ಕಾವೇರಿಗೆ ಮೇಲ್ಮನವಿ ಸಲ್ಲಿಸದಿರಲು ನಿರ್ಧಾರ
ಮೈಸೂರು

ಕಾವೇರಿಗೆ ಮೇಲ್ಮನವಿ ಸಲ್ಲಿಸದಿರಲು ನಿರ್ಧಾರ

July 19, 2018

ನವದೆಹಲಿ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಬಗ್ಗೆ ಸಂಸತ್‍ನಲ್ಲಿ ವಿಷಯ ಪ್ರಸ್ತಾಪಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ರಾಜ್ಯ ಸಂಸದರ ಸಭೆಯಲ್ಲಿ ಮೇಲ್ಮನವಿ ಸಲ್ಲಿಸದಿರಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

ಬುಧವಾರ ಸಂಜೆ ಎಚ್.ಡಿ.ಕುಮಾರ ಸ್ವಾಮಿ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರ ಜೊತೆ ಸಭೆ ನಡೆಸಿದರು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ಸ್ಕೀಮ್ ಬಗ್ಗೆ ಸಂಸತ್‍ನಲ್ಲಿ ಪ್ರಸ್ತಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಎಚ್.ಡಿ.ದೇವೇಗೌಡ ಸೇರಿದಂತೆ ರಾಜ್ಯದ ಸಂಸದರು, ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಅಧಿಕಾರಿ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

`ಕಾವೇರಿ ನದಿ ನೀರು ಹಂಚಿಕೆ ವಿಚಾರ ದಲ್ಲಿ ರಾಜ್ಯದ ಎಲ್ಲಾ ಸಂಸದರು ಪಕ್ಷಭೇದ ಮರೆತು ಒಗ್ಗಟ್ಟಾಗಿರಬೇಕು’ ಎಂದು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆಯಲ್ಲಿ ಕರೆ ನೀಡಿದರು. ಸಭೆಯ ಬಳಿಕ ಮಾತ ನಾಡಿದ ಡಿ.ಕೆ.ಶಿವಕುಮಾರ್, ‘ಕಾವೇರಿ ನದಿ ನೀರು  ನಿರ್ವಹಣಾ ಪ್ರಾಧಿಕಾರ ರಚನೆ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು. ಈ ಬಗ್ಗೆ ಸಂಸದರ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಹೆಚ್‍ಡಿಕೆ ಸಂತಸ: ಕೇಂದ್ರ ಸರಕಾರದ ವಿವಿಧ ಸಚಿವರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ಸುಮಾರು 2,500 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅನುದಾನವನ್ನು ಪಡೆದುಕೊಳ್ಳುವಲ್ಲಿ ಮತ್ತು ವಿವಿಧ ಯೋಜನೆಗಳಿಗೆ ಅನುಮತಿ ದೊರಕಿಸಿಕೊಳ್ಳುವಲ್ಲಿ ತಮ್ಮ ಎರಡು ದಿನಗಳ ದೆಹಲಿ ಭೇಟಿಯು ಸಂಪೂರ್ಣ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ಸಂಸತ್ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರೊಂದಿಗೆ ಚರ್ಚಿಸುವ ಸಲುವಾಗಿ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಈ ವೇಳೆಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕರ ಸರಬರಾಜು ಸಚಿವರು, ಭೂ ಸಾರಿಗೆ ಸಚಿವರು, ಜಲಸಂಪನ್ಮೂಲ ಸಚಿವರು, ಕೃಷಿ ಸಚಿವರು, ರೈಲ್ವೆ ಮತ್ತು ಕಲ್ಲಿದ್ದಲು ಸಚಿವರು ಹಾಗೂ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ‘ತಮ್ಮ ಭೇಟಿಯ ವೇಳೆ ರಾಜ್ಯದ ಕೋರಿಕೆಗಳಿಗೆ ಎಲ್ಲಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಂತೋಷ ತಂದಿದೆ. ಹಾಗೆಯೇ, ಸಚಿವರೊಂದಿಗೆ ನಡೆಸಿದ ಮಾತುಕತೆಯೂ ಫಲಪ್ರದವಾಗಿದೆ. ಎಲ್ಲಾ ಸಚಿವರನ್ನು ರಾಜ್ಯದ ಪರವಾಗಿ ಅಭಿನಂದಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Translate »