ಜಯಚಾಮರಾಜ ಒಡೆಯರ್ ಜನ್ಮ ಶತಾಬ್ದಿ: ಮೈಸೂರು ಪಾಲಿಕೆ ನಿರ್ಲಕ್ಷ್ಯಕ್ಕೆ ಖಂಡನೆ
ಮೈಸೂರು

ಜಯಚಾಮರಾಜ ಒಡೆಯರ್ ಜನ್ಮ ಶತಾಬ್ದಿ: ಮೈಸೂರು ಪಾಲಿಕೆ ನಿರ್ಲಕ್ಷ್ಯಕ್ಕೆ ಖಂಡನೆ

July 19, 2018

ಮೈಸೂರು:  ಮೈಸೂರು ಸಂಸ್ಥಾನದ ಕೊನೆಯ ಅರಸ ಜಯ ಚಾಮರಾಜೇಂದ್ರ(ಜಯಚಾಮರಾಜ) ಒಡೆಯರ್ ಅವರ 100ನೇ ಜನ್ಮ ದಿನವನ್ನು ಜಿಲ್ಲಾಡಳಿತ ಅಥವಾ ಪಾಲಿಕೆ ವತಿಯಿಂದ ಆಚರಿಸದೆ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಳೆದ ವರ್ಷವಷ್ಟೇ ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಜಯಚಾಮರಾಜ ಒಡೆಯರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಪುನರ್ ನಿರ್ಮಿಸಿದ್ದ ಈ ವೃತ್ತವನ್ನು ಸರ್ಕಾರವೇ ಉದ್ಘಾಟಿಸಿತ್ತು. ಆದರೆ ಇಂದು ಮೈಸೂರು ಸಂಸ್ಥಾನದ ಕೊನೆಯ ರಾಜರಾಗಿ ಆಳ್ವಿಕೆ ನಡೆಸಿದ್ದ ಜಯಚಾಮರಾಜ ಒಡೆಯರ್ ಅವರ 100ನೇ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಅರಸು ಮಂಡಳಿ ಸಂಘ, ಅರಸು ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾರ್ಡಿಂಗ್ ವೃತ್ತದಲ್ಲಿರುವ ಜಯಚಾಮರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆದರೆ ಪ್ರತಿಮೆ ಬಳಿ ತೆರಳುವುದಕ್ಕೆ ಇರುವ ಗೇಟ್‍ಗೆ ಬೀಗ ಹಾಕಲಾಗಿತ್ತು. ಅಲ್ಲದೆ, ಪ್ರತಿಮೆಯ ಸುತ್ತ ಒಣಗಿದ ಎಲೆಗಳು ಹಾಗೂ ಇನ್ನಿತರ ಕಸ ಬಿದ್ದಿತ್ತು. ಇದನ್ನು ಕಂಡು ಅರಸು ಮಂಡಳಿ ಮತ್ತು ಅರಸು ಸಭಾದ ಕಾರ್ಯಕರ್ತರು ಜಿಲ್ಲಾಡಳಿತದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಗೇಟ್‍ಗೆ ಬೀಗ ಹಾಕಿದ್ದರಿಂದ ಪ್ರತಿಮೆಯ ಬಳಿಗೆ ಹೋಗಲು ಸಾಧ್ಯವಾಗದೆ ವೃತ್ತದ ಗ್ರಿಲ್‍ಗೆ ಜಯಚಾಮರಾಜ ಒಡೆಯರ್ ಭಾವಚಿತ್ರವನ್ನಿಟ್ಟು ಪುಷ್ಪಾರ್ಚನೆಯೊಂದಿಗೆ ಗೌರವ ಸಮರ್ಪಿಸಿದರು.

ಮಾಲಾರ್ಪಣೆ ಮಾಡಬೇಕಾಗಿತ್ತು: ಜಯಚಾಮರಾಜ ಒಡೆಯರ್ ಅವರ ಜನ್ಮ ಶತಾಬ್ದಿಯಾಗಿರುವುದರಿಂದ ಜಿಲ್ಲಾಡಳಿತವಾಗಲೀ, ಮೈಸೂರು ನಗರಪಾಲಿಕೆಯಾಗಲೀ ಜಯಚಾಮರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಬಹುದಾಗಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂತು. ಅಲ್ಲದೆ, ವೃತ್ತ ಹಾಗೂ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡಬಹುದಾಗಿತ್ತು. ಆದರೆ ಬೀಗವನ್ನೇ ತೆಗೆಯದೆ ಇರುವುದು ಬೇಜವಾಬ್ದಾರಿಯ ಧೋರಣೆಯಾಗಿದೆ ಎಂದು ಅರಸು ಮಂಡಳಿ ಮತ್ತು ಅರಸು ಮಹಾಸಭಾದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅರಸು ಮಂಡಳಿ ಸಂಘದ ಅಧ್ಯಕ್ಷ ಕೆಂಪರಾಜೇ ಅರಸು, ಉಪಾಧ್ಯಕ್ಷ ಹೆಚ್‍ಎಂಟಿ ಗೋಪಾಲರಾಜೇ ಅರಸ್ ಹಾಗೂ ಮುಖಂಡರುಗಳಾದ ಮಹೇಶ್ ಅರಸ್, ಅಜಿತ್ ಅರಸ್ ಸೇರಿದಂತೆ ಇನ್ನಿತರರಿದ್ದರು.

Translate »