ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛಗೊಳಿಸಿದ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ, ಒಳಚರಂಡಿ ಸಂಘದ ಕಾರ್ಮಿಕರು
ಮೈಸೂರು

ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛಗೊಳಿಸಿದ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ, ಒಳಚರಂಡಿ ಸಂಘದ ಕಾರ್ಮಿಕರು

July 19, 2018

ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ಬುಧವಾರ ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಮಿಕರು ಬುಧವಾರ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿದರು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬುಧವಾರ ಬೆಳಿಗ್ಗೆ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಶಾಸಕ ಎಸ್.ಎ.ರಾಮದಾಸ್ ಕಸಗುಡಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆಷಾಡ ಮಾಸದ ಶುಕ್ರವಾರದಂದು ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಭಕ್ತರು ಹಾಗೂ ವಿವಿಧ ಹರಕೆ ಹೊತ್ತವರು 1001 ಮೆಟ್ಟಿಲುಗಳನ್ನು ಹತ್ತುವ ಮೂಲಕ ಬೆಟ್ಟವನ್ನು ತಲುಪಿ ದೇವಿಯ ದರ್ಶನ ಪಡೆಯುವುದು ವಾಡಿಕೆಯಾಗಿದೆ.ಆಷಾಡ ಮಾಸದಲ್ಲಿ ಶಕ್ತಿ ದೇವತೆಯಾಗಿರುವ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರೆ ಒಳಿತಾಗಲಿದೆ.

ಇದನ್ನು ಮನಗಂಡು ಮೆಟ್ಟಿಲು ಹತ್ತುವ ಭಕ್ತರ ಹಿತದೃಷ್ಟಿಯಿಂದ ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಮಿಕರು ಮೆಟ್ಟಿಲುಗಳ ಸ್ವಚ್ಛತೆ ಮಾಡುವುದಕ್ಕೆ ಮುಂದಾಗಿರುವುದು ಶ್ಲಾಘನೀಯ. ಬೆಟ್ಟಕ್ಕೆ ಬರುವ ಭಕ್ತರು ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಕಸವನ್ನು ಎಲ್ಲೆಂದರಲ್ಲಿ ಬೀಸಾಡಿ ಸ್ವಚ್ಛತೆಯನ್ನು ಹಾಳು ಮಾಡದಂತೆ ಮನವಿ ಮಾಡಿದರು.

ಬೆಳಗ್ಗೆ ಆರಂಭಿಸಿದ ಸ್ವಚ್ಛತಾ ಅಭಿಯಾನ ಮದ್ಯಾಹ್ನದವರೆಗೂ ನಡೆಯಿತು. ಸುಮಾರು 35ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಪಾದದಿಂದ ದೇವಾಲಯದವರೆಗೂ ಮೆಟ್ಟಿಲುಗಳನ್ನು ಗುಡಿಸಿದರು. ತೆಂಗಿನ ಕಾಯಿ ಚಿಪ್ಪು, ಪ್ಲಾಸ್ಟಿಕ್ ಪೇಪರ್, ಪಿನ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ನೆರವಾದರು.

ಈ ಸಂದರ್ಭದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರು, ಕಾರ್ಯದರ್ಶಿ ಸುರೇಶ್, ಕುಮಾರ್, ಮಹೇಶ್, ಜಗದೀಶ್, ಚಂದ್ರಗೌಡ, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಗೀತಾ ಮತ್ತು ನಿಖಿಲ್‍ಚಂದ್ರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »