ಮೈಸೂರು

ನಾವು ಓಟು ಮಾಡುತ್ತೇವೆ… ನೀವೂ ತಪ್ಪದೇ ಓಟು ಮಾಡಿ…

April 13, 2019

ಮೈಸೂರು: ನಿಮ್ಮ ಮತ ನಿಮ್ಮ ಹಕ್ಕು, ಆಮಿಷಕ್ಕೆ ಒಳಗಾಗ ಬೇಡಿ, ತಪ್ಪದೇ ಮತ ಚಲಾಯಿಸಿ ಎಂಬ ಘೋಷಣೆಗಳುಳ್ಳ ಭಿತ್ತಿ ಪತ್ರಗಳನ್ನು ಹಿಡಿದಿದ್ದ ನೂರಾರು ವಿಕಲಚೇತನರು ಶುಕ್ರವಾರ ಮೈಸೂರಿನಲ್ಲಿ ಜಾಥಾ ನಡೆಸುವ ಮೂಲಕ ಮತಜಾಗೃತಿ ಉಂಟು ಮಾಡಿದರು.

ಮೈಸೂರಿನ ಟಿ.ಕೆ.ಲೇಔಟ್‍ನ ಬಿಸಿಲು ಮಾರಮ್ಮ ದೇವ ಸ್ಥಾನದ ಬಳಿಯಿಂದ ಎಸ್‍ಜೆಸಿಇ ರಸ್ತೆಯಲ್ಲಿ ಸಾಗಿದ ಜಾಥಾ ಎಸ್‍ಜೆಸಿಇ ಕ್ಯಾಂಪಸ್‍ನಲ್ಲಿರುವ ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಆವರಣದಲ್ಲಿ ಅಂತ್ಯಗೊಂಡಿತು.

ಸ್ವೀಪ್ ಮೈಸೂರು, ಮಹಾನಗರ ಪಾಲಿಕೆ, ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಹಾಗೂ ಇತರೆ ವಿಕಲ ಚೇತನ ಸಂಸ್ಥೆಗಳ ಸಹಯೋಗ ಮತ ಜಾಗೃತಿ ಜಾಥಾ ಏರ್ಪಡಿಸಲಾ ಗಿತ್ತು. ಬಿಳಿಯ ಟೋಪಿ ಧರಿಸಿದ್ದ ವಿಕಲಚೇತ ನರು, ನಾವೆಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುತ್ತೇವೆ. ಮತದಾನ ನಮ್ಮ ಹಕ್ಕು. ನೀವು ಮತ ಚಲಾಯಿಸಿ, ಪ್ರಜಾ ಪ್ರಭುತ್ವವನ್ನು ಸಂರಕ್ಷಿಸಿ ಎಂಬ ಸಂದೇಶ ಸಾರಿದರು.

ನಂತರ ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಆವರಣ ದಲ್ಲಿ ನಡೆದ ಮತದಾನದ ಅರಿವು ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್‍ಮಠ್ ಮಾತನಾಡಿ, ಲೋಕ ಸಭಾ ಚುನಾವಣೆಯ ಮತದಾನ ದಲ್ಲಿ ಕೋಟಿ ಕೋಟಿ ಜನರು ಭಾಗವಹಿಸುವ ಬಹು ದೊಡ್ಡ ಹಬ್ಬ. ಇಲ್ಲಿ ಪ್ರಜೆಗಳೇ ರಾಜರು. ಪ್ರತಿಯೊಬ್ಬರೂ ಮತ ಚಲಾಯಿಸುವ ಅತೀ ಮಹತ್ವದ ಹಕ್ಕನ್ನು ಭಾರತದ ಸಂವಿಧಾನ ನೀಡಿದೆ. ಉತ್ತಮ ಸರ್ಕಾರ ಇದ್ದರೆ ದೇಶದ ಬದಲಾವಣೆ ಸಾಧ್ಯವಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಮಹಾನಗರಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್, ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಜಿ. ಸಂಗಮೇಶ್ವರ, ಮೈಸೂರು ವಿವಿ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಘದ ಮುಖ್ಯಸ್ಥ ಕೃಷ್ಣ ಆರ್. ಹೊಂಬಾಳ್, ಅಂತಾರಾಷ್ಟ್ರೀಯ ಕ್ರೀಡಾಪಟು ರಾಮಚಂದ್ರ, ಪಾಲಿಕೆ ವಲಯ ಕಚೇರಿ 6ರ ಹೆಚ್ಚುವರಿ ಆಯುಕ್ಷೆ ಕುಸುಮಾ ಕುಮಾರಿ, ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಇಳಂಗೋವನ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಇನ್ನಿತರರು ಉಪಸ್ಥಿತರಿದ್ದರು.

Translate »