ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ(ಎಂಸಿಡಿಸಿಸಿ) ಬ್ಯಾಂಕ್‍ನ ಹುಣಸೂರು ಶಾಖೆಯ ಮ್ಯಾನೇಜರ್ 27,79,60,719 ರೂ.ಗಳನ್ನು ದುರುಪಯೋಗಪಡಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಅವರನ್ನು ಇಂದು ಸೇವೆಯಿಂದ ಬಿಡುಗಡೆ ಮಾಡಿದ್ದು, ನೋಟೀಸ್ ನೀಡಲು ಸಿದ್ಧತೆಗಳು ನಡೆದಿವೆ.
ಎಂಸಿಡಿಸಿಸಿ ಬ್ಯಾಂಕ್‍ನ ಹುಣಸೂರು ಶಾಖೆಯ ಮ್ಯಾನೇಜರ್ ರಾಮಪ್ಪ ಪೂಜಾರ್, ರೈತರಿಗೆ ನೀಡಬೇಕಾದ ಸಾಲದ ಮೊತ್ತ ಕೋಟ್ಯಾಂತರ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಎದುರಿಸುತ್ತಿರುವವರು. ಇವರು ರೈತರಿಗೆ ಸಾಲ ನೀಡುವ ಸಲುವಾಗಿ ಹುಣಸೂರು ತಾಲೂಕಿನ ವಿವಿಧ ಸಹಕಾರ ಸಂಘಗಳಿಗೆ ಪೂರೈಸಲು ಕೇಂದ್ರ ಬ್ಯಾಂಕ್‍ನಿಂದ ಹುಣಸೂರು ಶಾಖೆಗೆ ಜಮೆಯಾಗಿದ್ದ ಹಣವನ್ನು ನಿಯಮಬಾಹಿರವಾಗಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ದುರುಪಯೋಗಪಡಿಸಿ ಕೊಂಡಿದ್ದಾರೆ ಎಂಬುದು
ಸಹಕಾರ ಇಲಾಖೆ ಅಧಿಕಾರಿಗಳು ನಡೆಸಿದ ತನಿಖೆಯಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ರಾಮಪ್ಪ ಪೂಜಾರ್‍ರವರು ಕೇವಲ 5 ತಿಂಗಳಲ್ಲೇ 27.79 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿರುವುದು ಎಂಸಿಡಿಸಿಸಿ ಬ್ಯಾಂಕ್ ಅಧಿಕಾರಿಗಳೇ ಬೆಚ್ಚಿ ಬೀಳುವಂತೆ ಮಾಡಿದೆ.
ವಿವರ: ಎಂಸಿಡಿಸಿಸಿ ಬ್ಯಾಂಕ್ ಹುಣಸೂರು ಶಾಖೆಯ ವ್ಯವಸ್ಥಾಪಕ ರಾಮಪ್ಪ ಪೂಜಾರ್‍ರವರು ಬ್ಯಾಂಕ್‍ನ ಕೋಟ್ಯಾಂತರ ರೂ.ಗಳನ್ನು ದುರುಪಯೋಗಪಡಿಸಿಕೊಂಡು ಆ ಹಣವನ್ನು ವೈಯಕ್ತಿಕವಾಗಿ ಲೇವಾದೇವಿಗೆ ಬಳಸಿಕೊಂಡಿದ್ದಾರೆ ಎಂಬ ದೂರಿನ ಮೇರೆಗೆ ಸಹಕಾರ ಇಲಾಖೆಯ ಅಧಿಕಾರಿಗಳು ಇಂದು ಎಂಸಿಡಿಸಿಸಿ ಬ್ಯಾಂಕ್ ಹುಣಸೂರು ಮತ್ತು ಬಿಳಿಕೆರೆ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬೆಚ್ಚಿ ಬೀಳಿಸುವಂತಹ ಈ ಪ್ರಕರಣ ಬೆಳಕಿಗೆ ಬಂದಿದೆ.
ರಾಮಪ್ಪ ಪೂಜಾರ್‍ರವರ ವೈಯಕ್ತಿಕ ಉಳಿತಾಯ ಖಾತೆ ಸಂಖ್ಯೆ-20313240ಗೆ ಇದೇ ವರ್ಷ ಮಾರ್ಚ್ 22ರಿಂದ ಆಗಸ್ಟ್ 31ರವರೆಗೆ ವಿವಿಧ ದಿನಾಂಕಗಳಂದು ಒಟ್ಟು 26,99,60,719ರೂ. ಜಮೆಯಾಗಿರುವುದು ಕಂಡು ಬಂದಿದೆ. ಅಲ್ಲದೆ ಹುಣಸೂರು ಶಾಖೆಯಲ್ಲಿ ಬಿಳಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊಂದಿರುವ ಖಾತೆ ಸಂಖ್ಯೆ-007024-2032ನಲ್ಲಿ ಚೆಕ್ ಹಾಗೂ ಚಲನ್ ಪಡೆಯದೆ ಜುಲೈ 20 ಮತ್ತು ಜುಲೈ 21ರಂದು ತಲಾ 40 ಲಕ್ಷ ರೂ. ವೆಚ್ಚವನ್ನು ತೋರಿಸಿದ್ದು, ಒಟ್ಟಾರೆ 27,79,60,719ರೂ. ದುರುಪಯೋಗವಾಗಿದೆ ಎಂಬುದು ದಾಖಲೆ ಸಮೇತ ಸಾಬೀತಾಗಿದೆ.
ಅದು ಮಾತ್ರವಲ್ಲದೆ ಬಿಳಿಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಚಾಲ್ತಿ ಖಾತೆ ಸಂಖ್ಯೆ 10329ರ ಚೆಕ್ ನಂ.99047 ಇದನ್ನು ಎಂಸಿಡಿಸಿಸಿ ಬ್ಯಾಂಕ್ ಬಿಳಿಕೆರೆ ಶಾಖೆಯ ಸಂಘದ ಖಾತೆ ಸಂಖ್ಯೆ 1031ಕ್ಕೆ ನಿಯಮಬಾಹಿರವಾಗಿ ವರ್ಗಾಯಿಸಿರುವುದು ಕಂಡು ಬಂದಿದೆ ಹಾಗೂ ಜುಲೈ 21ರಂದು ಬಿಳಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಖಾತೆ ಸಂಖ್ಯೆ-10329ರಿಂದ ಚೆಕ್ ಸಂಖ್ಯೆ-99048ರಲ್ಲಿ 40 ಲಕ್ಷ ರೂ.ಗಳನ್ನು ಸ್ವಂತಕ್ಕೆ ಎಂದು ನಮೂದಿಸಿ ಡ್ರಾ ಮಾಡಿದ್ದು, ಅದಕ್ಕೆ ಸಂಬಂಧಪಟ್ಟ ಚೆಕ್ ಹುಣಸೂರು ಶಾಖೆಯಲ್ಲಿ ಲಭ್ಯವಿಲ್ಲ ಎಂದು ವ್ಯವಸ್ಥಾಪಕ ರಾಮಪ್ಪ ಪೂಜಾರ್ ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣ ದಲ್ಲಿ ರಾಮಪ್ಪ ಪೂಜಾರ್ ಮತ್ತು ಬಿಳಿಕೆರೆ ಶಾಖೆಯ ಮ್ಯಾನೇಜರ್ ಜಿ.ಎಸ್.ನಿರಂಜನ್ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಇದು ಮಾತ್ರವಲ್ಲದೆ ಹುಣಸೂರು ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವಿವಿಧ ದಿನಾಂಕಗಳಂದು ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚಾಲ್ತಿ ಮತ್ತು ಉಳಿತಾಯ ಖಾತೆಗಳಿಂದ ರಾಮಪ್ಪ ಪೂಜಾರ್ ಅವರ ಖಾತೆಗೆ ಹಾಗೂ ರಾಮಪ್ಪ ಪೂಜಾರ್ ಅವರ ಖಾತೆಯಿಂದ ಸಹಕಾರ ಸಂಘಗಳ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕೂಡ ತನಿಖೆ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸಿ, ರಾಮಪ್ಪ ಪೂಜಾರ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂಸಿಡಿಸಿಸಿ ಬ್ಯಾಂಕ್‍ಗೆ ಸಹಕಾರ ಸಂಘಗಳ ಅಧಿಕಾರಿಗಳಿಂದ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಅಪೆಕ್ಸ್ ಬಾಂಕ್‍ನಿಂದ ಎಂಸಿಡಿಸಿಸಿ ಬ್ಯಾಂಕ್ ಪಡೆದಿರುವ ಸಾಲವನ್ನು ಮರುಪಾವತಿಸಲು ಹೆಣಗಾಡುತ್ತಿದೆ. ಮಾತ್ರವಲ್ಲದೆ ರೈತರಿಗೆ ಸೂಕ್ತ ಸಮಯದಲ್ಲಿ ಸಾಲ ನೀಡಲು ಸಹ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ನಡುವೆಯೇ ಕೋಟ್ಯಾಂತರ ರೂ. ಅವ್ಯವಹಾರವಾಗಿರುವುದು ಬಯಲಾಗಿದೆ.