ಮೈಸೂರಲ್ಲಿ ಜಯಚಾಮರಾಜ ಒಡೆಯರ್ ಜನ್ಮ ದಿನಾಚರಣೆ
ಮೈಸೂರು

ಮೈಸೂರಲ್ಲಿ ಜಯಚಾಮರಾಜ ಒಡೆಯರ್ ಜನ್ಮ ದಿನಾಚರಣೆ

July 19, 2018

ಮೈಸೂರು:  ಮಹಾರಾಜ ಜಯಚಾಮರಾಜ ಒಡೆಯರ್ ಜನಪರ ಆಡಳಿತಕ್ಕೆ ಹೆಸರಾಗಿದ್ದೂ ಮಾತ್ರವಲ್ಲ, ಕಲೆ, ಸಾಹಿತ್ಯ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ನೀಡಿದ್ದರು. ವಿವಿಧ ಪ್ರಕಾರದ ಗೀತೆಗಳ 20 ಸಾವಿರಕ್ಕೂ ಹೆಚ್ಚು ಧ್ವನಿ ಮುದ್ರಿಕೆಗಳನ್ನು ಸಂಗ್ರಹಿಸಿದ್ದರು ಎಂದು ಎಸ್‍ಬಿಆರ್‍ಆರ್ ಮಹಾಜನ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಭೀಮರಾಜ್ ಸ್ಮರಿಸಿದರು.

ಮೈಸೂರಿನ ನಜರ್‍ಬಾದಿನ ಶ್ರೀವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶ್ರೀಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ 100ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಸಂಗೀತಾಸಕ್ತರಾಗಿದ್ದರು. ಜೊತೆಗೆ ಸಂಗೀತ ಕಲಾವಿದರಿಗೆ ಅಪಾರ ಪ್ರೋತ್ಸಾಹ ನೀಡಿದ್ದರು. ಅರಮನೆಯಲ್ಲಿ ವಿವಿಧ ಪ್ರಕಾರದ ಗೀತೆಗಳ 20 ಸಾವಿರಕ್ಕೂ ಹೆಚ್ಚು ಧ್ವನಿ ಮುದ್ರಿಕೆ ಸಂಗ್ರಹಿಸಿದ್ದರು. ಇವುಗಳನ್ನು ಅರಮನೆಯಲ್ಲಿ ಇಂದಿಗೂ ಕಾಣಬಹುದು ಎಂದು ತಿಳಿಸಿದರು.

ಎಲ್ಲಾ ಸಮುದಾಯಗಳಿಗೂ ಸಮಬಾಳು, ಸಮಪಾಲು ಎಂಬ ತತ್ವದಲ್ಲಿ ಆಡಳಿತ ನಡೆಸಿದ ಜಯಚಾಮರಾಜ ಒಡೆಯರ್ ಜನಸಾಮಾನ್ಯರ ಹೃದಯ ಸಾಮ್ರಾಜ್ಯದಲ್ಲಿ ನೆಲೆ ನಿಂತಿದ್ದಾರೆ. ಸಂಸ್ಕೃತ ಕವಿಗಳನ್ನು ಕರೆಯಿಸಿ ಸಂಸ್ಕೃತ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಕನ್ನಡ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ರಾಜಪ್ರಭುತ್ವ ತ್ಯಾಗ ಮಾಡಿದ ಕೀರ್ತಿ ಜಯಚಾಮರಾಜ ಒಡೆಯರಿಗೆ ಸಲ್ಲುತ್ತದೆ ಎಂದು ನುಡಿದರು.

1919ರ ಜು.18ರಂದು ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಹಾಗೂ ಕೆಂಪು ಚೆಲುವಾಜಮ್ಮಣ್ಣಿ ದಂಪತಿ ಪುತ್ರರಾಗಿ ಜಯಚಾಮರಾಜ ಒಡೆಯರ್ ಜನ್ಮ ತಾಳುತ್ತಾರೆ. ಇವರಿಗೆ ತಮ್ಮ ದೊಡ್ಡಪ್ಪ ರಾಜರ್ಷಿ ನಾಲ್ವಡಿ ಕೃಷ್ಣರಾಜ ಕೃಷ್ಣರಾಜ ಒಡೆಯರ್ ಶಿಕ್ಷಣದ ಮೌಲ್ಯವನ್ನು ತಿಳಿಸಿಕೊಡುತ್ತಾರೆ. ಪ್ರಜಾವತ್ಸಲ, ಸಹೃದಯಿ ಸಂಪನ್ನ, ಸಂಗೀತ ಪ್ರೇಮಿ, ದಾರ್ಶನಿಕ, ವಾಗ್ಗೇಯಕಾರ ಸೇರಿದಂತೆ ಹತ್ತು ಹಲವು ಬಿರುದುಗಳಿಗೆ ಜಯಚಾಮರಾಜ ಒಡೆಯರ್ ಭಾಜನರಾಗಿದ್ದಾರೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ 500ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಇವುಗಳ ಪೈಕಿ ಮೈಸೂರು ಸಂಸ್ಥಾನ ಆದರ್ಶ ಸಂಸ್ಥಾನ ಎಂದೇ ಖ್ಯಾತಿಗೊಂಡಿತ್ತು. ಸಂಸ್ಥಾನದ ಅಭಿವೃದ್ಧಿಗೆ ಅಗತ್ಯವಾದ ರೀತಿಯ ಆಡಳಿತ ವ್ಯವಸ್ಥೆ ಹಾಗೂ ಜನಸಾಮಾನ್ಯರ ಬದುಕಿಗೆ ಪೂರಕವಾದ ವಾತಾವರಣ ನಿರ್ಮಿಸಿದ್ದ ಹಿನ್ನೆಲೆಯಲ್ಲಿ ಮೈಸೂರು ಈ ರೀತಿಯ ಪ್ರಶಂಸೆಗೆ ಭಾಜನವಾಗಿತ್ತು. 1399ರಲ್ಲಿ 33 ಹಳ್ಳಿಗಳಿಂದ ಯದುವಂಶದ ಆಡಳಿತ ಯದುರಾಯರಿಂದ ಆರಂಭವಾಗುತ್ತದೆ. 550 ವರ್ಷಗಳ ಸುದೀರ್ಘ ಕಾಲದ ಆಳ್ವಿಕೆ ನಡೆಸಿದ ಹೆಗ್ಗಳಿಕೆಗೆ ಈ ರಾಜವಂಶ ಭಾಜನವಾಗಿದೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ಜಯಚಾಮರಾಜ ಒಡೆಯರ್ ಅವರ ಚಿತ್ರಪಟಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಲ್ಲದೆ, ಮೈಸೂರು ಸಂಸ್ಥಾನದ ಗೀತೆಯನ್ನು ಕಾಲೇಜಿನ ವಿದ್ಯಾರ್ಥಿನಿಯರು ಸಾದರಪಡಿಸಿದರು. ಟ್ರಸ್ಟ್‍ನ ಉಪಾಧ್ಯಕ್ಷೆ ಡಾ.ಭಾರತಿ ಶ್ರೀಧರ್ ರಾಜ್‍ಅರಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‍ನ ಕಾರ್ಯದರ್ಶಿ ಮಹೇಶ್ ಎನ್.ಅರಸ್, ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ನಂಜುಂಡಸ್ವಾಮಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಹಾಜರಿದ್ದರು.

ಮೈಸೂರು ಅರಮನೆ ಆಡಳಿತ ಮಂಡಳಿಯಿಂದ  ಜಯಚಾಮರಾಜ ಒಡೆಯರ್‍ಗೆ ನಮನ

ಮೈಸೂರು: ಮೈಸೂರು ಅರಮನೆಯ ಆವರಣದಲ್ಲಿ ಬುಧವಾರ ಅರಮನೆ ಸಿಬ್ಬಂದಿ ಮೈಸೂರು ಸಂಸ್ಥಾನದ ಕೊನೆಯ ಅರಸ ಜಯಚಾಮರಾಜ ಒಡೆಯರ್ ಅವರ ನೂರನೇ ಜನ್ಮದಿನವನ್ನು ಆಚರಿಸಿದರು.

ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರ ಕಚೇರಿ ಬಳಿ ಜಯಚಾಮರಾಜ ಒಡೆಯರ್ ಅವರ ಭಾವಚಿತ್ರವನ್ನಿಟ್ಟು ಅರಮನೆಯ ಸಿಬ್ಬಂದಿ ಗೌರವ ಸಮರ್ಪಿಸಿದರು. ಇದೇ ವೇಳೆ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಮೈಸೂರು ಸಂಸ್ಥಾನದ ಕೊನೆಯ ಅರಸರಾಗಿದ್ದ ಜಯಚಾಮರಾಜ ಒಡೆಯರ್ ಅವರು, ತಮ್ಮ ಆಡಳಿತಾವಧಿಯಲ್ಲಿ ಸಂಸ್ಥಾನದ ಜನರ ರಕ್ಷಣೆಗೆ ಆದ್ಯತೆ ನೀಡಿದ್ದರು ಎಂದು ಸ್ಮರಿಸಿದ ಅವರು, ಜಯಚಾಮರಾಜ ಒಡೆಯರ್ ಪ್ರತಿಮೆಯನ್ನು ಮೈಸೂರು ಮಹಾನಗರ ಪಾಲಿಕೆ ನಿರ್ವಹಣೆ ಮಾಡುತ್ತಿದ್ದು, ಅರಮನೆ ಮಂಡಳಿಗೆ ವಹಿಸಿದರೆ ಸಮರ್ಥವಾಗಿ ನಿರ್ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅರಸು ಮಹಾಸಭಾದ ಅಧ್ಯಕ್ಷ ನಂದೀಶ್ ಅರಸ್, ಅರಮನೆ ಉಳಿಸಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ರಾಮೇಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »