ಮೈಸೂರು: ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ಸಾರಿಗೆ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಸಮೀಪ ಹುಣಸೂರು ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಹುಣಸೂರು ತಾಲೂಕಿನ ಮಧುಗಿರಿಕೊಪ್ಪಲು ನಿವಾಸಿ ನಂಜಪ್ಪಾಚಾರಿ ಅವರ ಮಗ ದೇವರಾಜಚಾರಿ(25) ಸಾವನ್ನಪ್ಪಿದವರು. ಬೆಳವಾಡಿ ಬಳಿಯ ಟೈಟನ್ ವಾಲ್ವ್ ಉದ್ಯೋಗಿಯಾಗಿದ್ದ ಅವರು, ಬೈಕ್ (ಕೆಎ 45, ವೈ 7119)ನಲ್ಲಿ ಬರುತ್ತಿದ್ದಾಗ ಹುಣಸೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಮಂಡ್ಯ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿಬಸ್ (ಕೆಎ 11, ಎಫ್ 0421) ಬಿಳಿಕೆರೆ ಸಮೀಪ ಕೀರ್ತಿ ಡಾಬಾ ಬಳಿ ಬೆಳಿಗ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ನಿಯಂತ್ರಣ ಕಳೆದುಕೊಂಡು ಬಲ ಭಾಗಕ್ಕೆ ಬಿದ್ದ ದೇವರಾಜಾಚಾರಿ ಅವರ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದು, ಸ್ಥಳದಲ್ಲೇ ಸಾವನ್ನಪ್ಪಿದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಹುಣಸೂರು ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಸಿ.ಪೂವಯ್ಯ ಹಾಗೂ ಸಿಬ್ಬಂದಿ ಮಹಜರು ನಡೆಸಿ, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ಬಿಳಿಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.