ಕಳುವಾಗಿದ್ದ ಲಾರಿ ವಶ: ಇಬ್ಬರು ಖದೀಮರ ಸೆರೆ
ಮೈಸೂರು

ಕಳುವಾಗಿದ್ದ ಲಾರಿ ವಶ: ಇಬ್ಬರು ಖದೀಮರ ಸೆರೆ

June 21, 2020

ಮೈಸೂರು, ಜೂ.20(ಆರ್‍ಕೆ)-ಖದೀಮರಿಬ್ಬರನ್ನು ಬಂಧಿಸಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು, ಕಳುವಾಗಿದ್ದ ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು, ಗೆಜ್ಜಲಗೆರೆ ಗ್ರಾಮದ ಲೇಟ್ ನಾರಾಯಣ ಗೌಡ ಅವರ ಮಗ ಗೋವಿಂದ ಹಾಗೂ ಕೋಣಶಾಲೆ ಗ್ರಾಮದ ಕೆ.ಎಸ್. ಇಂದೂಶೇಖರ್ ಅವರ ಮಗ ರತನ್ ಶೇಖರ್ ಬಂಧಿತ ಆರೋಪಿಗಳು. ಮೇ 29ರಂದು ಮೈಸೂರಿನ ನಂಜನಗೂಡು ರಸ್ತೆಯಲ್ಲಿ ರುವ ಎಪಿಎಂಸಿ ಪೆಟ್ರೋಲ್ ಬಂಕ್‍ನಲ್ಲಿ ನಿಲ್ಲಿಸಿದ್ದ ವಿ.ಮಹೇಶ್ ಎಂಬುವರಿಗೆ ಸೇರಿದ ಲಾರಿ (ಕೆಎ 17, ಎ-5335)ಯನ್ನು ಈ ಖದೀಮರು ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಲಾರಿ ಪತ್ತೆಗೆ ತನಿಖಾ ತಂಡ ರಚಿಸಿದ್ದರು.

ಸಬ್ ಇನ್‍ಸ್ಪೆಕ್ಟರ್ ವಿ.ಸಿ.ವನರಾಜು ಅವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದಾಗ ಇಂದು ಬೆಳಗ್ಗೆ 6 ಗಂಟೆ ವೇಳೆ ಬಂಡಿಪಾಳ್ಯದ ಶ್ರೀ ಶನೇಶ್ಚರಸ್ವಾಮಿ ದೇವಸ್ಥಾನದ ಬಳಿ ಗೋವಿಂದ ಮತ್ತು ರತನ್‍ಶೇಖರ್ ಸಿಕ್ಕಿಬಿದ್ದರು. ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಲಾರಿಯನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿಗಳು ಅದನ್ನು ಇರಿಸಿರುವ ಸ್ಥಳ ತೋರಿಸಿದರು. ಪತ್ತೆ ಕಾರ್ಯಾಚರಣೆಯಲ್ಲಿ ಸಬ್ ಇನ್‍ಸ್ಪೆಕ್ಟರ್‍ಗಳಾದ ವನರಾಜು, ಮಹೇಶ್‍ಕುಮಾರ್, ಎಎಸ್‍ಐ ಶಿವಕುಮಾರ್, ಸಿಬ್ಬಂದಿಗಳಾದ ಜಹೂರ್ ಅಹಮದ್, ನಂಜುಂಡಸ್ವಾಮಿ, ಸತೀಶ್, ತಿಮ್ಮಯ್ಯ, ರಾಜು ಹಾಗೂ ಸುರೇಶ್ ಭಾಗವಹಿಸಿದ್ದರು.

Translate »