ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ
ದೇಶ-ವಿದೇಶ

ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

July 19, 2018

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ವಿಪಕ್ಷಗಳು ಇಂದು ಅವಿಶ್ವಾಸ ನಿರ್ಣಯ ಮಂಡಿಸಿವೆ. ಅದು ಲೋಕಸಭೆಯಲ್ಲಿ ಜುಲೈ 20ರಂದು ಚರ್ಚೆಗೆ ಬರಲಿದ್ದು, ಅಂದೇ ಮತ ಚಲಾವಣೆ ನಡೆಯಲಿದೆ. ಅವಿಶ್ವಾಸಗೊತ್ತುವಳಿ ಮಂಡನೆಯನ್ನು ಅಂಗೀಕರಿಸಿರುವ ಸ್ಪೀಕರ್ ಸುಮಿತ್ರಾ ಮಹಾ ಜನ್ ಅವರು, ಜುಲೈ.20 ರಂದು ಲೋಕಸಭೆಯಲ್ಲಿ ಈ ಕುರಿತು ಚರ್ಚೆ ಮತ್ತು ಅಂದೇ ಮತಚಲಾವಣೆಗೆ ದಿನಾಂಕ ನಿಗದಿ ಮಾಡಿದ್ದಾರೆ.

ಬಿಜೆಪಿ 273 ಲೋಕಸಭಾ ಸದಸ್ಯರನ್ನು ಹೊಂದಿದ್ದು ಶುಕ್ರವಾರ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಕಾಂಗ್ರೆಸ್, ಸಮಾಜ ವಾದಿ ಪಕ್ಷ(ಎಸ್ಪಿ), ತೆಲುಗುದೇಶಂ(ಟಿಡಿಪಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮಂಡಿಸಿರುವ ಈ ಗೊತ್ತುವಳಿಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರಣೆಗೆ ಸಂಬಂಧಿಸಿದಂತೆ ಕೇಂದ್ರದ ಆಡಳಿತಾರೂಢ ಎನ್‍ಡಿಎ ಸರ್ಕಾರದ ವಿರುದ್ದ ಸಂಸತ್ತಿನಲ್ಲಿ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷ (ಟಿಡಿಪಿ) ಅವಿಶ್ವಾಸ ನಿರ್ಣಯ ಮಂಡನೆ ಮಾಡಿವೆ. ಜುಲೈ 20ರಂದು ಲೋಕಸಭೆಯಲ್ಲಿ, ಜು.23ರಂದು ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆಗೆ ಅವಕಾಶ ನೀಡಿದ್ದಾರೆ.

ನಿರ್ಣಯ ಎದುರಿಸಲು ಸಿದ್ಧ: ಲೋಕಸಭೆಯಲ್ಲಿ ನಮಗೆ ಬಹುಮತವಿದ್ದು, ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಎದುರಿಸಲು ಸಿದ್ಧರಿದ್ದೇವೆಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಲೋಕಸಭೆಯಲ್ಲಿ ನಮಗೆ ಬಹುಮತವಿದ್ದು, ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಎದುರಿಸಲು ಬಿಜೆಪಿ ನೇತೃತ್ವದ ಎನ್’ಡಿಎ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ಎನ್’ಡಿಎ ಸರ್ಕಾರಕ್ಕೆ ಬಹುಮತವಿದೆ. ದೇಶದ ಜನತೆ ಎನ್ ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. 21 ರಾಜ್ಯಗಳು ನಮಗೆ ಬೆಂಬಲ ನೀಡಿವೆ. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡನೆ ಎದುರಿಸಲು ನಾವು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ. ಇಂದಿನಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಯಥಾಪ್ರಕಾರ ವಿರೋಧ ಪಕ್ಷಗಳು ಕೋಲಾಹಲ ಎಬ್ಬಿಸಿದ್ದು, ಮಕ್ಕಳ ಕಳ್ಳರೆಂದು ಅಮಾಯಕರನ್ನು ಬಡಿದು ಕೊಲ್ಲುತ್ತಿರುವುದು, ನಿರುದ್ಯೋಗ, ಮಹಿಳಾ ಸುರಕ್ಷತೆ, ಜಮ್ಮು-ಕಾಶ್ಮೀರ ಪರಿಸ್ಥಿತಿ, ಕದನ ವಿರಾಮ ಉಲ್ಲಂಘನೆ, ಬೆಲೆ ಏರಿಕೆ ಇತ್ಯಾದಿ ವಿಚಾರಗಳ ಕುರಿತಂತೆ ಆಡಳಿತಾರೂಢ ಎನ್‍ಡಿಎ ಸರ್ಕಾರದ ವಿರುದ್ಧ ಕಿಡಿಕಾರಿವೆ.

Translate »