ಮೈಸೂರು

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ವ್ಯಕ್ತಿ ಸಾವು

December 4, 2020

ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ಘಟನೆ

ಮೈಸೂರು, ಡಿ.3(ಆರ್‍ಕೆ)-ಕಾರೊಂದು ವಿದ್ಯುತ್ ಕಂಭಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಮೈಸೂರಿನ ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಬುಧವಾರ ಮಧ್ಯ ರಾತ್ರಿ ಸಂಭವಿಸಿದೆ. ಮೂಲತಃ ಹಾಸನ ಜಿಲ್ಲೆಯವರಾದ ಮೈಸೂರಿನ ಬೋಗಾದಿ ನಿವಾಸಿ ಚಿರಂಜೀವಿ (34) ಸಾವನ್ನಪ್ಪಿದವರು. ಕಾರಿನಲ್ಲಿದ್ದ ಅಜೀಜ್ ಅಹಮದ್ ಮತ್ತು ಪುನೀತ್ ಎಂಬು ವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೇಂಟ್ ಜೋಸೆಫ್ ಕಾಲೇಜು ಕಡೆಯಿಂದ ಫೋರ್ಡ್ ಫಿಎಸ್ಟಾ ಕಾರಿನಲ್ಲಿ ಕಲಾಮಂದಿರದ ಕಡೆಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು, ಮಧ್ಯ ರಾತ್ರಿ ಸುಮಾರು 1.15 ಗಂಟೆ ವೇಳೆಗೆ ಪಡುವಾರಹಳ್ಳಿ 4ನೇ ಮೇನ್ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಉರುಳಿ ಬಿದ್ದಿದೆ.

ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ಚಿರಂಜೀವಿ ತೀವ್ರವಾಗಿ ಗಾಯ ಗೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಅವರನ್ನು ಬೃಂದಾವನ ಆಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 6 ಗಂಟೆ ವೇಳೆಗೆ ಚಿರಂಜೀವಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡಿರುವ ಅಜೀಜ್ ಮತ್ತು ಪುನೀತ್, ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಅರುಣ ಕುಮಾರಿ ಅವರು ಕಾರನ್ನು ವಶಪಡಿಸಿಕೊಂಡಿದ್ದಾರೆ.

Translate »