಗರಿಕರಿಂದ ವಿವಿಧ ರೂಪದ ತೆರಿಗೆ ವಸೂಲಿ ಮಾಡದೇ ಅನ್ಯ ಮಾರ್ಗವಿಲ್ಲ.

ಮೈಸೂರು ನಗರದಾದ್ಯಂತ ಆಸ್ತಿ ತೆರಿಗೆ ಪಾವತಿಸುವಂತೆ ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ನಗರಪಾಲಿಕೆಯು ಸೂಚನೆ ನೀಡಿದರೂ, ನಿರೀಕ್ಷಿತ ಮಟ್ಟದಲ್ಲಿ ಮಾಲೀಕರು ಸ್ಪಂದಿಸದ ಕಾರಣ ಇದೀಗ ಮನೆ, ವಾಣಿಜ್ಯ ಕಟ್ಟಡ ಸೇರಿದಂತೆ ಚರಾಸ್ತಿಗಳ ತೆರಿಗೆ ವಸೂಲಿಗಾಗಿ ಅಧಿಕಾರಿಗಳು ಮಾಲೀಕರ ಬಳಿಗೆ ತೆರಳುತ್ತಿದ್ದಾರೆ.

ಮೈಸೂರು ಮಹಾನಗರಪಾಲಿಕೆಯ ಎಲ್ಲಾ 9 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಆಯಾ ವಲಯ ಕಮೀಷ್ನರ್‍ಗಳು ಕಂದಾಯಾಧಿಕಾರಿಗಳು, ರೆವಿನ್ಯೂ ಇನ್ಸ್‍ಪೆಕ್ಟರ್‍ಗಳೊಂದಿಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಮೈಸೂರಿನ ಆಕಾಶವಾಣಿ ಸರ್ಕಲ್‍ನಲ್ಲಿರುವ ಪಾಲಿಕೆ ವಲಯ ಕಚೇರಿ-4ರ ವಲಯ ಆಯುಕ್ತರಾದ ವಿ. ಪ್ರಿಯದರ್ಶಿನಿ ನೇತೃತ್ವದ ಅಧಿಕಾರಿಗಳು ತಮ್ಮ ವ್ಯಾಪ್ತಿಯ 23, 30, 31, 33 ಹಾಗೂ ವಿಜಯನಗರ 3ನೇ ಹಂತದ 12,765 ಆಸ್ತಿಗಳ ಪೈಕಿ 2018ರ ಏಪ್ರಿಲ್ 1 ರಿಂದ ಜುಲೈ 17ರವರೆಗೆ 8,25,41,083 ರೂ.ಗಳ ತೆರಿಗೆ ವಸೂಲಿ ಮಾಡಿದ್ದಾರೆ.

ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ 7,29,51,999 ರೂ., ಜೂನ್‍ನಲ್ಲಿ 1,10,98,392 ರೂ. ಹಾಗೂ ಜುಲೈ 2 ರಿಂದ 17ರವರೆಗೆ 264 ಮಾಲೀಕರಿಂದ 34,90,692 ರೂ.ಆಸ್ತಿ ತೆರಿಗೆಯನ್ನು ವಸೂಲಿ ಮಾಡಲಾಗಿದ್ದು, ಕೆಲವರು ತಾವೇ ಸ್ವಯಂ ಪ್ರೇರಿತರಾಗಿ ಕಚೇರಿಗೆ ಬಂದು ತೆರಿಗೆ ಪಾವತಿಸುತ್ತಿದ್ದಾರೆ. ಕೆಲವರು ಅವರ ಬಳಿಗೆ ಹೋದಾಗ ಚೆಕ್ ಮೂಲಕ ಕಂದಾಯ ಸಂದಾಯ ಮಾಡುತ್ತಿದ್ದಾರೆ ಎಂದು ಪ್ರಿಯದರ್ಶಿನಿ ತಿಳಿಸಿದರು.

ನಾವು ಕಾರ್ಯಾಚರಣೆ ಮುಂದುವರೆಸಿದ್ದು, ಯಾರೂ ನಿರಾಕರಿಸುತ್ತಿಲ್ಲವಾದ್ದರಿಂದ ಆಸ್ತಿ ಜಪ್ತಿ ಮಾಡುವ ಪ್ರಮೇಯ ಬಂದಿಲ್ಲ ಎಂದು ಅವರು ತಿಳಿಸಿದರು.

ಕಂದಾಯ ಪರಿಶೀಲಕರಾದ ಎ.ದೇವರಾಜು, ಡಿ.ಎಸ್. ಅಶೋಕ್, ಡಿ. ಮನು, ಕೆ.ಎಂ.ಮಂಜುನಾಥ್ ಹಾಗೂ ರಜಾಕ್ ಅವರು ತೆರಿಗೆ ವಸೂಲಾತಿ ಡ್ರೈವ್‍ನಲ್ಲಿ ಸಾಥ್ ನೀಡುತ್ತಿದ್ದು, ಮುಂದೆ ಕಾರ್ಯಾಚರಣೆ ತೀವ್ರಗೊಳಿಸಿ ಗುರಿ ಮುಟ್ಟುತ್ತೇವೆ ಎಂದು ವಲಯ ಆಯುಕ್ತರು ತಿಳಿಸಿದ್ದಾರೆ.

Translate »