ಮೈಸೂರು

ಜೆ.ಪಿ.ನಗರದಲ್ಲಿ ಮಹಿಳೆಯ ಸರ ಅಪಹರಣ

June 21, 2020

ಮೈಸೂರು, ಜೂ. 20(ಆರ್‍ಕೆ)- ಹಾಡಹಗಲೇ ಖದೀಮರು, ತಾಯಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕೊರಳಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿ ರುವ ಘಟನೆ ಮೈಸೂರಿನ ಜೆ.ಪಿ. ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮೈಸೂರಿನ ಜೆ.ಪಿ. ನಗರ ನಿವಾಸಿ ಸಂಜೀವ ಮೂರ್ತಿ ಅವರ ಪತ್ನಿ ಶ್ರೀಮತಿ ಮಮತಾ(39) ಎಂಬುವರೇ ಚಿನ್ನದ ಸರ ಕಳೆದುಕೊಂಡವರು. ಪಕ್ಕದಲ್ಲಿರುವ ಸಿದ್ದಲಿಂಗೇಶ್ವರ ಬಡಾವಣೆಯ ತಮ್ಮ ತಾಯಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಯಮಹಾ ಕ್ರಕ್ಸ್ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ಮಾಸ್ಕ್‍ಧಾರಿಗಳು, ಮಧ್ಯಾಹ್ನ 12.45 ಗಂಟೆ ವೇಳೆ ಮಮತಾ ಅವರ ಕೊರಳಿನಿಂದ 55 ಗ್ರಾಂ ತೂಕದ ಮಾಂಗಲ್ಯ ಸರ ಎಗರಿಸಿ ಪರಾರಿಯಾದರು. ವಿಷಯ ತಿಳಿಯುತ್ತಿದ್ದಂತೆಯೇ ಅದೇ ಮಾರ್ಗ ಬರುತ್ತಿದ್ದ ಕಾರು ಚಾಲಕನೋರ್ವ ಬೆನ್ನತ್ತಿ ಸಿದ್ದಲಿಂಗೇಶ್ವರ ಬಡಾವಣೆಯ ಪೆಟ್ಟಿಗೆ ಅಂಗಡಿ ಸಮೀಪ ಬೈಕ್‍ಗೆ ಡಿಕ್ಕಿ ಹೊಡೆದರಾದರೂ, ಕೆಳಕ್ಕೆ ಬಿದ್ದ ಖದೀಮರು ಲಾಂಗ್ ತೋರಿಸಿ ಸ್ಥಳದಿಂದ ಕಾಲ್ಕಿತ್ತರು.

ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು, ಮಹಜರು ನಡೆಸಿದರಲ್ಲದೆ, ವಾಕಿಟಾಕಿ ಮೂಲಕ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸಿದರಾದರೂ, ಸರಗಳ್ಳರು ಪತ್ತೆಯಾಗಲಿಲ್ಲ.

ಘಟನೆ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಎಲ್ಲಾ ಠಾಣೆಗಳ ಪೊಲೀಸರು ಬೀದಿಗಿಳಿದು ಕಾರ್ಯಾಚರಣೆ ನಡೆಸಿ ಯಮಹಾ ಬೈಕ್ ಸವಾರರ ಮೇಲೆ ನಿಗಾ ವಹಿಸಿದರಾದರೂ, ಪ್ರಯೋಜನವಾಗಲಿಲ್ಲ. ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.

Translate »