ಕೊಡಗು

ಪೇಜಾವರ ಶ್ರೀಗಳ ನೆಚ್ಚಿನ ಕ್ಷೇತ್ರ ಭಾಗಮಂಡಲ

December 30, 2019
  • ಪ್ರಾಕೃತಿಕ ವಿಕೋಪ ಕಂಡು ಕಣ್ಣೀರಿಟ್ಟಿದ್ದ ಶ್ರೀಗಳು
  • ಗುರುವರ್ಯರ ನಿಧನಕ್ಕೆ ಜಿಲ್ಲೆಯ ಜನರ ಕಂಬನಿ

ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನಕ್ಕೆ ಕೊಡಗು ಜಿಲ್ಲೆಯೂ ಕಂಬನಿ ಮಿಡಿದಿದೆ. ಕಾವೇರಿ ತವರು ಕೊಡಗು ಜಿಲ್ಲೆಯೊಂದಿಗೆ ತಮ್ಮ ಅವಿನಾಭಾವ ಸಂಬಂಧ ಹೊಂದಿದ್ದ ಶ್ರೀಗಳು, ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸಂದರ್ಭದಲ್ಲಿ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಕೊಡಗು ಜಿಲ್ಲೆ ಮತ್ತೆ ತನ್ನ ಗತ ವೈಭವಕ್ಕೆ ಮರಳಲಿ ಎಂದು ಉಡುಪಿ ಮಠದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದರು. ಕೊಡಗು ಜಿಲ್ಲೆಯೊಂದಿಗೆ ಶ್ರೀಗಳು ವಿಷೇಶ ಪ್ರೀತಿ ಹೊಂದಿದ್ದು, ಹಲವು ಬಾರಿ ಕಾವೇರಿಯ ತವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು.

ಕೊಡಗಿನಲ್ಲಿಯೂ ಅಪಾರ ಸಂಖ್ಯೆಯಲ್ಲಿದ್ದ ಪೇಜಾವರ ಶ್ರೀಗಳ ಭಕ್ತವೃಂದ ತಮ್ಮ ನೆಚ್ಚಿನ ಗುರುವರ್ಯರ ಅಗಲಿಕೆಗೆ ಶೋಕತಪ್ತರಾಗಿದ್ದಾರೆ. ಪ್ರಕೃತಿ ರಮಣೀಯ ಕೊಡಗಿನ ನಿಸರ್ಗದಲ್ಲಿಯೇ ದೈವಸಾನಿಧ್ಯವಿದೆ ಎಂದು ಹೇಳುತ್ತಿದ್ದ ಶ್ರೀಗಳು ಕಳೆದ ವರ್ಷ ಮಹಾಮಳೆಯಿಂದಾಗಿ ಕೊಡಗಿನ ಬೆಟ್ಟಗುಡ್ಡ ಕುಸಿದು ಬಿದ್ದಾಗ ಆ ದೃಶ್ಯವನ್ನು ನೋಡಿ ಕಣ್ಣೀರು ಮಿಡಿದ್ದಿದರು. ಮಡಿಕೇರಿ ಬಳಿಯ ಉದಯಗಿರಿಗೆ ಶ್ರೀಗಳು ಅನಾರೋಗ್ಯದ ನಡುವೇ ತೆರಳಿ ಬೆಟ್ಟ ಕುಸಿದಿರುವುದನ್ನು ನೋಡಿ ಮಕ್ಕಳಂತೆ ಗಳಗಳನೆ ಕಣ್ಮೀರಿಟ್ಟಿದ್ದರು.

ಮಠದ ಶಾಖೆ ತೆರೆಯುವ ಬಯಕೆ ಹೊಂದಿದ್ದರು: ಭಗಂಡ ಕ್ಷೇತ್ರವಾದ ಭಾಗಮಂಡಲ ಪೇಜಾವರ ಶ್ರೀಗಳ ನೆಚ್ಚಿನ ಧಾರ್ಮಿಕ ಕ್ಷೇತ್ರವಾಗಿತ್ತು. ಇಲ್ಲಿ ಮಠದ ಶಾಖೆಯೊಂದನ್ನು ತೆರೆಯುವ ಉದ್ದೇಶವೂ ಪೇಜಾವರ ಶ್ರೀಗಳಿಗೆ ಇತ್ತು. ಇದಕ್ಕಾಗಿಯೇ ಮಂಗಳೂರಿನ ಉದ್ಯಮಿಯೋರ್ವರು ಭಾಗ ಮಂಡಲದಲ್ಲಿನ ಜಾಗವನ್ನು ಕೊಡುಗೆಯಾಗಿ ಮಠಕ್ಕೆ ನೀಡಿದ್ದರು. ಮುಂದಿನ ವರ್ಷ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮಠದ ನೂತನ ಶಾಖೆ ಪ್ರಾರಂಭಿಸುವುದಾಗಿ ಹೇಳಿದ್ದ ಸ್ವಾಮೀಜಿ ಅದಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆ ಕೈಗೊಂಡಿದ್ದರು.

ಹಲವು ಬಾರಿ ಭೇಟಿ: 1971ರಲ್ಲಿ ಉಡುಪಿ ಯಲ್ಲಿ ನಡೆದ ವಿಶ್ವ ಹಿಂದೂ ಸಮಾವೇಶದಲ್ಲಿ ಕೊಡಗು ಜಿಲ್ಲೆಯ ಹಲವು ಪ್ರಮುಖರು ಪಾಲ್ಗೊಂ ಡಿದ್ದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದ ಕೊಡಗು ಜಿಲ್ಲೆಯ ಪ್ರಮುಖರಿಗೆ ಮಡಿಕೇರಿಯಲ್ಲಿ ಒಂದು ಸ್ವಯಂ ಸೇವಾ ಆಸ್ಪತ್ರೆಯನ್ನು ನಿರ್ಮಿಸುವಂತೆ ಸಲಹೆ ನೀಡಿದ್ದರು. ಶ್ರೀಗಳ ಸಲಹೆಯಿಂದ ಪ್ರಭಾವಿತರಾದ ಕೆಲವರು 1971-72ರಲ್ಲಿ ಒಂದು ಟ್ರಸ್ಟ್ ರಚಿಸಿ, ಆಸ್ಪತ್ರೆ ಕಟ್ಟಲು ಮುಂದಡಿ ಇಟ್ಟಿದ್ದರು. ಮೊದಲ ಬಾರಿಗೆ ಅಂದರೆ 1973ರಲ್ಲಿ ಮಡಿಕೇರಿಗೆ ಬಂದ ಸ್ವಾಮಿಗಳು, ಜಿಲ್ಲೆಯ ದಾನಿಗಳು ಆಸ್ಪತ್ರೆಯ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯ ನೀಡು ವಂತೆ ಕರೆ ನೀಡಿದ್ದರು. 1973ರಲ್ಲಿ ಆಸ್ಪತ್ರೆಯ ಆವರಣದಲ್ಲಿ ಗಣಪತಿ ದೇವಾ ಲಯಕ್ಕೂ ಶ್ರೀಗಳು ಭೂಮಿ ಪೂಜೆ ನೆರವೇರಿಸಿದ್ದರು.

1977 ನವೆಂಬರ್ 18ರಂದು ಮಡಿಕೇರಿಗೆ ಬಂದಿದ್ದ ಸ್ವಾಮಿಗಳು ಬಸ್ ಡಿಪ್ಪೋ ಹಿಂದಿನ ಪ್ರದೇಶದಲ್ಲಿ ಅಶ್ವಿನಿ ಆಸ್ಪತ್ರೆಯ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ಶುಭ ಹಾರೈಸಿದ್ದರು. 1987ರಲ್ಲಿ ಅಶ್ವಿನಿ ಆಸ್ಪತ್ರೆಯ ದಶಮಾನೋತ್ಸವ ಸಮಾರಂಭದ ಸಂದರ್ಭ ಆಸ್ಪತ್ರೆಯ ಟ್ರಸ್ಟಿಗಳು ಶ್ರೀಗಳನ್ನು ಭೇಟಿಯಾ ದಾಗ ದೃಷ್ಟಿ ದಾನ ಸರ್ವ ಶ್ರೇಷ್ಟವಾದ ದಾನವಾಗಿದ್ದು, ಆಸ್ಪತ್ರೆಯ ದಶಮಾನೋತ್ಸವವನ್ನು ಆ ರೀತಿ ಯಾಗಿ ಆಚರಿಸುವಂತೆ ಸಲಹೆ ನೀಡಿದ್ದರು.

ಶ್ರೀಗಳ ಸಲಹೆಯಂತೆ ಅಶ್ವಿನಿ ಆಸ್ಪತ್ರೆ ಕಳೆದ 31 ವರ್ಷಗಳಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ವನ್ನು ನಡೆಸಿಕೊಂಡು ಬರುತ್ತಿದೆ. ಬಳಿಕ 1988ರಲ್ಲಿ ವಿಶ್ವ ಹಿಂದೂ ಪರಿಷತ್‍ನ ಕಾರ್ಯಕ್ರಮಕ್ಕೂ ಮಡಿಕೇರಿಗೆ ಬಂದಿದ್ದ ಪೇಜಾವರ ಸ್ವಾಮಿಗಳು, ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಆಶೀರ್ವಚನ ನೀಡಿದ್ದರು. 1992ರಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಘಟಕಕ್ಕೂ ಪೂಜೆ ನರೆವೇರಿಸುವ ಮೂಲಕ ಚಾಲನೆ ನೀಡಿದ್ದರು. ಅದರೊಂದಿಗೆ ಆರೋಗ್ಯ ಸೇವೆಯಲ್ಲೂ ಭಗವಂತನ ಇರುವಿಕೆ ಯನ್ನು ಪೇಜಾವರ ಸ್ವಾಮಿಗಳು ಪ್ರತಿಪಾದಿಸಿದ್ದರು.

ಕೊಡಗು ಜಿಲ್ಲೆ ಸತತ 2 ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಹಿನೆÀ್ನಲೆಯಲ್ಲಿ ಕೆಲ ತಿಂಗಳ ಹಿಂದೆ ತಮ್ಮ ಅನಾರೋಗ್ಯದ ನಡುವೆಯೇ ಭಾಗ ಮಂಡಲ ಮತ್ತು ತಲಕಾವೇರಿಗೆ ಆಗಮಿಸಿದ್ದರು. ಭಾಗಮಂಡಲ ಭಗಂಡ ಸನ್ನಿಧಿ ಮತ್ತು ತಲ ಕಾವೇರಿಯ ತೀರ್ಥ ಕುಂಡಿಕೆ ಹಾಗೂ ಅಲ್ಲಿರುವ ದೇವರ ಗುಡಿಗಳಲ್ಲಿ ಶ್ರೀಗಳು ಪೂಜೆ ಸಲ್ಲಿಸಿದ್ದರು. ಕೊಡಗು ಜಿಲ್ಲೆಗೆ ಪ್ರಕೃತಿ ಕರುಣೆ ತೋರಲಿ ಎಂದು ಪ್ರಾರ್ಥಿಸಿದ್ದರು. ತದನಂತರ ಪ್ರಾಕೃತಿಕ ವಿಕೋಪ ದಿಂದ ನಾಮಾವಶೇಷವಾದ ಮಕ್ಕಂದೂರು ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಯನ್ನು ಖುದ್ದಾಗಿ ಅವಲೋಕಿಸಿದ್ದರು. ಪ್ರಾಕೃತಿಕ ದುರಂತದಿಂದ ನೊಂದ ಕೊಡಗು ಜಿಲ್ಲೆಯ ಜನರು ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲಿ ಎಂದು ಹಾರೈಸಿದ್ದರು.

ಪೂಜ್ಯ ಪೇಜಾವರ ಶ್ರೀಗಳ ಅಗಲಿಕೆ ದುಃಖ ತಂದಿದೆ. ಮಡಿಕೇರಿ ಅಶ್ವಿನಿ ಆಸ್ಪತ್ರೆ ಪೇಜಾವರ ಶ್ರೀಗಳ ಸಲಹೆಯಂತೆ 1977ರಲ್ಲಿ ಕಾರ್ಯರಂಭ ಮಾಡಿದೆ. ಅವರು ನೀಡಿದ ಮಾರ್ಗದರ್ಶನದಂತೆ ಆಸ್ಪತ್ರೆಯ ದಶಮಾನೋತ್ಸವದ ಅಂಗವಾಗಿ 1987ರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಗಳ ಹಾರೈಕೆ, ಮಾರ್ಗದರ್ಶನದಂತೆ ನೂರಾರು ಬಡ ರೋಗಿಗಳಿಗೆ ದೃಷ್ಟಿ ದಾನ ನೀಡುವ ಮೂಲಕ ಹೊಸ ಬದುಕು ಕಲ್ಪಿಸಲಾಗಿದೆ.
-ಡಾ.ಕುಲಕರ್ಣಿ, ಮುಖ್ಯ ಶಸ್ತ್ರ ಚಿಕಿತ್ಸಕರು, ಅಶ್ವಿನಿ ಆಸ್ಪತ್ರೆ.

ಕೊಡಗು ಜಿಲ್ಲೆಯ ಪ್ರಾಕೃತಿಕ ವಿಕೋಪದ ದೃಶ್ಯವನ್ನು ಕಂಡು ಶ್ರೀಗಳು ಕಂಬನಿ ಮಿಡಿದಿದ್ದರು. ಕುಸಿದ ಬೆಟ್ಟ, ನಾಮಾವಶೇಷವಾದ ಭತ್ತದ ಗದ್ದೆಗಳು ಮುರಿದು ಬಿದ್ದಿದ್ದ ಮನೆಗಳನ್ನು ಕಂಡು ಗುರುಗಳ ಮನಸಿಗೆ ಅತೀವ ನೋವಾಗಿತ್ತು. ಉದಯಗಿರಿಯಲ್ಲಿ ಬೆಟ್ಟ ಕುಸಿತವನ್ನು ನೋಡಿ ಕಣ್ಣೀರು ಸುರಿಸಿದ್ದರು.
-ಬಾಲಾಜಿ ಕಶ್ಯಪ್, ಶ್ರೀಗಳ ನಿಕಟವರ್ತಿ

ಪೇಜಾವರ ಶ್ರೀಗಳು ಭಾಗಮಂಡಲದಲ್ಲಿ ಮಠದ ಶಾಖೆಯನ್ನು ತೆರೆಯಬೇಕೆಂದು ಬಯಸಿದ್ದರು. ಮಂಗಳೂರಿನ ಉದ್ಯಮಿಯೊಬ್ಬರು ಭಾಗಮಂಡಲದಲ್ಲಿ ತಮ್ಮ ಹೆಸರಲ್ಲಿದ್ದ ಭೂಮಿಯನ್ನು ಮಠದ ಶಾಖೆಗಾಗಿ ದಾನ ಮಾಡಿದ್ದರು. ಮಠದ ಶಾಖೆ ತೆರೆಯುವ ಬಗ್ಗೆ ಶ್ರೀಗಳು ಕಾರ್ಯೋನ್ಮುಖರಾಗಿದ್ದರು.
-ಸಂಪತ್‍ಕುಮಾರ್, ಶ್ರೀಗಳ ನಿಕಟವರ್ತಿ

Translate »